ಹೆಚ್ಚುವರಿ 53 ತಾಲೂಕುಗಳಲ್ಲಿ ಬೆಳೆ ಹಾನಿ ಪರಿಶೀಲನೆಗೆ ಸರ್ಕಾರ ಆದೇಶ
ಬೆಳೆ ಹಾನಿ ಪರಿಶೀಲನೆಗೆ ಸರ್ಕಾರ ಆದೇಶ
ಹೆಚ್ಚುವರಿ 53 ತಾಲೂಕುಗಳಲ್ಲಿ ಬೆಳೆ ಹಾನಿ ಪರಿಶೀಲನೆಗೆ ಸರ್ಕಾರ ಆದೇಶ


ಬೆಂಗಳೂರು, 17 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ರಾಜ್ಯದಲ್ಲಿ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯ ವೈಜ್ಞಾನಿಕ ಮೌಲ್ಯಮಾಪನ ಮುಂದುವರಿದಿದ್ದು, ಹೆಚ್ಚುವರಿ 53 ತಾಲೂಕುಗಳಲ್ಲಿ ಬೆಳೆ ಹಾನಿಯ ಪ್ರತ್ಯಕ್ಷ ಸ್ಥಳ ಪರಿಶೀಲನೆ ನಡೆಸಲು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್ಡಿಎಂಎ) ಆದೇಶಿಸಿದೆ.

ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಪರಾಮರ್ಶೆ ಸಭೆಯಲ್ಲಿ ನೀಡಿದ ನಿರ್ದೇಶನದಂತೆ ಈ ಕ್ರಮ ಕೈಗೊಳ್ಳಲಾಗಿದೆ. 2020ರ ಬರ ನಿರ್ವಹಣಾ ಮಾರ್ಗದರ್ಶಿಯ ನಿಯಮಾವಳಿಗಳ ಅನ್ವಯ ಪರಿಶೀಲನೆ ನಡೆಯಲಿದೆ.

ಈ ಹಿಂದೆ ಮೊದಲ ಹಂತದಲ್ಲಿ 102 ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ನಡೆಸಲಾಗಿದ್ದು, 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಈ ಪೈಕಿ 89 ತಾಲೂಕುಗಳನ್ನು ತೀವ್ರ ಬರ ಹಾಗೂ 12 ತಾಲೂಕುಗಳನ್ನು ಸಾಧಾರಣ ಬರ ಎಂದು ವರ್ಗೀಕರಿಸಲಾಗಿತ್ತು. ಬಳಿಕ 24 ತಾಲೂಕುಗಳಲ್ಲಿ ಪರಿಶೀಲನಾ ಪ್ರಕ್ರಿಯೆ ಪೂರ್ಣಗೊಂಡಿದೆ.

ಜೂನ್ 1ರಿಂದ ಸೆಪ್ಟೆಂಬರ್ 16ರವರೆಗಿನ ಅವಧಿಯ ಮಳೆ ಪ್ರಮಾಣ, ಮಣ್ಣಿನ ತೇವಾಂಶ, ಬೆಳೆ ಸೂಚ್ಯಂಕ ಸೇರಿದಂತೆ ವಿವಿಧ ವೈಜ್ಞಾನಿಕ ದತ್ತಾಂಶಗಳನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್ಎನ್ಡಿಎಂಸಿ) ವಿಶ್ಲೇಷಿಸಿದೆ. ಉಳಿದ 115 ತಾಲೂಕುಗಳ ಪೈಕಿ 17 ಜಿಲ್ಲೆಗಳ 53 ತಾಲೂಕುಗಳು ಮೂರನೇ ಹಂತದ ಪ್ರತ್ಯಕ್ಷ ಪರಿಶೀಲನೆಗೆ ಅರ್ಹತೆ ಪಡೆದಿವೆ.

ಮೊಬೈಲ್ ಆಪ್ ಮೂಲಕ ಸಮೀಕ್ಷೆಪರಿಶೀಲನೆಯನ್ನು ಪಾರದರ್ಶಕವಾಗಿ ಹಾಗೂ ನಿಖರವಾಗಿ ನಡೆಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಅಭಿವೃದ್ಧಿಪಡಿಸಿರುವ ‘Crop Loss GT’ ಮೊಬೈಲ್ ಆಪ್ ಬಳಸಲಾಗುತ್ತಿದೆ. ಸ್ಥಳದಲ್ಲೇ ಜಿಯೋ-ಟ್ಯಾಗ್ ಛಾಯಾಚಿತ್ರಗಳು, ಜಿಪಿಎಸ್ ನಿರ್ದೇಶಾಂಕಗಳು, ಜಮೀನಿನ ವಿವರ ಹಾಗೂ ಬೆಳೆ ಹಾನಿಯ ವಿಸ್ತೀರ್ಣವನ್ನು ದಾಖಲಿಸಲಾಗುತ್ತದೆ.

