ಮಂಗಳೂರು ನಗರಾಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ: ಯತೀಂದ್ರ ಸಿದ್ದರಾಮಯ್ಯ
ಮಂಗಳೂರು, 17 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು. ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ,
MANGALURU-URBAN-DEVELOPMENT-WORKS-MUST-BE-COMPLETED-WITHIN-DEADLINE-SAYS-YATHINDRA-SIDDARAMAIAH


ಮಂಗಳೂರು, 17 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ನಗರದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸುವಂತೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳೂರು ಮಹಾನಗರ ಪಾಲಿಕೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ , ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ನಗರದ ಮಂಗಳ ಸಭಾಂಗಣದಲ್ಲಿ ಗುರುವಾರ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು ನಗರಾಭಿವೃದ್ಧಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಿದರು.

“ಎಲ್ಲಾ ಇಲಾಖೆಗಳು ಪರಸ್ಪರ ಸಮನ್ವಯ ಹಾಗೂ ಸಹಕಾರದೊಂದಿಗೆ ಕಾರ್ಯನಿರ್ವಹಿಸಬೇಕು. ಕೈಗೆತ್ತಿಕೊಂಡಿರುವ ಅಭಿವೃದ್ಧಿ ಯೋಜನೆಗಳನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು” ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರ ಸೇವೆಗಳ ಡಿಜಿಟಲೀಕರಣಕ್ಕೆ ಆದ್ಯತೆ ನೀಡಬೇಕು. ರಾಜ್ಯದ 13 ಮಹಾನಗರ ಪಾಲಿಕೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಪಾಲಿಕೆಗಳ ಎಲ್ಲ ಸೇವೆಗಳು ಹಾಗೂ ಅಗತ್ಯ ಮಾಹಿತಿಗಳು ಸಾರ್ವಜನಿಕರಿಗೆ ಸುಲಭವಾಗಿ ಡಿಜಿಟಲ್ ರೂಪದಲ್ಲಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ನಿರ್ದೇಶನ ನೀಡಿದರು.

ನೀರು, ಒಳಚರಂಡಿ ವ್ಯವಸ್ಥೆ ವಿಸ್ತರಣೆಮುಂದಿನ 25 ವರ್ಷಗಳ ನಗರದ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ನೀರು ಸಂಗ್ರಹಣಾ ಘಟಕಗಳನ್ನು ಮೇಲ್ದರ್ಜೆಗೇರಿಸಬೇಕು ಎಂದು ಸಚಿವರು ಸೂಚಿಸಿದರು.

ಮಂಗಳೂರಿನ ಒಟ್ಟು 96,300 ಮನೆಗಳ ನಳ ಸಂಪರ್ಕಗಳ ಪೈಕಿ 39,182 ಸಂಪರ್ಕಗಳು ಪೂರ್ಣಗೊಂಡಿದ್ದು, ಬಾಕಿ ಇರುವ 57,118 ಸಂಪರ್ಕ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು.

ಪ್ರಸ್ತುತ ನಗರದ ಶೇ.65ರಷ್ಟು ಪ್ರದೇಶದಲ್ಲಿ, ಅಂದರೆ 86.09 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಒಳಚರಂಡಿ ವ್ಯವಸ್ಥೆ ಲಭ್ಯವಿದೆ. ಉಳಿದ ಪ್ರದೇಶಗಳಿಗೂ ಹಂತ ಹಂತವಾಗಿ ಒಳಚರಂಡಿ ವ್ಯವಸ್ಥೆ ವಿಸ್ತರಿಸುವಂತೆ ಸೂಚಿಸಲಾಯಿತು.

ಬೀದಿ ದೀಪ ಅಳವಡಿಕೆಗೆ ವೇಗನಗರದಲ್ಲಿ ಈಗಾಗಲೇ ಶೇ.55.6ರಷ್ಟು ಪ್ರದೇಶದಲ್ಲಿ 36,643 ಬೀದಿ ದೀಪಗಳನ್ನು ಅಳವಡಿಸಲಾಗಿದೆ.

ಉಳಿದ ಪ್ರದೇಶಗಳಲ್ಲಿಯೂ ಬೀದಿ ದೀಪಗಳ ಅಳವಡಿಕೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಸೆಂಟ್ರಲ್ ಮಾರುಕಟ್ಟೆ ಕಾಮಗಾರಿ ಪರಿಶೀಲನೆಸರ್ಕಾರಿ-ಖಾಸಗಿ ಸಹಭಾಗಿತ್ವದ (PPP) ಮಾದರಿಯಲ್ಲಿ ಸುಮಾರು ₹150 ಕೋಟಿ ವೆಚ್ಚದಲ್ಲಿ 586 ಮಳಿಗೆಗಳೊಂದಿಗೆ ನಿರ್ಮಾಣವಾಗುತ್ತಿರುವ ಸೆಂಟ್ರಲ್ ಮಾರುಕಟ್ಟೆ ಕಾಮಗಾರಿ ಬಹುತೇಕ ಪೂರ್ಣಗೊಂಡಿರುವ ಕುರಿತು ಸಭೆಯಲ್ಲಿ ಪರಿಶೀಲಿಸಲಾಯಿತು.

ಕಂಕನಾಡಿ, ಕದ್ರಿ, ಉರ್ವ ಹಾಗೂ ಸುರತ್ಕಲ್ ಮಾರುಕಟ್ಟೆಗಳ ನಿರ್ಮಾಣ ಕಾಮಗಾರಿಗಳ ಪ್ರಗತಿಯನ್ನೂ ಪರಿಶೀಲಿಸಿ, ಬಾಕಿ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು.

ಶೇ.100ರಷ್ಟು ತ್ಯಾಜ್ಯ ವಿಂಗಡಣೆಗೆ ಸೂಚನೆನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಸುಮಾರು 120 ಟನ್ ಹಸಿಕಸ, 125 ಟನ್ ಮಿಶ್ರಿತ ಕಸ, 15 ಟನ್ ಎಳನೀರು ಹಾಗೂ ತೆಂಗಿನಕಾಯಿ ತ್ಯಾಜ್ಯ ಮತ್ತು 5 ಟನ್ ಸ್ಯಾನಿಟರಿ ತ್ಯಾಜ್ಯ ಸೇರಿದಂತೆ ವಾರಕ್ಕೆ ಉತ್ಪತ್ತಿಯಾಗುವ ಸುಮಾರು 250 ಟನ್ ಒಣಕಸವನ್ನು ಮೂಲದಲ್ಲಿಯೇ ಶೇ.100ರಷ್ಟು ವಿಂಗಡಿಸುವಂತೆ ಸಚಿವರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.ತ್ಯಾಜ್ಯ ವಿಂಗಡಣೆ ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ಇ-ಖಾತಾ ವಿತರಣೆ ಚುರುಕುಗೊಳಿಸಿಮಂಗಳೂರು ನಗರದಲ್ಲಿ ಒಟ್ಟು 2,22,256 ಇ-ಖಾತಾಗಳ ಪೈಕಿ 68,603 ಇ-ಖಾತಾಗಳನ್ನು ವಿತರಿಸಲಾಗಿದೆ. ಬಾಕಿ ಇರುವ ಇ-ಖಾತಾಗಳ ವಿತರಣೆ ಪ್ರಕ್ರಿಯೆಯನ್ನು ತ್ವರಿತಗೊಳಿಸಿ, ಅರ್ಹ ಸಾರ್ವಜನಿಕರಿಗೆ ಖಾತೆ ಹಾಗೂ ನಿವೇಶನ ಸಂಬಂಧಿತ ಸೇವೆಗಳಲ್ಲಿ ವಿಳಂಬವಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದರು.

ಸಾರ್ವಜನಿಕ ಶೌಚಾಲಯಗಳನ್ನು ಸ್ವಚ್ಛವಾಗಿ ಹಾಗೂ ಸುಸ್ಥಿತಿಯಲ್ಲಿಡಬೇಕು. ನಗರದ ಸಮಗ್ರ ನಿರ್ವಹಣೆ ಮತ್ತು ಸಾರ್ವಜನಿಕ ಸೇವೆಗಳ ಮೇಲ್ವಿಚಾರಣೆಗೆ ಸ್ಮಾರ್ಟ್ ಸಿಟಿ ಯೋಜನೆಯ ‘ಕಮಾಂಡ್ ಸೆಂಟರ್’ ಅನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಸಭೆಯಲ್ಲಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಶಾಸಕರಾದ ಡಾ. ಭರತ್ ಶೆಟ್ಟಿ ವೈ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜಾ, ಮೋಹನ್ ಪಿ.ವಿ., ಕಿಶೋರ್ ಕುಮಾರ್ ಬೋಟ್ಯಾಡಿ, ಮೂಡಾ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಮಾಜಿ ಮೇಯರ್ ಭಾಸ್ಕರ್ ಮೊಯ್ಲಿ, ರಾಜ್ಯ ಬೀಜ ಮತ್ತು ಜೈವಿಕ ಪ್ರಮಾಣೀಕರಣ ಸಂಸ್ಥೆಯ ಅಧ್ಯಕ್ಷೆ ಲಾವಣ್ಯ ಬಲ್ಲಾಳ್ ಜೈನ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮೊಹಮ್ಮದ್ ನಜೀರ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande