
ಬಳ್ಳಾರಿ, 17 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಪ್ರತಿಯೊಬ್ಬ ಜನಪ್ರತಿನಿಧಿಯು ತಮ್ಮ ಮಾತು ಮತ್ತು ನಡೆ-ನುಡಿಗಳ ಬಗ್ಗೆ ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಸಚಿವ ಟಿ. ರಘುಮೂರ್ತಿ ಅವರು ತಿಳಿಸಿದ್ದಾರೆ.
ಸುದ್ದಿಗಾರರ ಜೊತೆಯಲ್ಲಿ ಗುರುವಾರ ಮಾತನಾಡಿದ ಅವರು, `ಬಳ್ಳಾರಿ ಚಲೋ' ಪಾದಯಾತ್ರೆಯಲ್ಲಿ ಕಾಂಗ್ರೆಸ್ ಶಾಸಕರ ವಿರುದ್ಧ ವೈಯಕ್ತಿಕ ಟೀಕೆಗಳನ್ನು ಮಾಡಿರುವುದು ಸರಿಯಲ್ಲ. ವಿರೋಧ ಪಕ್ಷವು ಆಡಳಿತದಲ್ಲಿರುವ ಸರ್ಕಾರದ ನೀತಿಗಳು ಮತ್ತು ಕಾರ್ಯವೈಖರಿಯನ್ನು ಟೀಕಿಸಬೇಕು. ಆದರೆ, ವೈಯಕ್ತಿಕ ಬದುಕು ಮತ್ತು ವಿವಿಧ ವಿಚಾರಗಳ ಕುರಿತು ಟೀಕಿಸುವುದು ಸರಿಯಲ್ಲ. ಜನಪ್ರತಿನಿಧಿಗಳು ಜೀವನ ಗಾಜಿನ ಮನೆಯಲ್ಲಿ ಇದ್ದಂತೆ. ಜನಪ್ರತಿನಿಧಿಗಳು ಆಡುವ ಪ್ರತಿ ಮಾತು ಸಾರ್ವಜನಿಕವಾದದ್ದು. ಕಾರಣ ಎಲ್ಲರೂ ಒಳ್ಳೆಯ ಮಾತುಗಳನ್ನಾಡಬೇಕು ಎಂದರು.
ಬಳ್ಳಾರಿ ಜಿಲ್ಲೆಯಲ್ಲಿ ಜನರಿಗೆ ಬೇಕಿರುವುದು ಅಭಿವೃದ್ಧಿ, ಉತ್ತಮ ಮೂಲಸೌಕರ್ಯ ಮತ್ತು ಸಾರ್ವಜನಿಕ ಸೇವೆಗಳು. ರಾಜಕೀಯ ಮತ್ತು ವೈಯಕ್ತಿಕ ಆರೋಪ-ಪ್ರತ್ಯಾರೋಪಗಳಲ್ಲ.
ಯಾವುದೇ ರಾಜಕೀಯ ಪಕ್ಷಕ್ಕೂ - ಜನಪ್ರತಿನಿಧಿಗೂ ಅಧಿಕಾರ ಶಾಶ್ವತವಲ್ಲ. ಜನರು ಒಂದು ಚುನಾವಣೆಯಲ್ಲಿ ಅಧಿಕಾರ ನೀಡಬಹುದು, ಮತ್ತೊಂದು ಚುನಾವಣೆಯಲ್ಲಿ ತಿರಸ್ಕರಿಸಬಹುದು. ಆದ್ದರಿಂದ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ತಿಳಿದುಕೊಂಡು ಜನಸೇವೆ ಮಾಡಬೇಕು ಎಂದರು.
ಮಹರ್ಷಿ ಶ್ರೀವಾಲ್ಮೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮದಲ್ಲಿ ಶಾಸಕ ಬಿ. ನಾಗೇಂದ್ರ ಅವರ ಪಾತ್ರವಿಲ್ಲ. ಎಸ್ಐಟಿ ತನಿಖಾ ವರದಿಯಲ್ಲೂ ನಾಗೇಂದ್ರ ಅವರ ಪಾತ್ರ ಕಂಡುಬಂದಿಲ್ಲ. 2024ರಲ್ಲಿ ಕರ್ನಾಟಕದ ಎಸ್ಐಟಿ ಸಲ್ಲಿಸಿದ್ದ ಪ್ರಾಥಮಿಕ ಚಾರ್ಜ್ಶೀಟ್ನಲ್ಲಿ ಬಿ. ನಾಗೇಂದ್ರ ಅವರ ಹೆಸರಿಲ್ಲ. ಆ ಚಾರ್ಜ್ಶೀಟ್ನಲ್ಲಿ 12 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ನಂತರದ ಕೇಂದ್ರ ತನಿಖಾ ಸಂಸ್ಥೆಗಳ ತನಿಖೆಯಲ್ಲಿ ಬಿ. ನಾಗೇಂದ್ರ ಅವರ ಕುರಿತು ವಿವಿವಿಧ ಆರೋಪಗಳು ದಾಖಲಾಗಿವೆ ಎಂದರು.
2026ರ ಜೂನ್ನಲ್ಲಿ ಸಲ್ಲಿಸಿದ ಸಿಬಿಐ ಚಾರ್ಜ್ಶೀಟ್ನಲ್ಲಿ ನಾಗೇಂದ್ರ ಸೇರಿದಂತೆ 30 ಮಂದಿಯ ಪಾತ್ರದ ಬಗ್ಗೆ ಆರೋಪಿಸಲಾಗಿದೆ. `ಎಸ್ಐಟಿ ಚಾರ್ಜ್ಶೀಟ್ನಲ್ಲಿ ಹೆಸರು ಇಲ್ಲ' ಮತ್ತು 'ನಂತರದ ತನಿಖೆಯಲ್ಲಿ ಆರೋಪ' ಎಂಬ ಎರಡು ಬೆಳವಣಿಗೆಗಳನ್ನು ಗಮನಿಸಬೇಕಿದೆ. ಒಟ್ಟಿನಲ್ಲಿ, ಬಳ್ಳಾರಿಯಲ್ಲಿ 'ಬಳ್ಳಾರಿ ಚಲೋ' ನಂತರವೂ ರಾಜಕೀಯ ವಾಕ್ಸಮರ ಮುಂದುವರಿದಿದ್ದು, ವೈಯಕ್ತಿಕ ಟೀಕೆಗಳ ಬದಲು ಅಭಿವೃದ್ಧಿ ಮತ್ತು ಸಾರ್ವಜನಿಕ ಸಮಸ್ಯೆಗಳತ್ತ ಗಮನಹರಿಸಬೇಕು ಎಂದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್