ಯತ್ನಾಳರ ಆಧಾರರಹಿತ ಟೀಕೆಯಿಂದ ಯಡಿಯೂರಪ್ಪ ವ್ಯಕ್ತಿತ್ವಕ್ಕೆ ಧಕ್ಕೆಯಿಲ್ಲ: ಪರಶುರಾಮಸಿಂಗ್ ರಜಪೂತ
ವಿಜಯಪುರ, 17 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಇಡೀ ಜೀವನವನ್ನೇ ಭಾರತೀಯ ಜನತಾ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಮುಡಿಪಾಗಿಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಶಾಸಕ
ವಾಗ್ದಾಳಿ


ವಿಜಯಪುರ, 17 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಮ್ಮ ಇಡೀ ಜೀವನವನ್ನೇ ಭಾರತೀಯ ಜನತಾ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಮುಡಿಪಾಗಿಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಯಡಿಯೂರಪ್ಪ ಅವರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಆಧಾರರಹಿತ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಪರಶುರಾಮಸಿಂಗ್ ರಜಪೂತ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬಿ.ಎಸ್. ಯಡಿಯೂರಪ್ಪ ಅವರು ಕೇವಲ ಬಿಜೆಪಿಯ ಹಿರಿಯ ನಾಯಕರಲ್ಲ, ರಾಜ್ಯದ ಜನಮಾನಸದಲ್ಲಿ ತಮ್ಮದೇ ಆದ ಸ್ಥಾನ ಹೊಂದಿರುವ ಮಾಸ್ ಲೀಡರ್. ರಾಜ್ಯ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಅವರ ಹೆಸರು ಚಿರಪರಿಚಿತವಾಗಿದೆ.

ಮುಖ್ಯಮಂತ್ರಿಯಾಗಿ ಅವರು ಕೈಗೊಂಡ ಹಲವು ನಿರ್ಧಾರಗಳು ಹಾಗೂ ಕೃಷಿ ಕ್ಷೇತ್ರಕ್ಕೆ ನೀಡಿದ ಆದ್ಯತೆ, ಕೃಷಿ ಬಜೆಟ್ ಸೇರಿದಂತೆ ವಿವಿಧ ಕ್ರಮಗಳು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಗಮನಾರ್ಹವಾಗಿವೆ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ಮೊದಲು ಅವರ ದಶಕಗಳ ರಾಜಕೀಯ ಸೇವೆ ಹಾಗೂ ಪಕ್ಷ ಸಂಘಟನೆಗೆ ನೀಡಿದ ಕೊಡುಗೆಯನ್ನು ಯತ್ನಾಳ ಅವರು ಅರ್ಥಮಾಡಿಕೊಳ್ಳಬೇಕು. ವೈಯಕ್ತಿಕ ಟೀಕೆಗಳು ಅಥವಾ ಆಧಾರವಿಲ್ಲದ ಆರೋಪಗಳಿಂದ ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲ. ಬದಲಾಗಿ ಇಂತಹ ಹೇಳಿಕೆಗಳು ಹೇಳಿಕೆ ನೀಡುವವರ ರಾಜಕೀಯ ನಡೆ ಹಾಗೂ ವ್ಯಕ್ತಿತ್ವದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ ಎಂದು ರಜಪೂತ ಹೇಳಿದ್ದಾರೆ.

‘ಗುರು’ ಎಂದಿದ್ದವರ ವಿರುದ್ಧವೇ ಟೀಕೆ ಏಕೆ?

ಯತ್ನಾಳ ಅವರು ಹಿಂದೆ ಯಡಿಯೂರಪ್ಪ ಅವರನ್ನು ತಮ್ಮ ಗುರು ಎಂದು ಹೇಳಿಕೊಂಡಿದ್ದರು. ರಾಜಕೀಯವಾಗಿ ಭಿನ್ನಾಭಿಪ್ರಾಯಗಳು ಎದುರಾದ ಸಂದರ್ಭದಲ್ಲಿಯೂ ಯಡಿಯೂರಪ್ಪ ಅವರು ವೈಯಕ್ತಿಕ ದ್ವೇಷ ಬೆಳೆಸಿಕೊಳ್ಳದೆ, ಯತ್ನಾಳ ಅವರನ್ನು ಮಗನ ಸಮಾನವಾಗಿ ಪರಿಗಣಿಸಿ ಪಕ್ಷದೊಳಗೆ ಬರಮಾಡಿಕೊಂಡಿದ್ದರು. ಅಷ್ಟು ಆತ್ಮೀಯತೆಯಿಂದ ನಡೆದುಕೊಂಡ ನಾಯಕನ ವಿರುದ್ಧವೇ ಇಂದು ನಿರಂತರವಾಗಿ ವಾಗ್ದಾಳಿ ನಡೆಸುತ್ತಿರುವುದು ಸರಿಯಲ್ಲ ಎಂದು ರಜಪೂತ ತಿಳಿಸಿದ್ದಾರೆ.

ಯಡಿಯೂರಪ್ಪ ಅವರು ತಮಗೆ ನೋವುಂಟು ಮಾಡಿದ ಸಂದರ್ಭಗಳನ್ನೂ ಮರೆತು ಪಕ್ಷದ ಹಿತದೃಷ್ಟಿಯಿಂದ ಯತ್ನಾಳ ಅವರನ್ನು ಮತ್ತೆ ಪಕ್ಷದೊಂದಿಗೆ ಗುರುತಿಸಿಕೊಂಡರು. ಇಂತಹ ಹಿನ್ನೆಲೆಯಿರುವಾಗ ಯಡಿಯೂರಪ್ಪ ಅವರ ಬಗ್ಗೆ ವೈಯಕ್ತಿಕ ಸ್ವರೂಪದ ಆರೋಪಗಳನ್ನು ಮಾಡುವುದು ಸಮರ್ಥನೀಯವಲ್ಲ ಎಂದು ಅವರು ಹೇಳಿದ್ದಾರೆ.

ವಿಜಯೇಂದ್ರ ನೇತೃತ್ವದಲ್ಲಿ ಸಂಘಟನೆಗೆ ಒತ್ತು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಯುವ ನಾಯಕತ್ವದೊಂದಿಗೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯದ ವಿವಿಧ ಭಾಗಗಳಲ್ಲಿ ಕಾರ್ಯಕರ್ತರನ್ನು ಸಂಘಟಿಸುವುದು, ಪಕ್ಷದ ಚಟುವಟಿಕೆಗಳನ್ನು ಚುರುಕುಗೊಳಿಸುವುದು ಸೇರಿದಂತೆ ಸಂಘಟನಾ ಕಾರ್ಯಗಳಿಗೆ ಅವರು ಒತ್ತು ನೀಡುತ್ತಿದ್ದಾರೆ. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಸಂಘಟನೆಯ ಬಲವರ್ಧನೆಗೆ ಶ್ರಮಿಸುತ್ತಿದ್ದಾರೆ ಎಂದು ರಜಪೂತ ತಿಳಿಸಿದ್ದಾರೆ.

ವಿಜಯೇಂದ್ರ ಅವರ ವಿರುದ್ಧವೂ ಯತ್ನಾಳ ಅವರು ನಿರಂತರವಾಗಿ ಹೇಳಿಕೆ ನೀಡುತ್ತಿರುವುದು ಪಕ್ಷದ ಆಂತರಿಕ ವಿಚಾರಗಳನ್ನು ಬಹಿರಂಗ ಚರ್ಚೆಗೆ ತರುವಂತಾಗಿದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಸಾರ್ವಜನಿಕವಾಗಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುವುದು ಕಾರ್ಯಕರ್ತರಲ್ಲಿ ಗೊಂದಲಕ್ಕೆ ಕಾರಣವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಹಿಂದುತ್ವದ ಪಾಠ ಯತ್ನಾಳರಿಂದ ಕಲಿಯಬೇಕಿಲ್ಲ’

