
ಬಳ್ಳಾರಿ, 18 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ :
ಹಾವು ಕಡಿತದ ಅಪಾಯಗಳು, ತಕ್ಷಣದ ವೈದ್ಯಕೀಯ ಚಿಕಿತ್ಸೆಯ ಮಹತ್ವ ಹಾಗೂ ಹಾವು ಕಡಿತದಿಂದ ಉಂಟಾಗುವ ದೀರ್ಘಕಾಲೀನ ಅಂಗವೈಕಲ್ಯಗಳ ಕುರಿತು ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 19 ರಂದು ಜಿಲ್ಲೆಯಾದ್ಯಂತ ‘ಅಂತಾರಾಷ್ಟಿಯ ಹಾವು ಕಡಿತ ಜಾಗೃತಿ ದಿನ’ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಲಕಾನಂದ ಡಿ. ಮಳಗಿ ತಿಳಿಸಿದ್ದಾರೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿಯ ಸಹಯೋಗದಲ್ಲಿ ಜಿಲ್ಲೆಯ ಎಲ್ಲಾ ಉಪಕೇಂದ್ರಗಳು, ಪ್ರಾಥಮಿಕ ಹಾಗೂ ನಗರ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಈ ಜಾಗೃತಿ ಕಾರ್ಯಕ್ರಮಗಳು ನಡೆಯಲಿವೆ.
ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆ ಸೆಕ್ಷನ್ 3ರ ಅಡಿಯಲ್ಲಿ ಹಾವು ಕಡಿತವನ್ನು ಈಗಾಗಲೇ ‘ಅಧಿಸೂಚಿತ ಕಾಯಿಲೆ’ ಎಂದು ಘೋಷಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಜಗತ್ತಿನಲ್ಲಿ ಪ್ರತಿವರ್ಷ ಸುಮಾರು 54 ಲಕ್ಷ ಜನರು ಹಾವು ಕಡಿತಕ್ಕೆ ಒಳಗಾಗುತ್ತಿದ್ದು, ಇವರಲ್ಲಿ 18 ರಿಂದ 27 ಲಕ್ಷ ಜನರಲ್ಲಿ ವಿಷದ ಪ್ರಭಾವ ಕಂಡುಬರುತ್ತದೆ. ಸುಮಾರು 81,000 ದಿಂದ 1.38 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ಹಾವು ಕಡಿತದಿಂದಾಗಿ ಪಾರ್ಶ್ವವಾಯು, ಉಸಿರಾಟದ ತೊಂದರೆ, ತೀವ್ರ ರಕ್ತಸ್ರಾವ, ಮೂತ್ರಪಿಂಡ ವೈಫಲ್ಯ ಮತ್ತು ಶಾಶ್ವತ ಅಂಗವೈಕಲ್ಯ ಉಂಟಾಗುವ ಸಾಧ್ಯತೆಗಳಿರುತ್ತವೆ. ಈ ಹಿನ್ನೆಲೆಯಲ್ಲಿ ದೈಹಿಕ, ನರವೈಜ್ಞಾನಿಕ ಹಾಗೂ ಮಾನಸಿಕ ಅಂಗವೈಕಲ್ಯವನ್ನು ಗುರುತಿಸಿ ಸೂಕ್ತ ಆರೈಕೆ ನೀಡುವುದು ಅತ್ಯಗತ್ಯ ಎಂದು ಡಾ. ಮಳಗಿ ತಿಳಿಸಿದ್ದಾರೆ.
*ಎಲ್ಲಾ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯ:*
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಮರಿಯಂಬಿ ವಿ.ಕೆ. ಮಾತನಾಡಿ, ಜಿಲ್ಲೆಯ ಎಲ್ಲಾ ಹಂತದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಹಾವು ಕಡಿತಕ್ಕೆ ನೀಡುವ ಪ್ರತಿವಿಷ ಲಸಿಕೆಗಳು ಸಮರ್ಪಕವಾಗಿ ಲಭ್ಯವಿರುವಂತೆ ಕ್ರಮ ವಹಿಸಲಾಗಿದೆ ಮತ್ತು ಈ ಕುರಿತು ಎಲ್ಲ ಆಸ್ಪತ್ರೆಗಳಿಗೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
*ಹಾವು ಕಚ್ಚಿದಾಗ ಏನು ಮಾಡಬೇಕು?*
ಗಾಬರಿಯಾಗದೆ, ಸಂತ್ರಸ್ತರನ್ನು ಸಮಾಧಾನಪಡಿಸಿ. ಹಾವಿನಿಂದ ನಿಧಾನವಾಗಿ ದೂರ ಸರಿಯಿರಿ. ಹಾವು ಕಚ್ಚಿದ ದೇಹದ ಭಾಗದಲ್ಲಿರುವ ಪಾದರಕ್ಷೆ, ಕಾಲುಂಗುರ, ಬೆಲ್ಟ್, ವಾಚ್, ಆಭರಣ ಹಾಗೂ ಬಿಗಿಯಾದ ಬಟ್ಟೆಗಳನ್ನು ತಕ್ಷಣ ತೆಗೆಯಿರಿ. ವ್ಯಕ್ತಿಯನ್ನು ಎಡಭಾಗಕ್ಕೆ ಮಲಗಿಸಿ, ಕಡಿತಕ್ಕೊಳಗಾದ ಅಂಗವನ್ನು ಅಲುಗಾಡದಂತೆ ನೋಡಿಕೊಳ್ಳಿ. ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆ ಅಥವಾ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಿರಿ.
*ಏನು ಮಾಡಬಾರದು?*
ಯಾವುದೇ ಕಾರಣಕ್ಕೂ ಆತಂಕ ಅಥವಾ ಗಾಬರಿಗೊಳ್ಳಬೇಡಿ. ಕಚ್ಚಿದ ಜಾಗದ ಮೇಲ್ಭಾಗದಲ್ಲಿ ರಕ್ತಬಂಧಕ ಪಟ್ಟಿ ಅಥವಾ ಬಿಗಿಯಾದ ಬಟ್ಟೆಯನ್ನು ಕಟ್ಟಬೇಡಿ. ಗಾಯವನ್ನು ಚಾಕುವಿನಿಂದ ಕೊಯ್ಯುವುದು, ಬಾಯಿಯಿಂದ ವಿಷ ಹೀರುವುದು ಮಾಡಬೇಡಿ. ಗಾಯಕ್ಕೆ ಯಾವುದೇ ನಾಟಿ ಮದ್ದು, ಎಲೆ-ಗಿಡಮೂಲಿಕೆ ಅಥವಾ ಇನ್ಯಾವುದೇ ವಸ್ತುಗಳನ್ನು ಹಚ್ಚಬೇಡಿ. ಹಾವನ್ನು ಹಿಡಿಯಲು ಅಥವಾ ಕೊಲ್ಲಲು ಹೋಗಿ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಬೇಡಿ.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್