
ಬೆಂಗಳೂರು, 19 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ನಮ್ಮ ಮೆಟ್ರೋದ ಗುಲಾಬಿ ಮಾರ್ಗ ವ್ಯಾಪ್ತಿಯ ತಾವರೆಕೆರೆ ಮೆಟ್ರೋ ನಿಲ್ದಾಣದ ಹೆಸರನ್ನು ಬದಲಾಯಿಸುವಂತೆ ಸ್ಥಳೀಯರಿಂದ ಬೇಡಿಕೆ ಕೇಳಿಬಂದಿದೆ.
ನಿಲ್ದಾಣಕ್ಕೆ ‘ಬಿಸ್ಮಿಲ್ಲಾ ನಗರ’ ಅಥವಾ ‘ಬಿಸ್ಮಿಲ್ಲಾ ನಗರ–ತಾವರೆಕೆರೆ’ ಎಂದು ಮರುನಾಮಕರಣ ಮಾಡಬೇಕು ಎಂದು ಸ್ಥಳೀಯ ನಿವಾಸಿಗಳ ನಿಯೋಗವು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದೆ.
ತಾವರೆಕೆರೆಗಿಂತ ಬಿಸ್ಮಿಲ್ಲಾ ನಗರ ಪ್ರದೇಶವು ನಿಲ್ದಾಣಕ್ಕೆ ಸಮೀಪದಲ್ಲಿದ್ದು, ಸ್ಥಳೀಯರ ಅನುಕೂಲ ಹಾಗೂ ಪ್ರದೇಶದ ಗುರುತಿನ ಆಧಾರದ ಮೇಲೆ ಹೆಸರು ಬದಲಾವಣೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಇದೇ ವೇಳೆ, ನಿಲ್ದಾಣಕ್ಕೆ ಎಸ್.ಜಿ. ಪಾಳ್ಯ ಎಂದು ಹೆಸರು ಇಡುವಂತೆ ಸಚಿವ ರಾಮಲಿಂಗಾರೆಡ್ಡಿ ಅವರು ಈ ಹಿಂದೆ ಬಿಎಂಆರ್ಸಿಎಲ್ಗೆ ಪತ್ರ ಬರೆದಿದ್ದರು ಎನ್ನಲಾಗಿದೆ.
ಹೆಸರು ಬದಲಾವಣೆ ವಿಚಾರಕ್ಕೆ ವಿವಿಧ ಸಂಘಟನೆಗಳಿಂದ ವಿರೋಧವೂ ವ್ಯಕ್ತವಾಗಿದ್ದು, ಯಾವುದೇ ಒತ್ತಡಕ್ಕೆ ಮಣಿದು ಹೆಸರು ಬದಲಾವಣೆ ಮಾಡಬಾರದು ಎಂದು ಆಗ್ರಹಿಸಲಾಗಿದೆ.
ಈ ಕುರಿತು ಬಿಎಂಆರ್ಸಿಎಲ್ ಅಂತಿಮ ನಿರ್ಧಾರ ಕೈಗೊಂಡಿಲ್ಲ. ನಿಲ್ದಾಣಗಳ ಹೆಸರು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಸಂಬಂಧಿತ ಸಮಿತಿಯು ಪರಿಶೀಲನೆ ನಡೆಸಲಿದೆ.
ಬನ್ನೇರುಘಟ್ಟ ರಸ್ತೆ ಬಂದ್ ಎಚ್ಚರಿಕೆ: ಹೆಸರು ಬದಲಾವಣೆ ಸೇರಿದಂತೆ ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಬನ್ನೇರುಘಟ್ಟ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ರಸ್ತೆ ಬಂದ್ ಮಾಡುವ ಎಚ್ಚರಿಕೆಯನ್ನು ನೀಡಲಾಗಿದೆ.
“ಸ್ಥಳೀಯರಿಗೆ ಸುಲಭವಾಗಿ ಗುರುತಿಸಲು ಹಾಗೂ ಪ್ರದೇಶದ ಹೆಸರನ್ನು ಪ್ರತಿಬಿಂಬಿಸುವ ರೀತಿಯಲ್ಲಿ ನಿಲ್ದಾಣಕ್ಕೆ ಮರುನಾಮಕರಣ ಮಾಡಬೇಕು. ಬೇಡಿಕೆಗೆ ಸ್ಪಂದಿಸದಿದ್ದರೆ ಬನ್ನೇರುಘಟ್ಟ ರಸ್ತೆ ಬಂದ್ ಸೇರಿದಂತೆ ಹೋರಾಟ ನಡೆಸಲಾಗುವುದು” ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R