ತಾವು ಹಿಂದುತ್ವವಾದಿಯಾಗಿದ್ದು, ಹಿಂದುತ್ವದ ಪಾಠವನ್ನು ಯತ್ನಾಳ ಅವರಿಂದ ಕಲಿಯುವ ಅಗತ್ಯವಿಲ್ಲ ಎಂದು ಪರಶುರಾಮಸಿಂಗ್ ರಜಪೂತ ಹೇಳಿದ್ದಾರೆ. ಇತರ ಧರ್ಮೀಯರನ್ನು ಅವಹೇಳನ ಮಾಡುವುದು ಅಥವಾ ತೆಗಳುವುದು ಹಿಂದೂ ಸಂಸ್ಕೃತಿಯಲ್ಲ. ಹಿಂದೂತ್ವದ ಮೂಲ ಆಶಯ ಬಹುತ್ವ, ಸಹಬಾಳ್ವೆ ಹಾಗೂ ಎಲ್ಲರನ್ನು ಗೌರವದಿಂದ ಕಾಣುವ ಸಂಸ್ಕೃತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರು ಭಾರತದಲ್ಲಿನ ಮುಸ್ಲಿಮರ ಕುರಿತು ನೀಡಿರುವ ಹೇಳಿಕೆಗಳನ್ನು ಉಲ್ಲೇಖಿಸಿದ ರಜಪೂತ, ದೇಶದ ವೈವಿಧ್ಯತೆಯನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯ ಪ್ರಮುಖ ಅಂಶವಾಗಿದೆ ಎಂದು ಹೇಳಿದ್ದಾರೆ. ಎಲ್ಲ ಧರ್ಮಗಳ ಜನರನ್ನು ಭಾವೈಕ್ಯತೆಯಿಂದ ಕಾಣುವ ಪರಂಪರೆಯೇ ಹಿಂದೂ ಸಂಸ್ಕೃತಿಯ ವಿಶೇಷತೆ. ಈ ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುವವರು ತಮ್ಮನ್ನು ತಾವು ಹಿಂದುತ್ವದ ನಾಯಕರೆಂದು ಬಿಂಬಿಸಿಕೊಳ್ಳುವುದು ಹೇಗೆ ಎಂಬುದನ್ನು ಯತ್ನಾಳ ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿಯ ಹಿರಿಯ ನಾಯಕರು, ರಾಜ್ಯಾಧ್ಯಕ್ಷರು ಹಾಗೂ ಪಕ್ಷದ ಸಂಘಟನೆಯ ವಿರುದ್ಧ ನಿರಂತರವಾಗಿ ಹೇಳಿಕೆ ನೀಡುವ ಬದಲು ಪಕ್ಷದ ಹಿತದೃಷ್ಟಿಯಿಂದ ರಚನಾತ್ಮಕವಾಗಿ ನಡೆದುಕೊಳ್ಳಬೇಕು. ವೈಯಕ್ತಿಕ ಆರೋಪಗಳಿಂದ ಪಕ್ಷಕ್ಕೆ ಯಾವುದೇ ಪ್ರಯೋಜನವಿಲ್ಲ. ಕಾರ್ಯಕರ್ತರು ಹಾಗೂ ಪಕ್ಷದ ಸಂಘಟನೆ ಬಲಿಷ್ಠವಾಗುವುದು ಎಲ್ಲರ ಆದ್ಯತೆಯಾಗಬೇಕು ಎಂದು ರಜಪೂತ ಒತ್ತಾಯಿಸಿದ್ದಾರೆ.

“ಯಡಿಯೂರಪ್ಪ ಅವರ ದೀರ್ಘಕಾಲದ ರಾಜಕೀಯ ಸೇವೆ ಮತ್ತು ಪಕ್ಷ ಸಂಘಟನೆಗೆ ನೀಡಿದ ಕೊಡುಗೆಯನ್ನು ಯಾರೊಬ್ಬರ ಹೇಳಿಕೆಗಳಿಂದಲೂ ಅಳಿಸಲಾಗದು. ಯತ್ನಾಳ ಅವರು ವೈಯಕ್ತಿಕ ಟೀಕೆಗಳನ್ನು ಬದಿಗಿಟ್ಟು ಪಕ್ಷದ ಸಂಘಟನೆ ಹಾಗೂ ಸಾರ್ವಜನಿಕ ಹಿತದ ವಿಚಾರಗಳತ್ತ ಗಮನಹರಿಸಬೇಕು” ಎಂದು ಅವರು ತಿಳಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande