
ಮಂಡ್ಯ, 19 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಬರಗಾಲದ ಹಿನ್ನೆಲೆಯಲ್ಲಿ ಈ ಬಾರಿ ಶ್ರೀರಂಗಪಟ್ಟಣ ದಸರಾವನ್ನು ಅದ್ದೂರಿತನಕ್ಕೆ ಒತ್ತು ನೀಡದೆ ಸಾಂಪ್ರದಾಯಿಕವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ದಸರಾ ಆಚರಣೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 15ರಿಂದ 18ರವರೆಗೆ ನಾಲ್ಕು ದಿನಗಳ ಕಾಲ ಶ್ರೀರಂಗಪಟ್ಟಣ ದಸರಾ ನಡೆಯಲಿದೆ.
ಅಕ್ಟೋಬರ್ 15ರಂದು ದಸರಾ ಉದ್ಘಾಟನೆ ನೆರವೇರಲಿದ್ದು, ಅಕ್ಟೋಬರ್ 18ರಂದು ಸಮಾರೋಪ ಸಮಾರಂಭ ನಡೆಯಲಿದೆ. ಶ್ರೀರಂಗ ಮೈದಾನದಲ್ಲಿ ವಿವಿಧ ವೇದಿಕೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಮಾಹಿತಿ ನೀಡಿದರು.
ಅಕ್ಟೋಬರ್ 12 ಮತ್ತು 13ರಂದು ಶ್ರೀರಂಗಪಟ್ಟಣದ ಸ್ಟೇಡಿಯಂನಲ್ಲಿ ಯುವ ಸಂಭ್ರಮವನ್ನು ಹೊಸ ರೂಪದಲ್ಲಿ ಹಾಗೂ ವಿಜೃಂಭಣೆಯಿಂದ ಆಯೋಜಿಸಲು ನಿರ್ಧರಿಸಲಾಗಿದೆ. ಯುವ ಸಂಭ್ರಮದಲ್ಲಿ ಸ್ಥಳೀಯ ಮಕ್ಕಳ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಿ, ಅವರನ್ನು ಪ್ರೋತ್ಸಾಹಿಸಲಾಗುವುದು ಎಂದು ಹೇಳಿದರು.
ದಸರಾ ಉದ್ಘಾಟಕರಾಗಿ ಐದು ಹೆಸರುಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ದಸರಾ ಆಚರಣೆಗೆ ಈ ಬಾರಿ ₹5 ಕೋಟಿ ಅನುದಾನ ನೀಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ಕಳೆದ ಬಾರಿ ₹2 ಕೋಟಿ ಅನುದಾನ ನೀಡಲಾಗಿತ್ತು ಎಂದು ಸಚಿವರು ತಿಳಿಸಿದರು.
ಮೈಸೂರು ದಸರಾಕ್ಕಿಂತಲೂ ಪುರಾತನ ಇತಿಹಾಸ ಹೊಂದಿರುವ ಶ್ರೀರಂಗಪಟ್ಟಣ ದಸರಾವನ್ನು ಈ ಬಾರಿ ಬರಗಾಲದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಾಂಪ್ರದಾಯಿಕವಾಗಿ ಆಚರಿಸಲಾಗುವುದು ಎಂದು ಚಲುವರಾಯಸ್ವಾಮಿ ಹೇಳಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R