ಸ್ಥಳ ಪರಿಶೀಲನೆಯಲ್ಲಿ ಶೇ.33 ಅಥವಾ ಅದಕ್ಕಿಂತ ಹೆಚ್ಚು ಬೆಳೆ ನಷ್ಟ ಕಂಡುಬಂದರೆ ತಾಲೂಕನ್ನು ಬರಪೀಡಿತ ಎಂದು ಘೋಷಿಸಲು ಪರಿಗಣಿಸಲಾಗುತ್ತದೆ. ಶೇ.50ಕ್ಕಿಂತ ಹೆಚ್ಚು ಬೆಳೆ ನಷ್ಟ ಕಂಡುಬಂದರೆ ತೀವ್ರ ಬರ ಎಂದು ವರ್ಗೀಕರಿಸಲು ಅವಕಾಶವಿದೆ.

17 ಜಿಲ್ಲೆಗಳ 53 ತಾಲೂಕುಗಳುಬೆಂಗಳೂರು ದಕ್ಷಿಣ, ದೊಡ್ಡಬಳ್ಳಾಪುರ, ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮುರು, ಹರಿಹರ, ಸಿರುಗುಪ್ಪ, ಕೊಪ್ಪಳ, ಯಲಬುರ್ಗಾ, ಚಿಂಚೋಳಿ, ಜೇವರ್ಗಿ, ಸೇಡಂ, ಕಾಳಗಿ, ಕಮಲಾಪುರ, ಕಮಲಾನಗರ, ಹುಲಸೂರು, ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ರಾಯಬಾಗ, ಕಿತ್ತೂರು, ನಿಪ್ಪಾಣಿ, ಮೂಡಲಗಿ, ಯರಗಟ್ಟಿ, ಬಾದಾಮಿ, ಹುನಗುಂದ, ಮುಧೋಳ, ರಬಕವಿ-ಬನಹಟ್ಟಿ, ತೇರದಾಳ, ಮುದ್ದೇಬಿಹಾಳ, ಸಿಂಧಗಿ, ದೇವರಹಿಪ್ಪರಗಿ, ಆಲಮೇಲ, ನರಗುಂದ, ಶಿರಹಟ್ಟಿ, ಲಕ್ಷ್ಮೇಶ್ವರ, ಬ್ಯಾಡಗಿ, ಹಾನಗಲ್, ಹಾವೇರಿ, ರಾಣೇಬೆನ್ನೂರು, ಸವಣೂರು, ಶಿಗ್ಗಾಂವಿ, ಆಲೂರು, ಬೇಲೂರು, ಬ್ರಹ್ಮಾವರ, ಶೋರಾಪುರ, ಯಾದಗಿರಿ, ಗುರುಮಿಠಕಲ್, ವಡಗೇರಾ, ಹುಣಸಗಿ, ಕೊಟ್ಟೂರು ಹಾಗೂ ಕೂಡ್ಲಿಗಿ ತಾಲೂಕುಗಳಲ್ಲಿ ಪರಿಶೀಲನೆ ನಡೆಯಲಿದೆ.

ಸೆ.19ರಿಂದ 20ರವರೆಗೆ ಸ್ಥಳೀಯ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಪರಿಶೀಲನೆ ನಡೆಸಲಾಗುತ್ತದೆ. ಸೆ.21ರಂದು ಪರಿಶೀಲನೆ ಪೂರ್ಣಗೊಳಿಸಿ ಫಾರ್ಮ್-11 ಮೂಲಕ ಅಂತಿಮ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಸಂಬಂಧಪಟ್ಟ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ನಿಗದಿತ ವೇಳಾಪಟ್ಟಿಯನ್ನು ಕಡ್ಡಾಯವಾಗಿ ಪಾಲಿಸಿ, ನಿಯಮಾವಳಿಗಳಂತೆ ಸಮೀಕ್ಷೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

“ಮುಂಗಾರು ಹಂಗಾಮು ಮುಗಿಯುವವರೆಗೆ ವಾರಕ್ಕೊಮ್ಮೆ ಬರ ಪರಿಸ್ಥಿತಿಯನ್ನು ಕೆಎಸ್ಎನ್ಡಿಎಂಸಿ ಮೌಲ್ಯಮಾಪನ ಮಾಡಲಿದೆ. ಸಂಪುಟ ಉಪಸಮಿತಿಯ ಅನುಮೋದನೆಯೊಂದಿಗೆ ಮುಂದಿನ ಹಂತಗಳಲ್ಲಿ ಅಗತ್ಯವಿದ್ದರೆ ಹೆಚ್ಚುವರಿ ತಾಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್ಗೆ ಸೇರ್ಪಡೆಗೊಳಿಸಲಾಗುವುದು,” ಎಂದು ಕಂದಾಯ ಇಲಾಖೆ ಕೆಎಸ್ಡಿಎಂಎ ಆಯುಕ್ತರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande