
ಬಾಗಲಕೋಟೆ, 19 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಮಾರ್ಗಮಧ್ಯೆ ವಿದ್ಯಾರ್ಥಿನಿಯರು ಪಾದಚಾರಿಗಳಾಗಿ ಸಾಗುತ್ತಿದ್ದ ವೇಳೆ ಬೀಳಗಿ ಶಾಸಕ ಜಿ.ಟಿ. ಪಾಟೀಲ ಅವರು ತಮ್ಮ ವಾಹನವನ್ನು ನಿಲ್ಲಿಸಿ ವಿದ್ಯಾರ್ಥಿನಿಯರೊಂದಿಗೆ ಆತ್ಮೀಯವಾಗಿ ಮಾತನಾಡಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಬಾದರದಿನ್ನಿ ಗ್ರಾಮದಲ್ಲಿ ನಡೆದಿದೆ.
ಶಾಸಕರು ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ ಅವರ ವಿದ್ಯಾಭ್ಯಾಸ, ಶಾಲಾ ಚಟುವಟಿಕೆ ಹಾಗೂ ಮುಂದಿನ ಗುರಿಗಳ ಕುರಿತು ವಿಚಾರಿಸುತ್ತಿದ್ದ ಸಂದರ್ಭದಲ್ಲಿ, ಕಡುಬಡತನದ ಹಿನ್ನೆಲೆಯ ವಿದ್ಯಾರ್ಥಿನಿಯೊಬ್ಬಳು ತನ್ನ ಮನದಾಳದ ಆಸೆಯನ್ನು ಶಾಸಕರ ಮುಂದೆ ಭಾವುಕರಾಗಿ ಹಂಚಿಕೊಂಡಿದ್ದಾಳೆ.
“ನಾನು ಎಸ್ಎಸ್ಎಲ್ಸಿಯಲ್ಲಿ ಶೇ.100ರಷ್ಟು ಅಂಕಗಳನ್ನು ಪಡೆಯುತ್ತೇನೆ ಸರ್. ಮುಂದೆ ನನ್ನ ವಿದ್ಯಾಭ್ಯಾಸವನ್ನು ನೀವೇ ಮಾಡಿಸಬೇಕು. ನಾನು ಐಎಎಸ್ ಅಧಿಕಾರಿಯಾಗಬೇಕು” ಎಂದು ವಿದ್ಯಾರ್ಥಿನಿ ಕಣ್ಣೀರಿಡುತ್ತಾ ತನ್ನ ಕನಸನ್ನು ಶಾಸಕರ ಮುಂದೆ ಹೇಳಿಕೊಂಡಿದ್ದಾಳೆ.
ವಿದ್ಯಾರ್ಥಿನಿಯ ಮಾತು ಕೇಳಿ ಭಾವುಕರಾದ ಶಾಸಕ ಜಿ.ಟಿ. ಪಾಟೀಲ ಅವರು, ಆಕೆಯ ಶಿಕ್ಷಣದ ಕನಸಿಗೆ ಬೆಂಬಲವಾಗಿ ನಿಲ್ಲುವುದಾಗಿ ಭರವಸೆ ನೀಡಿದ್ದಾರೆ. ವಿದ್ಯಾರ್ಥಿನಿಯ ಕಣ್ಣೀರು ಒರೆಸಿ, ಧೈರ್ಯ ತುಂಬಿದ ಶಾಸಕರು “ಚನ್ನಾಗಿ ಓದಿ, ನಿನ್ನ ಗುರಿ ಸಾಧಿಸಬೇಕು” ಎಂದು ಹುರಿದುಂಬಿಸಿದ್ದಾರೆ.
ಬಡತನವು ತನ್ನ ಶಿಕ್ಷಣಕ್ಕೆ ಅಡ್ಡಿಯಾಗಬಾರದು, ಉತ್ತಮವಾಗಿ ವ್ಯಾಸಂಗ ಮಾಡಿ ಭವಿಷ್ಯದಲ್ಲಿ ಐಎಎಸ್ ಅಧಿಕಾರಿಯಾಗಬೇಕು ಎಂಬ ವಿದ್ಯಾರ್ಥಿನಿಯ ಆತ್ಮವಿಶ್ವಾಸದ ಮಾತುಗಳು ಅಲ್ಲಿದ್ದವರ ಗಮನ ಸೆಳೆದವು. ವಿದ್ಯಾರ್ಥಿನಿಯ ಗುರಿ ಮತ್ತು ಕನಸಿಗೆ ಸ್ಪಂದಿಸಿದ ಶಾಸಕರ ನಡೆ ಸಾರ್ವಜನಿಕರ ಮೆಚ್ಚುಗೆಗೂ ಪಾತ್ರವಾಗಿದೆ.
ಶಿಕ್ಷಣವು ಪ್ರತಿಯೊಬ್ಬ ಮಗುವಿನ ಭವಿಷ್ಯ ರೂಪಿಸುವ ಪ್ರಮುಖ ಸಾಧನವಾಗಿದ್ದು, ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವು ದೊರೆತರೆ ಅವರು ಉನ್ನತ ಗುರಿಗಳನ್ನು ಸಾಧಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಶಾಸಕರು ವಿದ್ಯಾರ್ಥಿನಿಯ ವಿದ್ಯಾಭ್ಯಾಸಕ್ಕೆ ನೆರವಾಗುವುದಾಗಿ ನೀಡಿದ ಭರವಸೆ ಮಹತ್ವ ಪಡೆದುಕೊಂಡಿದೆ.
“ಬಡತನದ ನಡುವೆಯೂ ದೊಡ್ಡ ಕನಸು ಕಾಣುತ್ತಿರುವ ಈ ವಿದ್ಯಾರ್ಥಿನಿ ತನ್ನ ಗುರಿ ಸಾಧಿಸಲಿ. ಉತ್ತಮವಾಗಿ ಓದಿ ಸಮಾಜಕ್ಕೆ ಮಾದರಿಯಾಗಲಿ” ಎಂಬ ಆಶಯವನ್ನು ಗ್ರಾಮಸ್ಥರು ವ್ಯಕ್ತಪಡಿಸಿದ್ದು, ವಿದ್ಯಾರ್ಥಿನಿಗೆ ಶಾಸಕರಿಂದ ದೊರೆತ ಭರವಸೆ ಆಕೆಯ ವಿದ್ಯಾಭ್ಯಾಸಕ್ಕೆ ಹೊಸ ಆತ್ಮವಿಶ್ವಾಸ ತುಂಬಿದೆ.
ಬಾದರದಿನ್ನಿ ಗ್ರಾಮದಲ್ಲಿ ನಡೆದ ಈ ಸರಳ ಭೇಟಿಯು, ವಿದ್ಯಾರ್ಥಿನಿಯೊಬ್ಬಳ ಕನಸಿಗೆ ಜನಪ್ರತಿನಿಧಿಯೊಬ್ಬರು ಸ್ಪಂದಿಸಿದ ಮಾನವೀಯ ಕ್ಷಣವಾಗಿ ಗಮನ ಸೆಳೆದಿದೆ.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande