ಕಸ್ತೂರಿ ರಂಗನ್ ವರದಿ: ಅಧಿಕಾರಿಗಳೊಂದಿಗೆ ಚರ್ಚಿಸಿ ಭೌತಿಕ ಸಮೀಕ್ಷೆ ಬಗ್ಗೆ ತೀರ್ಮಾನ–ಡಿ.ಕೆ. ಶಿವಕುಮಾರ್
ಉಡುಪಿ, 18 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್: ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಭೌತಿಕ ಸಮೀಕ್ಷೆ ನಡೆಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು. ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಶುಕ್ರವಾರ ಕಸ್ತೂರಿ ರಂಗನ
ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳ ಕುರಿತು ಸ್ಥಳೀಯ ಜನರೊಂದಿಗೆ ಸಂವಾದ


ಉಡುಪಿ, 18 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:

ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಭೌತಿಕ ಸಮೀಕ್ಷೆ ನಡೆಸುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ಉಡುಪಿ ಜಿಲ್ಲೆಯ ಹೆಬ್ರಿಯಲ್ಲಿ ಶುಕ್ರವಾರ ಕಸ್ತೂರಿ ರಂಗನ್ ವರದಿಯ ಸಾಧಕ-ಬಾಧಕಗಳ ಕುರಿತು ಸ್ಥಳೀಯ ಜನರೊಂದಿಗೆ ನಡೆದ ಸಂವಾದ ಸಭೆಯಲ್ಲಿ ಮಾತನಾಡಿದ ಅವರು, ಈ ಭಾಗದ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಭೌತಿಕ ಸಮೀಕ್ಷೆ ನಡೆಸುವಂತೆ ಸಲಹೆ ನೀಡಿದ್ದಾರೆ. ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಸ್ತೂರಿ ರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯದಿಂದ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಜನರು ತಮ್ಮ ಗಮನ ಸೆಳೆದಿದ್ದಾರೆ. ಸೆ.27ರೊಳಗೆ ಈ ಕುರಿತು ಸರ್ಕಾರದ ತೀರ್ಮಾನವನ್ನು ಕೇಂದ್ರಕ್ಕೆ ಕಳುಹಿಸಬೇಕಿದ್ದು, ಜನರ ಅಭಿಪ್ರಾಯವೇ ಸರ್ಕಾರದ ಅಭಿಪ್ರಾಯವಾಗಬೇಕು ಎಂಬ ಉದ್ದೇಶದಿಂದ ಇಲ್ಲಿಗೆ ಬಂದಿದ್ದೇನೆ ಎಂದು ಹೇಳಿದರು.

ಕೇರಳ ಮಾದರಿಯಲ್ಲಿ ತಜ್ಞರ ಸಮಿತಿ ರಚಿಸಿ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಲಾಗಿದೆ. ಜನರ ಸಲಹೆಗಳನ್ನು ಸರ್ಕಾರ ಸ್ವೀಕರಿಸಿದ್ದು, ಈ ವಿಚಾರಗಳ ಕುರಿತು ವಿಧಾನಮಂಡಲದ ಅಧಿವೇಶನದಲ್ಲಿ ಚರ್ಚಿಸಲಾಗುವುದು. ಮೂರು ದಿನಗಳ ವಿಶೇಷ ಅಧಿವೇಶನ ಕರೆಯಲಾಗಿದ್ದು, ರೈತರು, ಬರಗಾಲ ಹಾಗೂ ಕಸ್ತೂರಿ ರಂಗನ್ ವರದಿ ವಿಚಾರ ಚರ್ಚೆಯಾಗಲಿದೆ. ಸೋಮವಾರ ಮೊದಲ ದಿನವೇ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲಾಗುವುದು ಎಂದರು.

ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಭಾಗಕ್ಕೂ ಭೇಟಿ ನೀಡಿ ಅಲ್ಲಿನ ಜನರ ಭಾವನೆಗಳನ್ನು ಆಲಿಸುವುದಾಗಿ ತಿಳಿಸಿದರು.

ಅರಣ್ಯ ಹಕ್ಕು ಕಾಯ್ದೆಯಲ್ಲಿ ಎಲ್ಲರಿಗೂ 25 ವರ್ಷಗಳ ಮಿತಿ

ಅರಣ್ಯ ಹಕ್ಕು ಕಾಯ್ದೆಯಲ್ಲಿ ಕೆಲವರಿಗೆ 25 ವರ್ಷ ಹಾಗೂ ಉಳಿದವರಿಗೆ 75 ವರ್ಷಗಳ ಮಿತಿ ಇದೆ. ಎಲ್ಲರಿಗೂ 25 ವರ್ಷಗಳ ಮಿತಿಯನ್ನು ನಿಗದಿಪಡಿಸುವ ಕುರಿತು ಮುಂದಿನ ದಿನಗಳಲ್ಲಿ ನಿರ್ಣಯ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವವರಿಗೆ ತೊಂದರೆ ನೀಡಬಾರದು ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬಗರ್‌ಹುಕುಂ ಸಾಗುವಳಿ ಹಾಗೂ ಉಳುವವನಿಗೆ ಭೂಮಿ ನೀಡಿರುವುದು ನಮ್ಮ ಸರ್ಕಾರ ಎಂದು ತಿಳಿಸಿದರು.

ನಾವು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ. ನಿಮ್ಮ ಬದುಕಿನ ಬಗ್ಗೆ ನಮಗೆ ಕಾಳಜಿ ಇದೆ. ಮೀನುಗಾರಿಕೆ ಸಂಬಂಧ ಸಚಿವ ಸಂಪುಟದಲ್ಲಿ ಪ್ರಮುಖ ತೀರ್ಮಾನ ಕೈಗೊಳ್ಳಲಾಗಿದೆ. ಈ ಭಾಗದ ಜನಪ್ರತಿನಿಧಿಗಳು ವಲಯ ನಿರ್ವಹಣೆ ಯೋಜನೆ ಹಾಗೂ ಹೆಬ್ರಿಯಲ್ಲಿ ತಾಲ್ಲೂಕು ಆಸ್ಪತ್ರೆಗೆ ಬೇಡಿಕೆ ಇಟ್ಟಿದ್ದಾರೆ. ಈ ಕುರಿತು ಮುಂದಿನ ದಿನಗಳಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸುಮ್ಮನೆ ಘೋಷಣೆ ಮಾಡಿ ಬಳಿಕ ಅದನ್ನು ಮರೆಯುವಂತಾಗಬಾರದು. ಸಿಕ್ಕ ಅವಕಾಶದಲ್ಲಿ ಜನರಿಗೆ ಕೈಲಾದಷ್ಟು ಸೇವೆ ಮಾಡುವುದಾಗಿ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಉಡುಪಿಗೂ ಭೇಟಿ ನೀಡಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿದರು.

ತುಳುನಾಡಿನ ಜನ ದೇಶದ ಆಸ್ತಿ

ತುಳುನಾಡಿನ ಜನ ದೇಶದ ಆಸ್ತಿ. ಮುಂದಿನ ದಿನಗಳಲ್ಲಿ ಮತ್ತೆ ಬಂದು ನಿಮ್ಮ ಸಲಹೆ ಕೇಳುತ್ತೇನೆ. ಅಧಿವೇಶನದಲ್ಲಿ ನಿಮ್ಮ ಪ್ರತಿನಿಧಿಗಳ ಸಲಹೆ ಆಲಿಸುತ್ತೇನೆ. ಈ ಸರ್ಕಾರ ನಿಮ್ಮ ಜೊತೆ ಇದೆ ಎಂದು ಶಿವಕುಮಾರ್ ಹೇಳಿದರು.

ಈ ಭಾಗದ ಎಲ್ಲ ಪಕ್ಷಗಳ ಶಾಸಕರು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಮಂಗಳೂರಿನಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಸಭೆಯಲ್ಲಿ 60 ತೀರ್ಮಾನಗಳನ್ನು ಕೈಗೊಳ್ಳಲಾಗಿದ್ದು, ಅದರಲ್ಲಿ 40 ತೀರ್ಮಾನಗಳು ಕರಾವಳಿ ಜಿಲ್ಲೆಗಳಿಗೆ ಸಂಬಂಧಿಸಿವೆ ಎಂದರು.

ತುಳುನಾಡಿನ ಜನರ ಮಾತೃಭಾಷೆಯಾದ ತುಳುವನ್ನು ಎರಡು ಜಿಲ್ಲೆಗಳಲ್ಲಿ ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಲು ತೀರ್ಮಾನಿಸಲಾಗಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿ ಅಭಿವೃದ್ಧಿ ನೀತಿ ರೂಪಿಸಿ ಹಲವು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಹೂಡಿಕೆ ಆಕರ್ಷಿಸುವ ಮೂಲಕ ಇಲ್ಲಿನ ಜನ ವಲಸೆ ಹೋಗುವುದನ್ನು ತಪ್ಪಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಇದು ಐತಿಹಾಸಿಕ ಭೂಮಿಯಾಗಿದ್ದು, ಇಲ್ಲಿನ ಜನ ವಿದ್ಯಾವಂತರು, ಪ್ರಜ್ಞಾವಂತರು ಹಾಗೂ ಧಾರ್ಮಿಕರಾಗಿದ್ದಾರೆ. ಈ ಭಾಗಕ್ಕೆ ತೀರ್ಥಯಾತ್ರೆಗೆ ಬರುತ್ತೇವೆ. ಈ ಭಾಗದಲ್ಲಿ ಆರಂಭವಾದ ಐದಾರು ಬ್ಯಾಂಕ್‌ಗಳು ದೇಶಕ್ಕೆ ಮಾದರಿಯಾಗಿ ಬೆಳೆದಿವೆ. ದೇಶದಲ್ಲೇ ಅತಿ ಹೆಚ್ಚು ವೈದ್ಯರು ತಯಾರಾಗುವ ಪ್ರದೇಶಗಳಲ್ಲಿ ತುಳುನಾಡು ಪ್ರಮುಖವಾಗಿದೆ. ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪದವಿಪೂರ್ವ ಶಿಕ್ಷಣ ಪಡೆಯುತ್ತಿದ್ದಾರೆ ಎಂದರು.

ಸರ್ವಜ್ಞನ ವಚನವನ್ನು ಉಲ್ಲೇಖಿಸಿದ ಮುಖ್ಯಮಂತ್ರಿ, ನಿಂಬೆಗಿಂತ ಶ್ರೇಷ್ಠ ಹುಳಿ, ದುಂಬಿಯ ಕರಿಬಣ್ಣ, ಶಿವನಿಂಗಿಂತ ದೊಡ್ಡ ದೇವರು, ಮನುಷ್ಯನಲ್ಲಿ ನಂಬಿಕೆಗಿಂತ ದೊಡ್ಡ ಗುಣವಿಲ್ಲ ಎಂದರು. ನನ್ನ ಮೇಲೆ ನಂಬಿಕೆ ಇಟ್ಟಿರುವುದಕ್ಕೆ ನಮನಗಳು. ದೇವರು ವರ, ಶಾಪ ನೀಡುವುದಿಲ್ಲ; ಕೇವಲ ಅವಕಾಶ ನೀಡುತ್ತಾನೆ. ನಮಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು. ಹೀಗಾಗಿ ನನಗೆ ಸಿಕ್ಕ ಅವಕಾಶದಲ್ಲಿ ಜನರ ಸೇವೆ ಮಾಡಲು ಬಂದಿದ್ದೇನೆ ಎಂದರು.

