
ಕೋಲಾರ, 14 ಸೆಪ್ಟೆಂಬರ್ (ಹಿ.ಸ)
ಆ್ಯಂಕರ್ : ನಗರಸಭೆಯ ನಿವೇಶನ ಮಂಜೂರಾತಿಯ ಪೋರ್ಜರಿ ಆರೋಪ ಎದುರಿಸುತ್ತಿರುವ ವಿವಾದಾತ್ಮಕ ಮಹಿಳಾ ಸಮಾಜ ಆಡಳಿತ ಮಂಡಳಿಗೆ ನಗರಸಭೆಗೆ ಸೇರಿದ ನಿವೇಶನ ಮತ್ತು ಕಟ್ಟಡಗಳನ್ನು ಗುತ್ತಿಗೆ ನೀಡಲು ಪೂರ್ವಾನುಮತಿ ಮಂಜೂರು ಮಾಡಲು ಕೋರಿ ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಮಹಿಳಾ ಸಮಾಜ ಆಡಳಿತ ಮಂಡಳಿ ನಗರಸಭೆಗೆ ಸೇರಿದ ಆಸ್ತಿಯ ದಾಖಲೆಗಳನ್ನು ತಿದ್ದಿರುವ ಗಂಭೀರ ಆರೋಪವನ್ನು ಎದುರಿಸುತ್ತಿದೆ. ಈಗಾಗಲೇ ಮಹಿಳಾ ಸಮಾಜ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಅನುಮತಿ ಕೋರಿ ಹಿಂದಿನ ಜಿಲ್ಲಾಧಿಕಾರಿ ಪೌರಾಡಳಿತ ನಿರ್ದೇಶಕರಿಗೆ ಪತ್ರ ಬರೆದಿದ್ದರು.
ಆದರೆ ಹಿಂದಿನ ಜಿಲ್ಲಾಧಿಕಾರಿಗಳ ಕ್ರಮಕ್ಕೆ ವಿರುದ್ಧವಾಗಿ ಹಾಲಿ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್ ನಗರಸಭೆಯ ಆಸ್ತಿಯನ್ನು ಮಹಿಳಾ ಸಮಾಜ ಶಾಲೆಗೆ ಮಂಜೂರು ಮಾಡುವಂತೆ ಪತ್ರ ಬರೆದಿದ್ದಾರೆ. ರವಿಯವರು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಮಹಿಳಾ ಸಮಾಜ ಆಡಳಿತ ಮಂಡಳಿಯ ಪರವಾಗಿ ಆಡಳಿತಾತ್ಮಕ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ನಿರ್ಧಾರದ ವಿರುದ್ಧ ರಾಜಕೀಯ ಮತ್ತು ಸ್ಥಳೀಯ ವ್ಯಕ್ತಿಗಳ ಪ್ರಭಾವ ಮತ್ತು ಒತ್ತಡ ಇರುವುದಾಗಿ ಶಂಕಿಸಲಾಗಿದೆ.
ಮಹಿಳಾ ಸಮಾಜ ಸಂಸ್ಥೆಯು ಬಳಸುತ್ತಿರುವ ಜಾಗಕ್ಕೆ ಸಂಬಂಧಿಸಿದಂತೆ ನಗರಸಭೆಯಿಂದ ನೋಂದಣಿಯಾಗದ ಡೀಡ್ ಮೂಲಕ ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಆಸ್ತಿಯನ್ನು ಹಸ್ತಾಂತರ ಮಾಡಲಾಗಿತ್ತು. ನಗರಸಭೆ ಈ ಕ್ರಮವನ್ನು ವಿರೋಧಿಸಿ ಕೋಲಾರ ನಗರಸಭೆಯ ಮಾಜಿ ಉಪಾಧ್ಯಕ್ಷ ಪ್ರವೀಣ್ಗೌಡ ಹಾಗೂ ಸದಸ್ಯ ಮುರಳಿಗೌಡರು ಅಂದಿನ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದರು. ದೂರು ಪರಿಶೀಲಿಸಿದ ಅಂದಿನ ಜಿಲ್ಲಾಧಿಕಾರಿ ಜಿ. ಮಂಜುನಾಥ್ ನೋಂದಣಿಯಾಗದೆ ನಗರಸಭೆಯ ಆಸ್ತಿಯನ್ನು ಮಹಿಳಾ ಸಮಾಜ ಆಡಳಿತ ಮಂಡಳಿಗೆ ಗುತ್ತಿಗೆ ನೀಡಿದ ಕ್ರಮವನ್ನು ರದ್ದುಪಡಿಸಿದ್ದರು. ಸರ್ಕಾರಿ ನಿಯಮಗಳ ಪ್ರಕಾರ ಲೋಕೋಪಯೋಗಿ ಇಲಾಖೆ ನಿಗಧಿಪಡಿಸಿದ ಧರಗಳ ಪ್ರಕಾರ ಬಹಿರಂಗವಾಗಿ ಹರಾಜು ಹಾಕಬೇಕಾಗಿದೆ. ಆದರೆ ಹರಾಜು ಹಾಕದೆ ನಗರಸಭೆಗೆ ಆರ್ಥಿಕವಾಗಿ ನಷ್ಟ ಮಾಡಲಾಗಿತ್ತು.
