
ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬೆಂಗಳೂರು–ಬಳ್ಳಾರಿ ನಡುವೆ ನೂತನ ಮಲ್ಟಿ ಆಕ್ಸಲ್ ಐರಾವತ ಕ್ಲಬ್ ಕ್ಲಾಸ್ ಬಸ್ ಸೇವೆಯನ್ನು ಆರಂಭಿಸಿದೆ.
ಸೆಪ್ಟೆಂಬರ್ 15ರಿಂದ ಈ ಸೇವೆ ಕಾರ್ಯಾಚರಣೆ ಆರಂಭಿಸಿದ್ದು, ಬೆಂಗಳೂರಿನ ಮೆಜೆಸ್ಟಿಕ್ನ ಕೆಂಪೇಗೌಡ ಬಸ್ ನಿಲ್ದಾಣದಿಂದ ಬಸ್ ಸಂಚರಿಸಲಿದೆ.
ಈ ಬಸ್ ಸಿರಾ, ಹಿರಿಯೂರು ಹಾಗೂ ಚಳ್ಳಕೆರೆ ಮಾರ್ಗವಾಗಿ ಬಳ್ಳಾರಿ ತಲುಪಲಿದೆ. ಬೆಂಗಳೂರಿನಿಂದ ಸಂಜೆ 4 ಗಂಟೆಗೆ ಹೊರಡುವ ಬಸ್ ರಾತ್ರಿ 8 ಗಂಟೆಗೆ ಚಳ್ಳಕೆರೆ ಹಾಗೂ ರಾತ್ರಿ 9.45ಕ್ಕೆ ಬಳ್ಳಾರಿ ತಲುಪಲಿದೆ ಎಂದು ತಿಳಿಸಲಾಗಿದೆ.
ಬಳ್ಳಾರಿಯಿಂದ ಬೆಂಗಳೂರಿನತ್ತ ಮರಳುವ ಬಸ್ ಸಂಜೆ 5.06ಕ್ಕೆ ಹೊರಟು ರಾತ್ರಿ 10.40ಕ್ಕೆ ಬೆಂಗಳೂರು ತಲುಪಲಿದೆ.ಟಿಕೆಟ್ ದರಬೆಂಗಳೂರು–ಚಳ್ಳಕೆರೆ ಪ್ರಯಾಣಕ್ಕೆ ಪ್ರತಿ ಪ್ರಯಾಣಿಕರಿಗೆ ₹634 ಹಾಗೂ ಬೆಂಗಳೂರು–ಬಳ್ಳಾರಿ ಪ್ರಯಾಣಕ್ಕೆ ₹802 ದರ ನಿಗದಿಪಡಿಸಲಾಗಿದೆ. ಐರಾವತ ಕ್ಲಬ್ ಕ್ಲಾಸ್ ಬಸ್ನಲ್ಲಿ ವಯಸ್ಕರಿಗೆ ₹802 ಮತ್ತು ಮಕ್ಕಳಿಗೆ ₹629 ದರವಾಗಿದ್ದು, ಐರಾವತ ಕ್ಲಬ್ ಕ್ಲಾಸ್ 2.0 ಬಸ್ನಲ್ಲಿ ವಯಸ್ಕರಿಗೆ ₹864 ಹಾಗೂ ಮಕ್ಕಳಿಗೆ ₹678 ದರ ಇದೆ ಎಂದು ವರದಿಯಾಗಿದೆ.
KSRTC ಅಧಿಕಾರಿಗಳ ಪ್ರಕಾರ, ಹೊಸ ಸೇವೆಯೊಂದಿಗೆ ಬೆಂಗಳೂರು–ಬಳ್ಳಾರಿ ನಡುವೆ ಈಗ ಒಟ್ಟು ಐದು ಐರಾವತ ಕ್ಲಬ್ ಕ್ಲಾಸ್ ಬಸ್ಗಳು ಪ್ರತಿದಿನ ಸಂಚರಿಸುತ್ತಿವೆ. ಪ್ರಯಾಣಿಕರ ಬೇಡಿಕೆ ಹಾಗೂ ಅನುಕೂಲವನ್ನು ಗಮನದಲ್ಲಿಟ್ಟುಕೊಂಡು ಸೇವೆಯನ್ನು ವಿಸ್ತರಿಸಲಾಗಿದೆ.
ಬೆಂಗಳೂರು ಮತ್ತು ಬಳ್ಳಾರಿ ನಡುವೆ ಪ್ರಯಾಣಿಕರ ದಟ್ಟಣೆ ಹಾಗೂ ಬೇಡಿಕೆ ಹೆಚ್ಚಾಗಿರುವುದನ್ನು ಗಮನದಲ್ಲಿಟ್ಟುಕೊಂಡು ಈ ನೂತನ ಮಲ್ಟಿ ಆಕ್ಸಲ್ ಐರಾವತ ಕ್ಲಬ್ ಕ್ಲಾಸ್ ಬಸ್ ಸೇವೆಯನ್ನು ಆರಂಭಿಸಲಾಗಿದೆ. ಸುರಕ್ಷಿತ, ಸುಖಕರ ಹಾಗೂ ಸಮಯಕ್ಕೆ ಸರಿಯಾದ ಪ್ರಯಾಣ ಒದಗಿಸುವುದೇ ನಮ್ಮ ಆದ್ಯತೆಯಾಗಿದ್ದು, ಸಾರ್ವಜನಿಕರು ಈ ನೂತನ ಸೇವೆಯ ಸೌಲಭ್ಯವನ್ನು ಪಡೆದುಕೊಳ್ಳಬೇಕಾಗಿ ಸಾರಿಗೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R