
ನವದೆಹಲಿ, 17 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಶುಭಾಶಯ ಕೋರಿದ್ದು, ಪ್ರಧಾನಿ ಅವರ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ನಿರಂತರ ರಾಷ್ಟ್ರಸೇವೆಗೆ ಶಕ್ತಿ ದೊರೆಯಲಿ ಎಂದು ಹಾರೈಸಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ನಿತಿನ್ ನವೀನ್, ‘ರಾಷ್ಟ್ರವೇ ಮೊದಲು’ ಎಂಬ ಸಂಕಲ್ಪದೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನದ ಪಯಣ ಸೇವೆ, ಉತ್ತಮ ಆಡಳಿತ ಹಾಗೂ ಜನಕಲ್ಯಾಣದ ಪ್ರೇರಣಾದಾಯಕ ಗಾಥೆಯಾಗಿದೆ ಎಂದು ಹೇಳಿದ್ದಾರೆ. ಇದು ಕೇವಲ ಒಬ್ಬ ವ್ಯಕ್ತಿಯ ಪಯಣವಲ್ಲ, ದೇಶದ ಜನರ ಸಾಮೂಹಿಕ ಕನಸುಗಳಿಗೆ ದಿಕ್ಕು ನೀಡುವ ಪಯಣವೂ ಆಗಿದೆ ಎಂದು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ಭಾರತ ಅಭಿವೃದ್ಧಿ ಹಾಗೂ ಆತ್ಮನಿರ್ಭರತೆಯ ಹೊಸ ಆಯಾಮಗಳನ್ನು ನಿರ್ಮಿಸುತ್ತಿದ್ದು, ಜಾಗತಿಕ ಮಟ್ಟದಲ್ಲಿ ತನ್ನ ಗುರುತು ಮತ್ತು ಸಾಮರ್ಥ್ಯವನ್ನು ನಿರಂತರವಾಗಿ ಬಲಪಡಿಸುತ್ತಿದೆ ಎಂದು ನಿತಿನ್ ನವೀನ್ ಹೇಳಿದ್ದಾರೆ. ಪ್ರಧಾನಿ ಅವರಿಗೆ ಉತ್ತಮ ಆರೋಗ್ಯ, ದೀರ್ಘಾಯುಷ್ಯ ಹಾಗೂ ನಿರಂತರ ರಾಷ್ಟ್ರಸೇವೆಗೆ ಶಕ್ತಿ ನೀಡುವಂತೆ ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.
‘ಆಶೀರ್ವಾದದ ದೀಪ’ ಬೆಳಗಿಸಲು ಕರೆ
ಪ್ರಧಾನಿ ನರೇಂದ್ರ ಮೋದಿ ಅವರ ಸಾರ್ವಜನಿಕ ಜೀವನದ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೆ.17ರ ಸಂಜೆ 6ರಿಂದ 7 ಗಂಟೆಯೊಳಗೆ ಮನೆಗಳಲ್ಲಿ ‘ಆಶೀರ್ವಾದದ ದೀಪ’ ಬೆಳಗಿಸುವಂತೆ ನಿತಿನ್ ನವೀನ್ ದೇಶದ ಜನರಿಗೆ ಕರೆ ನೀಡಿದ್ದಾರೆ. ಈ ಮೂಲಕ ಪ್ರಧಾನಿ ಅವರಿಗೆ ಶುಭಾಶಯ ಹಾಗೂ ಆಶೀರ್ವಾದ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.
ನಿತಿನ್ ನವೀನ್ ಅವರು ಉಜ್ಜಯಿನಿಯ ರಾಮಘಾಟ್‌ನಲ್ಲಿ ‘ಆಶೀರ್ವಾದದ ದೀಪ’ ಬೆಳಗಿಸುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಳಗ್ಗೆ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿರುವ ರಕ್ತದಾನ ಶಿಬಿರಕ್ಕೂ ಅವರು ಚಾಲನೆ ನೀಡಲಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.