ಈ ಕ್ರಮವನ್ನು ಪ್ರಶ್ನೆ ಮಾಡಿ ಮಹಿಳಾ ಸಮಾಜ ಆಡಳಿತ ಮಂಡಳಿ ಹೈ-ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ರಿಟ್ ಅರ್ಜಿಯನ್ನು ಇತ್ಯರ್ಥಪಡಿಸಿದ ಹೈ ಕೋರ್ಟ್ ದಾಖಲೆಗಳನ್ನು ತಿದ್ದಿದ ಮಹಿಳಾ ಸಮಾಜ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಸಲು ಹಾಗೂ ಸರ್ಕಾರ ಘಟನೋತ್ತರ ಮಂಜೂರಾತಿ ಮಾಡುವಂತೆ ಆದೇಶ ನೀಡಿತ್ತು.
ಕೋಲಾರದ ಸರ್ಕಾರದ ಬಾಲಕರ ಕಾಲೇಜು ಆವರಣದಲ್ಲಿ ನವೆಂಬರ್ ೧೯೩೬ ರಲ್ಲಿ ಸ್ಥಾಪನೆಯಾದ ಮಹಿಳಾ ಸಮಾಜವು ಸಾಂಪ್ರದಾಯಿಕವಾಗಿ ಶಾಲೆಗಳು ಮತ್ತು ಶಿಶುವಿಹಾರವನ್ನು ನಡೆಸಿಕೊಂಡು ಬರುತ್ತಿದೆ. ಮಾರ್ಚ್ ೨೦೧೬ ರಲ್ಲಿ, ಖಾಲಿ ಮಾಡುವಂತೆ ನೀಡಿದ್ದ ಹಿಂದಿನ ನಗರಸಭೆ ನೋಟೀಸ್ ಗಳ ನಂತರ, ನಗರಸಭೆ ಆಯುಕ್ತರು ಮಾಸಿಕ ಬಾಡಿಗೆ ರೂ. ೨೧,೬೦೦/- ನಿಗದಿಪಡಿಸಿ ೧೨ ವರ್ಷಗಳ ಕಾಲಾವಧಿಗೆ ಜಾಗವನ್ನು ಗುತ್ತಿಗೆ ಆಧಾರದ ಮೇಲೆ ನೀಡಿದ್ದರು ಹಾಗೂ ಬಾಡಿಗೆ ಸಂಪೂರ್ಣವಾಗಿ ಪಾವತಿಸಲಾಗಿದೆ. ಆದರೆ ಸರ್ಕಾರದ ನಿಯಮಗಳ ಪ್ರಕಾರ ಮಾಡಿಲ್ಲವೆಂಬ ಕಾರಣಕ್ಕೆ ಕೋಲಾರ ಜಿಲ್ಲಾಧಿಕಾರಿಗಳು ಡಿಸೆಂಬರ್ ೫, ೨೦೧೮ ರಂದು ಈ ಗುತ್ತಿಗೆಯನ್ನು ರದ್ದುಗೊಳಿಸಲು ಆದೇಶಿಸಿದರು. ಇದರ ಪರಿಣಾಮವಾಗಿ ಜನವರಿ ೭, ೨೦೧೯ ರಂದು ಖಾಲಿ ಮಾಡುವಂತೆ ನೋಟೀಸ್ ನೀಡಲಾಯಿತು.
ಗುತ್ತಿಗೆ ರದ್ದತಿಯನ್ನು ಪ್ರಶ್ನಿಸಿ ಮಹಿಳಾ ಸಮಾಜದ ಆಡಳಿತ ಮಂಡಳಿಯು ಬೆಂಗಳೂರಿನ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಜೂನ್ ೧೫, ೨೦೨೩ ರಂದು ಹೈಕೋರ್ಟ್ ಅರ್ಜಿಯನ್ನು ಇತ್ಯರ್ಥಪಡಿಸಿ ಜಿಲ್ಲಾಧಿಕಾರಿಯವರ ೨೦೧೮ ರ ಆದೇಶ ಮತ್ತು ೨೦೧೯ ರ ಖಾಲಿ ಮಾಡುವ ನೋಟೀಸನ್ನು ರದ್ದುಗೊಳಿಸಿತು. ಅಲ್ಲದೆ, ೧೨ ವರ್ಷಗಳ ಗುತ್ತಿಗೆಗೆ ಪೂರ್ವಾನ್ವಯ ಅನುಮೋದನೆ ಪಡೆಯುವಂತೆ ನಗರಸಭೆ ಆಯುಕ್ತರಿಗೆ ನಿರ್ದೇಶನ ನೀಡಿತು. ಆಸ್ತಿಯು ಶಾಲೆಯ ಉದ್ದೇಶಕ್ಕಾಗಿ ಮಾತ್ರ ಗುತ್ತಿಗೆಗೆ ನೀಡಲಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ಈ ಕೋರಿಕೆಯನ್ನು ಮೂರು ತಿಂಗಳಲ್ಲಿ ಪರಿಶೀಲಿಸಬೇಕಿದೆ.
ಆಡಳಿತ ಮಂಡಳಿಯ ವಿರುದ್ಧ ಜೂನ್ ೧೯೬೩ ರ ನಕಲಿ ಮಾರಾಟ ಪತ್ರಗಳು ಮತ್ತು ದಾಖಲೆ ತಿದ್ದಿದ ಆರೋಪಗಳ ಕುರಿತು ಕ್ರಿಮಿನಲ್ ದೂರುಗಳು ದಾಖಲಾಗಿವೆ. ಸರ್ಕಾರದ ಆಸ್ತಿಯನ್ನು ಕ್ಲೈಮ್ ಮಾಡಲು ಅಕ್ರಮ ದಾಖಲೆಗಳನ್ನು ಸೃಷ್ಟಿಸಿರುವ ಕುರಿತು ಸೆಕ್ಷನ್ ೮೨ ರ ಅಡಿಯಲ್ಲಿ ಕ್ರಿಮಿನಲ್ ಕ್ರಮ ಕೈಗೊಳ್ಳಲು ಹೈಕೋರ್ಟ್ ತೀರ್ಪಿನಲ್ಲಿ ಸೂಚಿಸಲಾಗಿದೆ.
ಮಾಜಿ ನಗರಸಭಾ ಉಪಾಧ್ಯಕ್ಷ ಪ್ರವೀಣ್ಗೌಡ ಜಿಲ್ಲಾಧಿಕಾರಿಗಳ ಈ ಕ್ರಮವನ್ನು ತೀವ್ರವಾಗಿ ವಿರೋಧಿಸಿದ್ದಾರೆ. ನಗರಸಭೆಯಿಂದ ಕೇವಲ ನೂರು * ಎಂಬತ್ತು ಅಡಿಗಳ ನಿವೇಶನ ಗುತ್ತಿಗೆ ನೀಡಲಾಗಿತ್ತು. ಆದರೆ ಮಹಿಳಾ ಸಮಾಜ ಆಡಳಿತ ಮಂಡಳಿ ಇಡೀ ನಿವೇಶನವನ್ನು ಒತ್ತುವರಿ ಮಾಡಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಿದೆ. ಕಟ್ಟಡಗಳ ನಿರ್ಮಾಣಕ್ಕೆ ನಗರಸಭೆಯಿಂದ ಲೈಸೆನ್ಸ್ ಪಡೆದಿಲ್ಲ. ಜಿಲ್ಲಾಧಿಕಾರಿಗಳು ಒತ್ತಡಕ್ಕೆ ಮಣಿದು ಆತುರದಲ್ಲಿ ಕ್ರಮ ಕೈಗೊಂಡಿದ್ದಾರೆ. ರಾಜ್ಯ ಹೈ ಕೋರ್ಟ್ ೨೦೨೩ರಲ್ಲಿ ಆದೇಶ ಹೊರಡಿಸಿ ಮೂರು ತಿಂಗಳಲ್ಲಿ ಘಟನೋತ್ತರ ಮಂಜೂರಾತಿ ನೀಡುವಂತೆ ಆದೇಶಿಸಿತ್ತು. ಆದರೆ ಹೈಕೋರ್ಟ್ ನೀಡಿದ ಗಡುವು ಮುಗಿದು ಹೋಗಿದೆ. ಕಳೆದ ವಾರ ಕೋಲಾರದಲ್ಲಿ ನಡೆದ ಪ್ರಜಾಸೇವಾ ಆಂದೋಲದಲ್ಲಿ ಸರ್ಕಾರಿ ಆಸ್ತಿಗಳನ್ನು ರಕ್ಷಣೆ ಮಾಡಲು ಮತ್ತು ತೆರವು ಮಾಡಲು ಆಂದೋಲನ ನಡೆಸುವುದಾಗಿ ಕೋಲಾರ ಶಾಸಕರು ಮತ್ತು ಇತರ ಜನಪ್ರತಿನಿಧಿಗಳು ಹೇಳಿದ್ದರು. ಆದರೆ, ಕೋಟ್ಯಾಂತರ ರೂಪಾಯಿ ಬೆಲೆಬಾಳುವ ನಗರಸಭೆಯ ಆಸ್ತಿಯನ್ನು ಒತ್ತುವರಿ ಮಾಡಿದ್ದರೂ ಆಡಳಿತ ಮಂಡಳಿಯ ಪರವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪ್ರವೀಣ್ಗೌಡರು ಆರೋಪಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್