ಜನರ ಭಾವನೆ ತಿಳಿದು ಪರಿಹಾರ ನೀಡಲು ಬಂದಿರುವೆ

ಸಂವಾದ ಸಭೆಗೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ, ಕಸ್ತೂರಿ ರಂಗನ್ ವರದಿ ವಿಚಾರದಲ್ಲಿ ಜನರ ಭಾವನೆ ತಿಳಿದು, ಅವರಿಂದಲೇ ವಿಚಾರಧಾರೆ ಆಲಿಸಿ ಪರಿಹಾರ ನೀಡಲು ಬಂದಿರುವುದಾಗಿ ಹೇಳಿದರು.

ತುಳುನಾಡಿನ ಜನರ ನಿರೀಕ್ಷೆಯಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆಯೇ ಎಂಬ ಪ್ರಶ್ನೆಗೆ, ತುಳುನಾಡಿನ ಜನತೆ ಬಯಸಿದಂತೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ ಎಂದರು.

ಕೇರಳ ಮಾದರಿಯಲ್ಲಿ ತಜ್ಞರ ಸಮಿತಿ ರಚನೆಗೆ ಒತ್ತಾಯ

ಸಂವಾದ ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಕಸ್ತೂರಿ ರಂಗನ್ ವರದಿಯಿಂದ ಉಂಟಾಗಬಹುದಾದ ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದರು.

ಹಿರಿಯ ವಕೀಲ ಟಿ.ಬಿ. ಶೆಟ್ಟಿ, ಮಲೆಕುಡಿಯ ಸಮುದಾಯದ ರಾಜ್ಯಾಧ್ಯಕ್ಷ ಶ್ರೀಧರ್ ಗೌಡ, ಉಡುಪಿ ರೈತ ಸಂಘದ ಉದಯ ಕುಮಾರ್ ವಂಡ್ಸೆ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ನವೀನ್ ಅಡ್ಯಂತಯ್ಯ, ನಾಡ್ಪಾಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಿನೇಶ್ ಹೆಗಡೆ, ಕೈಗಾರಿಕೋದ್ಯಮಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಸುನೀಲ್ ಕುಮಾರ್ ಮಾತನಾಡಿದರು.

ಕೇರಳದಲ್ಲಿ ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಸುಮಾರು 13 ಸಾವಿರ ಚದರ ಕಿಲೋಮೀಟರ್ ಪ್ರದೇಶ ಒಳಗೊಂಡಿದ್ದರೆ, ಕರ್ನಾಟಕದಲ್ಲಿ ಸುಮಾರು 20 ಸಾವಿರ ಚದರ ಕಿಲೋಮೀಟರ್ ಪ್ರದೇಶ ಒಳಗೊಂಡಿದೆ. ಕೇರಳದಲ್ಲಿ ಉನ್ನತ ಮಟ್ಟದ ಅಧಿಕಾರಿ ಸಮಿತಿ ಮೂಲಕ ಭೌತಿಕ ಸಮೀಕ್ಷೆ ನಡೆಸಿ ನಾಡು ಮತ್ತು ಕಾಡನ್ನು ಬೇರ್ಪಡಿಸಿ ಗಡಿ ರಚಿಸಲಾಗಿದೆ. ಇದರಿಂದ ವರದಿ ವ್ಯಾಪ್ತಿಯನ್ನು 9 ಸಾವಿರ ಚದರ ಕಿಲೋಮೀಟರ್‌ಗೆ ಇಳಿಸಲಾಗಿದ್ದು, 3,200 ಚದರ ಕಿಲೋಮೀಟರ್ ಪ್ರದೇಶವನ್ನು ವರದಿಯಿಂದ ಮುಕ್ತಗೊಳಿಸಲಾಗಿದೆ. ಕರ್ನಾಟಕದಲ್ಲಿಯೂ ಇದೇ ಮಾದರಿ ಅನುಸರಿಸಿದರೆ ಸುಮಾರು 5 ಸಾವಿರ ಚದರ ಕಿಲೋಮೀಟರ್ ಪ್ರದೇಶ ಮುಕ್ತವಾಗಲಿದೆ ಎಂದು ಪ್ರತಿನಿಧಿಗಳು ತಿಳಿಸಿದರು.

