
ವಿಜಯಪುರ, 19 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ವಿಜಯಪುರ ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಗದತಂತ್ರ ವಿಭಾಗದ ವತಿಯಿಂದ ವಿಶ್ವ ರೇಬಿಸ್ ದಿನದ ಅಂಗವಾಗಿ ಶನಿವಾರ ಕಾಲೇಜು ಆವರಣದಲ್ಲಿ ವಿಶೇಷ ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾ ಹಮ್ಮಿಕೊಳ್ಳಲಾಯಿತು.
ರೇಬೀಸ್ ವೈರಾಣು ಹರಡುವ ವಿಧಾನ, ರೋಗಪೀಡಿತ ಸಾಕು ನಾಯಿಗಳು ಹಾಗೂ ಬೀದಿ ನಾಯಿಗಳಿಂದ ಎದುರಾಗಬಹುದಾದ ಅಪಾಯಗಳು ಮತ್ತು ರೇಬೀಸ್ನಿಂದ ರಕ್ಷಿಸಿಕೊಳ್ಳಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಕಾಲೇಜು ಆವರಣದಿಂದ ನಗರದ ಕೇಂದ್ರ ಬಸ್ ನಿಲ್ದಾಣದವರೆಗೆ ಜಾಗೃತಿ ಜಾಥಾ ನಡೆಸಲಾಯಿತು. ಜಾಥಾದಲ್ಲಿ ಮಹಾವಿದ್ಯಾಲಯದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಭಾಗವಹಿಸಿ, ಸಾರ್ವಜನಿಕರಿಗೆ ರೇಬೀಸ್ ಕುರಿತು ವಿವಿಧ ರೀತಿಯಲ್ಲಿ ಮಾಹಿತಿ ನೀಡಿದರು.
ಜಾಥಾದ ಸಂದರ್ಭದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಬೀದಿ ನಾಟಕ ಪ್ರದರ್ಶಿಸುವ ಮೂಲಕ ನಾಯಿ ಕಡಿತಕ್ಕೆ ಒಳಗಾದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ತಕ್ಷಣದ ಕ್ರಮಗಳು, ಪ್ರಥಮ ಚಿಕಿತ್ಸೆ, ಚಿಕಿತ್ಸಾ ವಿಧಾನ, ಮುನ್ನೆಚ್ಚರಿಕಾ ಕ್ರಮಗಳು ಹಾಗೂ ರೇಬೀಸ್ನ ಲಕ್ಷಣಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು. ನಾಯಿ ಕಡಿತವನ್ನು ನಿರ್ಲಕ್ಷ್ಯ ಮಾಡದೆ ತಕ್ಷಣ ಸೂಕ್ತ ವೈದ್ಯಕೀಯ ಚಿಕಿತ್ಸೆ ಪಡೆಯುವ ಅಗತ್ಯವನ್ನು ನಾಟಕದ ಮೂಲಕ ಮನವರಿಕೆ ಮಾಡಿಕೊಡಲಾಯಿತು.
ರೇಬೀಸ್ ಒಂದು ಗಂಭೀರ ಕಾಯಿಲೆಯಾಗಿದ್ದು, ನಾಯಿ ಸೇರಿದಂತೆ ಸೋಂಕಿತ ಪ್ರಾಣಿಗಳ ಕಡಿತ ಅಥವಾ ಸಂಪರ್ಕದ ಮೂಲಕ ವೈರಾಣು ಹರಡಬಹುದಾಗಿದೆ. ಹೀಗಾಗಿ ಸಾರ್ವಜನಿಕರು ಸಾಕುಪ್ರಾಣಿಗಳ ಆರೈಕೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು, ಬೀದಿ ನಾಯಿಗಳೊಂದಿಗೆ ಅನಗತ್ಯವಾಗಿ ವರ್ತಿಸದಿರುವುದು ಹಾಗೂ ನಾಯಿ ಕಡಿತದಂತಹ ಘಟನೆಗಳು ಸಂಭವಿಸಿದಲ್ಲಿ ತಕ್ಷಣ ವೈದ್ಯಕೀಯ ಸಲಹೆ ಪಡೆಯುವುದು ಮುಖ್ಯವಾಗಿದೆ ಎಂಬ ಸಂದೇಶವನ್ನು ವಿದ್ಯಾರ್ಥಿಗಳು ಸಾರಿದರು.
ಜಾಥಾಕ್ಕೆ ಅಗದತಂತ್ರ ವಿಭಾಗದ ಮುಖ್ಯಸ್ಥೆ ಡಾ. ಮಲ್ಲಮ್ಮ ಬಿರಾದಾರ, ಸಹಾಯಕ ಪ್ರಾಧ್ಯಾಪಕ ಡಾ. ದಾಮೋದರ ನಾಯಕ, ಸಹಪ್ರಾಧ್ಯಾಪಕಿ ಡಾ. ಶ್ವೇತಾ ನಿಡಗುಂದಿ ಹಾಗೂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅಶೋಕ ಪಾಟೀಲ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೇಬೀಸ್ನಂತಹ ಗಂಭೀರ ಕಾಯಿಲೆಗಳ ಕುರಿತು ಸಾರ್ವಜನಿಕರಲ್ಲಿ ವೈಜ್ಞಾನಿಕ ಅರಿವು ಮೂಡಿಸುವುದು ವೈದ್ಯಕೀಯ ಕ್ಷೇತ್ರದ ಪ್ರಮುಖ ಜವಾಬ್ದಾರಿಯಾಗಿದೆ.
ರೇಬೀಸ್ ತಡೆಗಟ್ಟಬಹುದಾದ ಕಾಯಿಲೆಯಾಗಿರುವುದರಿಂದ ಸಾರ್ವಜನಿಕರು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುವಂತೆ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಜಾಥಾ ಮೂಲಕ ರೇಬೀಸ್ ಮುಕ್ತ ಭಾರತದ ಆಶಯವನ್ನು ಜನಸಾಮಾನ್ಯರಿಗೆ ತಲುಪಿಸುವ ಪ್ರಯತ್ನ ಮಾಡಿದರು. ಸಾರ್ವಜನಿಕರೊಂದಿಗೆ ನೇರವಾಗಿ ಸಂವಾದ ನಡೆಸಿ, ನಾಯಿ ಕಡಿತದಿಂದ ರೇಬೀಸ್ ಹರಡುವ ಸಾಧ್ಯತೆ, ರೋಗದ ಲಕ್ಷಣಗಳು ಹಾಗೂ ತಕ್ಷಣದ ಚಿಕಿತ್ಸೆ ಕುರಿತು ಮಾಹಿತಿ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande