ಮಲ್ಲಿಕಾರ್ಜುನ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಚಿಂತನೆ: ಬಿ.ಪಿ.ಹರೀಶ್
ಹಕ್ಕುಚ್ಯುತಿ ಮಂಡಿಸುವ ಚಿಂತನೆ: ಬಿ.ಪಿ.ಹರೀಶ್
SS-Mallikarjun-Faces-Privilege-Motion-Threat-BJP-MLA-BP-Harish-Questions-Ministers-Absence-and-Drought-Issue


ದಾವಣಗೆರೆ, 19 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರು ಬಿಜೆಪಿ ಶಾಸಕ ಬಿ.ಪಿ.ಹರೀಶ್ ಅವರ ಬಗ್ಗೆ ಅವಾಚ್ಯ ಪದ ಬಳಕೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಸಚಿವರ ವಿರುದ್ಧ ವಿಧಾನಸಭೆಯಲ್ಲಿ ಹಕ್ಕುಚ್ಯುತಿ ಮಂಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹರಿಹರ ಶಾಸಕ ಬಿ.ಪಿ.ಹರೀಶ್ ಹೇಳಿದರು.

ದಾವಣಗೆರೆಯಲ್ಲಿ ಮಾತನಾಡಿದ ಅವರು, “ಹಕ್ಕುಚ್ಯುತಿ ಮಂಡಿಸುವುದಷ್ಟೇ ಅಲ್ಲ, ಪೊಲೀಸರು ಸಚಿವರ ವಿರುದ್ಧ ಸ್ವಯಂಪ್ರೇರಿತವಾಗಿ (ಸುಮೋಟೋ) ಪ್ರಕರಣ ದಾಖಲಿಸಬೇಕಿತ್ತು” ಎಂದು ಹೇಳಿದರು.

ಬರಪೀಡಿತ ತಾಲೂಕುಗಳ ಎರಡನೇ ಪಟ್ಟಿಯಿಂದ ಜಗಳೂರು ತಾಲೂಕನ್ನು ಕೈಬಿಟ್ಟಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅವರು, “ನಮ್ಮ ಜಿಲ್ಲೆಯಲ್ಲಿ ಅತ್ಯಂತ ಬರಪೀಡಿತ ತಾಲೂಕು ಜಗಳೂರು. ಜಗಳೂರಿಗೆ ಅನ್ಯಾಯವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಎಲ್ಲಿದ್ದಾರೆ?” ಎಂದು ಪ್ರಶ್ನಿಸಿದರು.

“ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರಿಗೆ ಜಿಲ್ಲೆಯ ಹಾಗೂ ರೈತರ ಬಗ್ಗೆ ಕಾಳಜಿ ಇಲ್ಲ. ಸರ್ಕಾರ ಸೆಪ್ಟೆಂಬರ್ 21ರಿಂದ 23ರವರೆಗೆ ಅಧಿವೇಶನ ಕರೆದಿದೆ. ಆದರೆ ಸಚಿವರು ವಿದೇಶದಲ್ಲಿದ್ದಾರೆ. ಅವರು ಎಷ್ಟು ದಿನ ವಿದೇಶದಲ್ಲಿ, ಬೆಂಗಳೂರಿನಲ್ಲಿ, ದಾವಣಗೆರೆಯಲ್ಲಿ ಇದ್ದಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ಜಿಲ್ಲೆಯ ಎಷ್ಟು ತಾಲೂಕುಗಳಿಗೆ ಭೇಟಿ ನೀಡಿದ್ದಾರೆ ಎಂಬುದಕ್ಕೂ ಉತ್ತರ ನೀಡಬೇಕು” ಎಂದು ಆಗ್ರಹಿಸಿದರು.

ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕುರಿತು ಪ್ರಶ್ನಿಸಿದ ಅವರು, “ಎಂ-ಸ್ಯಾಂಡ್ ಘಟಕಗಳವರು ಪ್ರತಿಭಟನೆ ನಡೆಸುತ್ತಿದ್ದಾರೆ. ಗಣಿ ಇಲಾಖೆ ಸಚಿವರು ಎಲ್ಲಿದ್ದಾರೆ? ಸಚಿವರ ಅನುಪಸ್ಥಿತಿಯಿಂದ ಕೆಲಸ ಹಾಗೂ ಅಭಿವೃದ್ಧಿ ಕಾರ್ಯಗಳು ನಿಲ್ಲುವಂತಾಗಿದೆ” ಎಂದು ಆರೋಪಿಸಿದರು.

“ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಹೋರಾಟಕ್ಕೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸದನದಲ್ಲಿ ಸಚಿವರ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಹಿರಿಯ ಸಚಿವರು ಉತ್ತರಿಸುವ ಪರಿಸ್ಥಿತಿ ಇದೆ. ಸಚಿವರು ಎಷ್ಟು ದಿನ, ಎಷ್ಟು ಗಂಟೆ ಸದನದಲ್ಲಿ ಹಾಜರಾಗುತ್ತಾರೆ? ಸದನಕ್ಕೆ ಬರದವರನ್ನು ಇನ್ನೂ ಏಕೆ ಸಚಿವರಾಗಿ ಮುಂದುವರಿಸುತ್ತೀರಿ?” ಎಂದು ಹರೀಶ್ ಪ್ರಶ್ನಿಸಿದರು.

“ಜನಸಾಮಾನ್ಯರೊಂದಿಗೆ ಇರುವ ಬಸವಂತಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ನೀಡಬೇಕು ಎಂದು ಈ ಹಿಂದೆಯೇ ಹೇಳಿದ್ದೆ. ಎಸ್.ಎಸ್.ಮಲ್ಲಿಕಾರ್ಜುನ ಹೇಗೆ ಸಚಿವರಾದರು ಎಂಬುದು ಎಲ್ಲರಿಗೂ ಗೊತ್ತಿದೆ. ಇಂತಹ ವಿಚಾರಗಳಿಂದ ಕಾಂಗ್ರೆಸ್ ಪಕ್ಷಕ್ಕೂ ಹಾಗೂ ಜಿಲ್ಲೆಗೂ ನಷ್ಟವಾಗುತ್ತಿದೆ” ಎಂದು ಅವರು ಹೇಳಿದರು.

“ನಮ್ಮ ಜಿಲ್ಲೆಗೆ ಏಕೆ ವಿಷ ಕೊಡುತ್ತಿದ್ದೀರಿ ಎಂಬುದಕ್ಕೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಅವರೇ ನೇರವಾಗಿ ಉತ್ತರಿಸಬೇಕು” ಎಂದು ಬಿ.ಪಿ.ಹರೀಶ್ ಸವಾಲು ಹಾಕಿದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande