
ಬಾಗಲಕೋಟೆ, 19 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಬಾಗಲಕೋಟೆ ಜಿಲ್ಲೆಯ ರನ್ನ ನಗರಿ ಮುಧೋಳದಲ್ಲಿ ಸಾಹಿತ್ಯದ ಕಂಪು ಪಸರಿಸಲು ಸೆಪ್ಟೆಂಬರ್ 20ರಂದು ಕವಿ-ಕಾವ್ಯ ಸಮ್ಮೇಳನ, ಕೃತಿ ಬಿಡುಗಡೆ ಹಾಗೂ ಸನ್ಮಾನ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಗಿದೆ ಎಂದು ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿದ್ದಣ್ಣ ಬಾಡಗಿ ತಿಳಿಸಿದರು.
ನಗರದ ಕಾನಿಪ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾವ್ಯಶ್ರೀ ಚಾರಿಟಬಲ್ ಟ್ರಸ್ಟ್, ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ ಹಾಗೂ ಹಳಕಟ್ಟಿ ಪ್ರತಿಷ್ಠಾನದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮುಧೋಳವು ಸಾಹಿತ್ಯಿಕ ಪರಂಪರೆ ಹಾಗೂ ಸಾಂಸ್ಕೃತಿಕ ಶ್ರೀಮಂತಿಕೆಗೆ ಹೆಸರಾದ ನಗರವಾಗಿದ್ದು, ರನ್ನನ ನೆಲದಲ್ಲಿ ಕವಿ-ಕಾವ್ಯ ಸಮ್ಮೇಳನ ಆಯೋಜಿಸಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ. ಕಾವ್ಯ, ಸಾಹಿತ್ಯ, ವಿಚಾರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಸಮ್ಮೇಳನವನ್ನು ರೂಪಿಸಲಾಗಿದೆ ಎಂದು ಅವರು ವಿವರಿಸಿದರು.
ಸಮ್ಮೇಳನದಲ್ಲಿ ವಿವಿಧ ಕವಿಗಳು ತಮ್ಮ ಕಾವ್ಯ ವಾಚನದ ಮೂಲಕ ಸಾಹಿತ್ಯಾಸಕ್ತರನ್ನು ರಂಜಿಸಲಿದ್ದು, ಕನ್ನಡ ಸಾಹಿತ್ಯದ ವಿವಿಧ ಆಯಾಮಗಳ ಕುರಿತು ವಿಚಾರ ವಿನಿಮಯಕ್ಕೂ ಅವಕಾಶ ಕಲ್ಪಿಸಲಾಗುತ್ತದೆ. ಹೊಸ ತಲೆಮಾರಿನ ಬರಹಗಾರರು ಹಾಗೂ ಕವಿಗಳಿಗೆ ವೇದಿಕೆ ಒದಗಿಸುವ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆಯೋಜಕರು ತಿಳಿಸಿದರು.
ಕಾರ್ಯಕ್ರಮದ ಅಂಗವಾಗಿ ಕೃತಿ ಬಿಡುಗಡೆ ಸಮಾರಂಭವೂ ನಡೆಯಲಿದ್ದು, ಸಾಹಿತ್ಯ ಕ್ಷೇತ್ರದಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಪರಿಚಯಿಸುವ ಜೊತೆಗೆ ಅವುಗಳ ಮಹತ್ವದ ಕುರಿತು ಚರ್ಚೆ ನಡೆಯಲಿದೆ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.
ಸಾಹಿತ್ಯಾಭಿಮಾನಿಗಳು, ಕವಿಗಳು, ಬರಹಗಾರರು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಸಾಹಿತಿ ಡಾ. ಶಿವಾನಂದ ಕುಬಸದ, ಹಿರಿಯ ನಾಗರಿಕ ವೇದಿಕೆಯ ಕಲ್ಲಪ್ಪ ಸಬರದ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಆನಂದ ಪೂಜಾರಿ, ಮಹಾದೇವ ದಾಸರಡ್ಡಿ, ಮಹಾದೇವ ಮಡಿವಾಳ, ಸಿ.ಎಲ್. ರೂಗಿ, ರುದ್ರಪ್ಪ ಜಾಡರ ಸೇರಿದಂತೆ ಸಾಹಿತ್ಯಾಸಕ್ತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande