
ಬೆಂಗಳೂರು, 02 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿಜೆಪಿ ವಿರುದ್ಧ ಪ್ರತಿತಂತ್ರ ರೂಪಿಸುವ ಬದಲು ಬಿಜೆಪಿ ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಿ, ಜನಪರ ಆಡಳಿತ ನಡೆಸಬೇಕು ಎಂದು ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಆಗ್ರಹಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಹೇಳಿಕೆ ನೀಡಿರುವ ಅವರು, ಬಿಜೆಪಿ ನಡೆಸುತ್ತಿರುವ ಪಾದಯಾತ್ರೆ ಜನರ ಪರವಾಗಿ ಧ್ವನಿ ಎತ್ತಲು ಮತ್ತು ಸರ್ಕಾರದ ಮುಂದೆ ಜನರ ಪ್ರಶ್ನೆಗಳನ್ನು ಇಡಲು ಎಂದು ತಿಳಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿದರೂ ಸಮಸ್ಯೆ ಬಗೆಹರಿದಿಲ್ಲ. ಲೂಟಿಯಾಗಿರುವ ₹187 ಕೋಟಿ ಇನ್ನೂ ಸರ್ಕಾರದ ಖಜಾನೆಗೆ ಬಂದಿಲ್ಲ. ಆ ಹಣ ಎಲ್ಲಿದೆ ಎಂಬುದನ್ನು ಮುಖ್ಯಮಂತ್ರಿ ಸ್ಪಷ್ಟಪಡಿಸಿ, ಹಣವನ್ನು ಖಜಾನೆಗೆ ವಾಪಸ್ ತರಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ₹7,500 ಕೋಟಿ ಬಾಕಿ ಏನಾಯಿತು ಎಂಬುದಕ್ಕೂ ಸರ್ಕಾರ ಉತ್ತರಿಸಬೇಕು. ರಾಜ್ಯದ ತಾಯಂದಿರಿಗೆ ನ್ಯಾಯಯುತವಾಗಿ ಹಣ ತಲುಪಿಸುವ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಭ್ರಷ್ಟಾಚಾರ ಮತ್ತು ಕಮಿಷನ್ ದಂಧೆಯನ್ನು ಬಿಜೆಪಿ ವಿರೋಧಿಸುತ್ತಿದೆ. ಅದನ್ನು ತಡೆಯಲು ಸರ್ಕಾರ ಕ್ರಮ ರೂಪಿಸಬೇಕು. ಅಧಿಕಾರ ನಿಮ್ಮ ಕೈಯಲ್ಲಿದ್ದು, ವಿರೋಧ ಪಕ್ಷದ ವಿರುದ್ಧ ಪ್ರತಿತಂತ್ರ ರೂಪಿಸುವ ಮಾತು ಹಾಸ್ಯಾಸ್ಪದವಾಗಿದೆ. ಮುಂದಿನ ಚುನಾವಣೆಯಲ್ಲಿ ಜನರೇ ಕಾಂಗ್ರೆಸ್‌ನ ದುರಾಡಳಿತದ ವಿರುದ್ಧ ತಂತ್ರ ರೂಪಿಸಲಿದ್ದಾರೆ ಎಂದು ಸಿ.ಟಿ. ರವಿ ಟೀಕಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.