೧ಕೋಟಿ ಲಂಚಕ್ಕೆ ಬೇಡಿಕೆ, ೫೦ ಲಕ್ಷ ಸ್ವೀಕರಿಸುವಾಗ ಧಾರವಾಡ ತಹಶೀಲ್ದಾರ್ ಲೋಕಾಯುಕ್ತ ಬಲೆಗೆ
ಧಾರವಾಡ, 17 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಆರ್‌ಟಿಸಿ ದಾಖಲೆಯ ತಿದ್ದುಪಡಿ ಹಾಗೂ ಜಮೀನಿನ ಖರಾಬು ತೆರವುಗೊಳಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಒಂದು ಎಕರೆ ಜಮೀನು ಮತ್ತು ೧ ಕೋಟಿ ನಗದು ಲಂಚಕ್ಕೆ ಬೇಡಿಕೆ ಇಟ್ಟು, ₹50 ಲಕ್ಷ ಸ್ವೀಕರಿಸುತ್ತಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರನ್ನು ಧ
ಲೋಕಾಯುಕ್ತ ಬಲೆಗೆ ಬಿದ್ದ ತಹಶಿಲ್ದಾರ ಪೋಟೋ


ಧಾರವಾಡ, 17 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಆರ್‌ಟಿಸಿ ದಾಖಲೆಯ ತಿದ್ದುಪಡಿ ಹಾಗೂ ಜಮೀನಿನ ಖರಾಬು ತೆರವುಗೊಳಿಸುವ ಕಾರ್ಯಕ್ಕೆ ಸಂಬಂಧಿಸಿದಂತೆ ಒಂದು ಎಕರೆ ಜಮೀನು ಮತ್ತು ೧ ಕೋಟಿ ನಗದು ಲಂಚಕ್ಕೆ ಬೇಡಿಕೆ ಇಟ್ಟು, ₹50 ಲಕ್ಷ ಸ್ವೀಕರಿಸುತ್ತಿದ್ದ ಧಾರವಾಡ ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರನ್ನು ಧಾರವಾಡ ಲೋಕಾಯುಕ್ತ ಪೊಲೀಸರು ಕಳೆದ ರಾತ್ರಿ ಬಲೆಗೆ ಬೀಳಿಸಿದ್ದಾರೆ.

ಧಾರವಾಡ ತಾಲೂಕಿನ ಯರಿಕೊಪ್ಪದ ಬಳಿ ಬಾಗಲಕೋಟೆ ಮೂಲದ ಅಭಿವೃದ್ಧಿದಾರ ಮಂಜುನಾಥ್ ಅರಳಿಕಟ್ಟಿ ಅವರು 33 ಎಕರೆ ಜಮೀನು ಖರೀದಿಸಿದ್ದರು. ಜಮೀನಿನ ಖರಾಬು ಮತ್ತು ಸಾಗುವಳಿ ಭೂಮಿಯನ್ನು ಪ್ರತ್ಯೇಕವಾಗಿ ಗುರುತಿಸಿ ಸರ್ವೆ ನಡೆಸಲಾಗಿತ್ತು. ಈ ಜಮೀನಿನ ದಾಖಲೆಗಳನ್ನು ಸರಿಪಡಿಸಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಆರ್‌ಟಿಸಿ ದಾಖಲೆಯ ತಿದ್ದುಪಡಿ ಕಾರ್ಯಕ್ಕೆ ಮುಂದಾಗಿದ್ದರು.

ಈ ಹಿಂದೆ ಎಡಿಎಲ್‌ಆರ್‌ ಅವರು ಮಾಡಿದ್ದ ಪೋಡಿ ಆದೇಶವನ್ನು ರದ್ದುಪಡಿಸಿದ್ದರು. ಬಳಿಕ ಖರಾಬು ಮತ್ತು ಸಾಗುವಳಿ ಭೂಮಿ ಯಾವ ಭಾಗದಲ್ಲಿ ಬರುತ್ತದೆ ಎಂಬುದರ ಕುರಿತು ಎಡಿಎಲ್‌ಆರ್‌ ಕಚೇರಿಯಿಂದ ತಹಶೀಲ್ದಾರ್‌ಗೆ ಪ್ರಸ್ತಾವನೆ ಕಳುಹಿಸಲಾಗಿತ್ತು.

ಈ ಕಾರ್ಯವನ್ನು ಮಾಡಿಕೊಡಲು ತಹಶೀಲ್ದಾರ್ ಸಚ್ಚಿದಾನಂದ ಕುಚನೂರು ಅವರು ಒಂದು ಎಕರೆ ಜಮೀನು ಹಾಗೂ ₹1 ಕೋಟಿ ನಗದು ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂದು ಲೋಕಾಯುಕ್ತ ಪೋಲಿಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ ಇಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ತಹಶೀಲ್ದಾರ್ ಲಂಚಕ್ಕೆ ಬೇಡಿಕೆ ಇಟ್ಟಿರುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆಗೆ ಸಿದ್ಧತೆ ನಡೆಸಿದ್ದರು. ಅದರಂತೆ ಕಳೆದ ರಾತ್ರಿ ₹50 ಲಕ್ಷ ಮೊದಲ ಕಂತಿನ ಹಣವನ್ನು ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ತಹಶೀಲ್ದಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.

ಈ ಸಂಬಂಧ ಧಾರವಾಡ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 007/2026ರಂತೆ ಭ್ರಷ್ಟಾಚಾರ ತಡೆ ಕಾಯ್ದೆ-1988ರ ತಿದ್ದುಪಡಿ ಕಾಯ್ದೆ-2018ರ ಸೆಕ್ಷನ್ 7(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿ ಲೋಕಾಯುಕ್ತ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ಆರೋಪಿಯನ್ನು ೧೪ ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande