ಯಾದವಾಡ ಪ್ರೌಢಶಾಲೆಯಲ್ಲಿ ಶಾಸಕ ಆರ್.ಬಿ.ತಿಮ್ಮಾಪುರ ಜನ್ಮದಿನ ಆಚರಣೆ: ಶಾಲಾ ದಿನಗಳ ನೆನಪುಗಳಿಗೆ ಮರುಜೀವ
ವಿಜಯಪುರ, 19 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ತಾವು ವ್ಯಾಸಂಗ ಮಾಡಿದ ಯಾದವಾಡದ ಪ್ರೌಢಶಾಲೆಯಲ್ಲಿ ಆಡಳಿತ ಮಂಡಳಿಯವರು ಅತ್ಯಂತ ಆತ್ಮೀಯತೆ ಹಾಗೂ ಅಭಿಮಾನದಿಂದ ತಮ್ಮ ಜನ್ಮದಿನವನ್ನು ಆಚರಿಸಿದ್ದು, ಶಾಲಾ ದಿನಗಳ ಸವಿನೆನಪುಗಳು ಮತ್ತೆ ಮರುಕಳಿಸಿದಂತಾಯಿತು ಎಂದು ಶಾಸಕ ಆರ್.ಬಿ.ತಿಮ್ಮಾಪುರ ಹೇಳಿದರು. ಜನ್
ಶಾಲೆ


ವಿಜಯಪುರ, 19 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ತಾವು ವ್ಯಾಸಂಗ ಮಾಡಿದ ಯಾದವಾಡದ ಪ್ರೌಢಶಾಲೆಯಲ್ಲಿ ಆಡಳಿತ ಮಂಡಳಿಯವರು ಅತ್ಯಂತ ಆತ್ಮೀಯತೆ ಹಾಗೂ ಅಭಿಮಾನದಿಂದ ತಮ್ಮ ಜನ್ಮದಿನವನ್ನು ಆಚರಿಸಿದ್ದು, ಶಾಲಾ ದಿನಗಳ ಸವಿನೆನಪುಗಳು ಮತ್ತೆ ಮರುಕಳಿಸಿದಂತಾಯಿತು ಎಂದು ಶಾಸಕ ಆರ್.ಬಿ.ತಿಮ್ಮಾಪುರ ಹೇಳಿದರು.

ಜನ್ಮದಿನದ ಅಂಗವಾಗಿ ಶಾಲೆಗೆ ಭೇಟಿ ನೀಡಿದ ಶಾಸಕ ಆರ್.ಬಿ.ತಿಮ್ಮಾಪುರ ಅವರನ್ನು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಹಿತೈಷಿಗಳು ಆತ್ಮೀಯವಾಗಿ ಬರಮಾಡಿಕೊಂಡು ಶುಭಾಶಯ ಕೋರಿದರು. ತಮ್ಮ ವಿದ್ಯಾರ್ಥಿ ಜೀವನ ಕಳೆದ ಶಾಲೆಯಲ್ಲಿಯೇ ಜನ್ಮದಿನ ಆಚರಿಸಿಕೊಂಡಿರುವುದು ವಿಶೇಷ ಸಂತಸ ಹಾಗೂ ಭಾವನಾತ್ಮಕ ಕ್ಷಣವಾಗಿದೆ ಎಂದು ಅವರು ಹೇಳಿದರು.

“ಶಾಲಾ ದಿನಗಳ ನೆನಪುಗಳು ಮರುಕಳಿಸಿದ ಈ ಸುಂದರ ಕ್ಷಣಗಳು ನನ್ನ ಪಾಲಿಗೆ ಸದಾ ಸ್ಮರಣೀಯ. ನಾನು ವ್ಯಾಸಂಗ ಮಾಡಿದ ಶಾಲೆಯ ಆಡಳಿತ ಮಂಡಳಿಯವರು ತೋರಿದ ಪ್ರೀತಿ, ಅಭಿಮಾನ ಹಾಗೂ ಆತ್ಮೀಯತೆಗೆ ನಾನು ಸದಾ ಚಿರಋಣಿ,” ಎಂದು ಶಾಸಕ ತಿಮ್ಮಾಪುರ ಹೇಳಿದರು.

ಈ ಸಂದರ್ಭದಲ್ಲಿ ಲೋಕಾಪೂರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ವಕೀಲರಾದ ಅಶೋಕ್ ಕಿವಡಿ, ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಹೆಗ್ಗಳಗಿ, ಪತ್ರಕರ್ತ ವಿಶ್ವನಾಥ ಮುನ್ನೊಳ್ಳಿ, ಪ್ರಮುಖ ಮುಖಂಡ ಪರಮಾನಂದ ಕುಟ್ಟರಟ್ಟಿ ಸೇರಿದಂತೆ ಅನೇಕ ಗಣ್ಯರು, ಅಭಿಮಾನಿಗಳು, ಆತ್ಮೀಯರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು ಶಾಸಕ ಆರ್.ಬಿ.ತಿಮ್ಮಾಪುರ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.

ಶಾಲಾ ಆಡಳಿತ ಮಂಡಳಿಯವರು ಹಾಗೂ ಆತ್ಮೀಯರು ಪ್ರೀತಿಯಿಂದ ಹಾರೈಸಿದ ಹಿನ್ನೆಲೆಯಲ್ಲಿ ಕೃತಜ್ಞತೆ ವ್ಯಕ್ತಪಡಿಸಿದ ತಿಮ್ಮಾಪುರ, “ನನ್ನ ಜನ್ಮದಿನದ ಸಂದರ್ಭದಲ್ಲಿ ಪ್ರೀತಿ, ಅಭಿಮಾನದಿಂದ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ನನ್ನ ತುಂಬು ಹೃದಯದ ಧನ್ಯವಾದಗಳು. ನಿಮ್ಮೆಲ್ಲರ ಆಶೀರ್ವಾದ ಹಾಗೂ ಹಾರೈಕೆಯೇ ನನಗೆ ಶ್ರೀರಕ್ಷೆ,” ಎಂದು ಹೇಳಿದರು.

ಶಾಲೆಯ ಆವರಣದಲ್ಲಿ ನಡೆದ ಈ ಆತ್ಮೀಯ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿ ಹಾಗೂ ಜನಪ್ರತಿನಿಧಿಯಾಗಿ ಆರ್.ಬಿ.ತಿಮ್ಮಾಪುರ ಅವರೊಂದಿಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು, ಗಣ್ಯರು ಹಾಗೂ ಅಭಿಮಾನಿಗಳು ಕೆಲಕಾಲ ಆತ್ಮೀಯವಾಗಿ ಸಂವಾದ ನಡೆಸಿದರು. ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕು ಹಾಕಿದ ಈ ಕ್ಷಣಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande