



ಬಳ್ಳಾರಿ, 17 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಆಡಳಿತ ವ್ಯವಸ್ಥೆಯನ್ನು ಚುರುಕುಗೊಳಿಸುವ ಉದ್ದೇಶದಿಂದ ಬಳ್ಳಾರಿ ನಗರ ಶಾಸಕ ನಾರಾ ಭರತರೆಡ್ಡಿ ಅವರು ಬಳ್ಳಾರಿ ತಾಲೂಕು ತಹಶೀಲ್ದಾರ್ ಕಚೇರಿಗೆ ಗುರುವಾರ ದಿಢೀರನೆ ಭೇಟಿ ನೀಡಿ, ಅಧಿಕಾರಿಗಳ ಕಾರ್ಯವೈಖರಿ ಹಾಗೂ ಸಾರ್ವಜನಿಕರ ಸಮಸ್ಯೆಗಳ ಕುರಿತು ಪರಿಶೀಲನೆ ನಡೆಸಿ, ಸ್ಥಳದಲ್ಲೇ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಿದ್ದಾರೆ.
ಶಾಸಕ ನಾರಾ ಭರತರೆಡ್ಡಿ ಅವರು ಗುರುವಾರ ಮಧ್ಯಾಹ್ನ, ತಹಸೀಲ್ದಾರರ ಕಚೇರಿಗೆ ಭೇಟಿ ನೀಡಿ, ‘ಕೆಲ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ, ಇನ್ನೂ ಕೆಲವರು ಕಾಲಕ್ಷೇಪ ಮಾಡುತ್ತಿದ್ದಾರೆ.
ಸೋಂಭೇರಿ ಸಿಬ್ಬಂದಿಗಳಿಗೆ - ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸವನ್ನು ಮಾಡುತ್ತಿರುವೆ' ಎಂದು ಸುದ್ದಿಗಾರರಿಗೆ ತಿಳಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು, ಜನಪ್ರತಿನಿಧಿಗಳು ಜನರ ನಡುವೆ ಇದ್ದುಕೊಂಡು ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಜನರ ಮನೆ ಬಾಗಿಲಿಗೆ ಹೋಗಿ ಮತ ಕೇಳಲು ಸೀಮಿತ ಆಗಬಾರದು, ಮತದಾರರ ಜೊತೆಯಲ್ಲಿ ನಿರಂತರ ಸಂಪರ್ಕವನ್ನು ಹೊಂದಿರಬೇಕು ಎಂದು ಹೇಳಿರುವ ಕಾರಣ, ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿ ವಿವಿಧ ಪಿಂಚಣಿಗಳ ಅರ್ಜಿಗಳ ವಿಲೇವಾರಿ ಕುರಿತು ವಿಚಾರಿಸಲು ತಹಸೀಲ್ದಾರರ ಕಚೇರಿಗೆ ಭೇಟಿ ನೀಡಿರುವೆ ಎಂದು ಹೇಳಿದರು.
ಎರಡು ದಿನಕ್ಕೆ ಒಮ್ಮೆ ತಾಲೂಕು ಕಚೇರಿಗೆ ದಿಢೀರ್ ಆಗಿ ಭೇಟಿ ನೀಡುತ್ತೇನೆ. ಕೇವಲ ತಾಲೂಕು ಕಚೇರಿ ಮಾತ್ರವಲ್ಲದೆ ವಿವಿಧ ಸರ್ಕಾರಿ ಕಚೇರಿಗಳಿಗೂ ಭೇಟಿ ನೀಡಿ ಅಧಿಕಾರಿಗಳ ಕಾರ್ಯವೈಖರಿಯನ್ನು ಪರಿಶೀಲಿಸುವ ಕೆಲಸವನ್ನು ಮಾಡುತ್ತೇನೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಜನರ ಸೇವೆ ಮಾಡಬೇಕು. ಜನರಿಗೆ ತೊಂದರೆ ನೀಡುವ ಅಧಿಕಾರಿಗಳ ವಿರುದ್ಧ ಅಗತ್ಯ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬಳ್ಳಾರಿ ತಹಶೀಲ್ದಾರ ರೇಖಾ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್