ಕಸ್ತೂರಿ ರಂಗನ್ ಸಮಿತಿ ಉಪಗ್ರಹಗಳ ಮೂಲಕ ಜಿಪಿಎಸ್ ಸಮೀಕ್ಷೆ ನಡೆಸಿದ್ದು, ಭೌತಿಕ ಸಮೀಕ್ಷೆ ನಡೆಸಿಲ್ಲ. ಹೀಗಾಗಿ ರಾಜ್ಯ ಸರ್ಕಾರ ಭೌತಿಕ ಸಮೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದರು.

ಒಂದು ಹಳ್ಳಿಯಲ್ಲಿ 100ಕ್ಕಿಂತ ಕಡಿಮೆ ಜನರಿದ್ದರೆ ಮಾತ್ರ ಅದನ್ನು ಸೂಕ್ಷ್ಮ ವಲಯ ಎಂದು ಪರಿಗಣಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಜಿಪಿಎಸ್ ಸಮೀಕ್ಷೆಯಿಂದ 100ಕ್ಕಿಂತ ಹೆಚ್ಚು ಜನರಿರುವ ಪ್ರದೇಶಗಳನ್ನೂ ಸೇರಿಸಲಾಗಿದೆ ಎಂದು ಪ್ರತಿನಿಧಿಗಳು ಆಕ್ಷೇಪಿಸಿದರು.

ಅಲ್ಲದೆ, 20ರಷ್ಟು ಸಂರಕ್ಷಿತ ಅರಣ್ಯ ಪ್ರದೇಶವಿದ್ದರೆ ಮಾತ್ರ ಪರಿಗಣಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದ್ದರೂ, ತಮ್ಮ ಭಾಗದಲ್ಲಿ ಶೇ.5ರಷ್ಟು ಸಂರಕ್ಷಿತ ಅರಣ್ಯವಿರುವ ಪ್ರದೇಶವನ್ನೂ ವರದಿ ವ್ಯಾಪ್ತಿಗೆ ಸೇರಿಸಲಾಗಿದೆ ಎಂದು ತಿಳಿಸಿದರು.

ಕಸ್ತೂರಿ ರಂಗನ್ ವರದಿಯಿಂದ ತಮ್ಮನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂಬ ಆತಂಕ ಜನರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ವಾಸ್ತವಾಂಶಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.

ತಾವು ಅರಣ್ಯವಾಸಿಗಳಾಗಿದ್ದು, ಅರಣ್ಯ ಸಂರಕ್ಷಣೆ ತಮ್ಮಿಂದಲೇ ನಡೆಯುತ್ತಿದೆ. ಹೀಗಾಗಿ ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದ ಕಾನೂನುಗಳು ತಮ್ಮ ಬದುಕಿಗೆ ತೊಂದರೆಯಾಗಬಾರದು ಎಂದು ಹೇಳಿದರು.

ಈ ಎಲ್ಲ ಕಾರಣಗಳಿಂದ ತಜ್ಞರ ಸಮಿತಿ ರಚಿಸಿ ಭೌತಿಕ ಸಮೀಕ್ಷೆ ನಡೆಸಬೇಕು. ಬಳಿಕ ಆ ವರದಿಯನ್ನು ಕೇಂದ್ರ ಸರ್ಕಾರ, ಉಚ್ಚತಮ ನ್ಯಾಯಾಲಯ ಹಾಗೂ ಹಸಿರು ನ್ಯಾಯಪೀಠದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಬೇಕು ಎಂದು ಸಂಘಟನೆಗಳು ಹಾಗೂ ಜನಪ್ರತಿನಿಧಿಗಳು ಒತ್ತಾಯಿಸಿದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande