
ನವದೆಹಲಿ, 19 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ 2026ನೇ ಸಾಲಿನ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಜಂಟಿ ಕಾರ್ಯದರ್ಶಿ ಸೇರಿದಂತೆ ಮೂರು ಪ್ರಮುಖ ಸ್ಥಾನಗಳನ್ನು ಗೆದ್ದುಕೊಂಡಿದೆ. ಉಪಾಧ್ಯಕ್ಷ ಸ್ಥಾನದಲ್ಲಿ ಸ್ವತಂತ್ರ ಅಭ್ಯರ್ಥಿ ದೀಪಾಂಶು ಶೌಕೀನ್ ಗೆಲುವು ಸಾಧಿಸಿದ್ದಾರೆ.
ಶನಿವಾರ ಪ್ರಕಟವಾದ ಚುನಾವಣಾ ಫಲಿತಾಂಶದ ಪ್ರಕಾರ, ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಬಿವಿಪಿಯ ಯಶ್ ದಬಾಸ್ 24,576 ಮತಗಳನ್ನು ಪಡೆದು ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್‌ನ ವಿಜಯ ಶಂಕರ್ ಮೀನಾ ಅವರನ್ನು 2,053 ಮತಗಳ ಅಂತರದಿಂದ ಸೋಲಿಸಿದರು. ಮೀನಾ 22,523 ಮತಗಳನ್ನು ಪಡೆದರು.
ಕಾರ್ಯದರ್ಶಿ ಸ್ಥಾನದಲ್ಲಿ ಎಬಿವಿಪಿಯ ರಿಯಾ ಛಾವಡಿ 21,650 ಮತಗಳನ್ನು ಪಡೆದು ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್‌ನ ನಮ್ರತಾ ಚೌಧರಿ ಅವರನ್ನು ಸೋಲಿಸಿದರು. ನಮ್ರತಾ 14,869 ಮತಗಳನ್ನು ಪಡೆದರು.
ಜಂಟಿ ಕಾರ್ಯದರ್ಶಿ ಸ್ಥಾನದಲ್ಲಿ ಎಬಿವಿಪಿಯ ಲಕ್ಷ್ಯರಾಜ್ ಸಿಂಗ್ 16,615 ಮತಗಳನ್ನು ಪಡೆದು ಎಸ್‌ಸಿಎಸ್‌ನ ವಿಶೇಷ್ ಯಾದವ್ ಅವರನ್ನು 837 ಮತಗಳ ಅಂತರದಿಂದ ಸೋಲಿಸಿದರು. ವಿಶೇಷ್ ಯಾದವ್ 15,778 ಮತಗಳನ್ನು ಪಡೆದರು.
ಉಪಾಧ್ಯಕ್ಷ ಸ್ಥಾನದಲ್ಲಿ ಸ್ವತಂತ್ರ ಅಭ್ಯರ್ಥಿ ದೀಪಾಂಶು ಶೌಕೀನ್ 30,615 ಮತಗಳನ್ನು ಪಡೆದು ಎಬಿವಿಪಿಯ ಇಶು ಮೌರ್ಯ ಅವರನ್ನು ಸೋಲಿಸಿದರು. ಇಶು ಮೌರ್ಯ 16,910 ಮತಗಳನ್ನು ಪಡೆದರು.
ಇದರೊಂದಿಗೆ ಡೂಸು ಚುನಾವಣೆಯ ನಾಲ್ಕು ಪ್ರಮುಖ ಸ್ಥಾನಗಳ ಪೈಕಿ ಎಬಿವಿಪಿ ಮೂರು ಸ್ಥಾನಗಳನ್ನು ಪಡೆದುಕೊಂಡರೆ, ಒಂದು ಸ್ಥಾನ ಸ್ವತಂತ್ರ ಅಭ್ಯರ್ಥಿಯ ಪಾಲಾಗಿದೆ. 2025ರಲ್ಲಿ ಉಪಾಧ್ಯಕ್ಷ ಸ್ಥಾನ ಗೆದ್ದಿದ್ದ ರಾಷ್ಟ್ರೀಯ ವಿದ್ಯಾರ್ಥಿ ಕಾಂಗ್ರೆಸ್ ಈ ಬಾರಿ ನಾಲ್ಕು ಪ್ರಮುಖ ಸ್ಥಾನಗಳಲ್ಲೂ ಗೆಲುವು ಸಾಧಿಸಲು ವಿಫಲವಾಗಿದೆ.
ಈ ಬಾರಿ ಡೂಸು ಚುನಾವಣೆಯಲ್ಲಿ ಶೇ.40.46ರಷ್ಟು ಮತದಾನವಾಗಿದ್ದು, ಕಳೆದ ಮೂರು ವರ್ಷಗಳಲ್ಲೇ ಇದು ಅತ್ಯಧಿಕ ಮತದಾನವಾಗಿದೆ.
ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಯಶ್ ದಬಾಸ್, ವಿದ್ಯಾರ್ಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಇಡೀ ವರ್ಷ ವಿದ್ಯಾರ್ಥಿಗಳಿಗಾಗಿ ಕೆಲಸ ಮಾಡುವುದಾಗಿ ತಿಳಿಸಿದ ಅವರು, ಪ್ರತಿಯೊಂದು ಸ್ನಾತಕೋತ್ತರ ವಿದ್ಯಾರ್ಥಿ ನಿಲಯ ಹಾಗೂ ವಸತಿ ನಿಲಯಗಳ ಸುರಕ್ಷತಾ ಪರಿಶೀಲನೆ ನಡೆಸುವುದು ತಮ್ಮ ಮೊದಲ ಆದ್ಯತೆಯಾಗಲಿದೆ. ಭವಿಷ್ಯದಲ್ಲಿ ಸತ್ಯ ನಿಕೇತನದಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದ ಲಕ್ಷ್ಯರಾಜ್ ಸಿಂಗ್, 12 ವರ್ಷಗಳ ಬಳಿಕ ಎಬಿವಿಪಿ ರಾಜಸ್ಥಾನದಿಂದ ಅಭ್ಯರ್ಥಿಯೊಬ್ಬರಿಗೆ ಅವಕಾಶ ನೀಡಿದೆ. ರಾಜಸ್ಥಾನದ ವಿದ್ಯಾರ್ಥಿಗಳು ಹಾಗೂ ಸಹಪಾಠಿಗಳ ಬೆಂಬಲದಿಂದ ತಮಗೆ ಗೆಲುವು ದೊರೆತಿದೆ ಎಂದು ಹೇಳಿದರು.
ನೂತನ ಕಾರ್ಯದರ್ಶಿ ರಿಯಾ ಛಾವಡಿ ಗೆಲುವಿನ ಕುರಿತು ಸಂತಸ ವ್ಯಕ್ತಪಡಿಸಿ, ಸಂಘಟನೆ, ವಿದ್ಯಾರ್ಥಿಗಳು, ತಮ್ಮ ತಂಡ ಹಾಗೂ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.