ಬ್ರಿಕ್ಸ್ ಘೋಷಣಾಪತ್ರ: ಭಾರತೀಯ ಉದ್ಯಮಗಳಿಗೆ ಜಾಗತಿಕ ಮಾರುಕಟ್ಟೆ ವಿಸ್ತರಣೆಗೆ ಹೊಸ ಅವಕಾಶ; ಖಂಡೇಲ್ವಾಲ್
ನವದೆಹಲಿ, 13 ಸೆಪ್ಟೆಂಬರ್ (ಹಿ.ಸ.): ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆ-2026ರಲ್ಲಿ ಅಂಗೀಕರಿಸಲಾದ ‘ನವ ದೆಹಲಿ ಘೋಷಣಾಪತ್ರ’ ಭಾರತಕ್ಕೆ ಐತಿಹಾಸಿಕ ಸಾಧನೆಯಾಗಿದ್ದು, ದೇಶದ ವ್ಯಾಪಾರಿಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ನವೋದ್ಯಮಗಳು
18वें ब्रिक्स शिखर सम्मेलन का फोटो


ನವದೆಹಲಿ, 13 ಸೆಪ್ಟೆಂಬರ್ (ಹಿ.ಸ.):

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತದ ಅಧ್ಯಕ್ಷತೆಯಲ್ಲಿ ನಡೆದ 18ನೇ ಬ್ರಿಕ್ಸ್ ಶೃಂಗಸಭೆ-2026ರಲ್ಲಿ ಅಂಗೀಕರಿಸಲಾದ ‘ನವ ದೆಹಲಿ ಘೋಷಣಾಪತ್ರ’ ಭಾರತಕ್ಕೆ ಐತಿಹಾಸಿಕ ಸಾಧನೆಯಾಗಿದ್ದು, ದೇಶದ ವ್ಯಾಪಾರಿಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ನವೋದ್ಯಮಗಳು ಹಾಗೂ ರಫ್ತುದಾರರಿಗೆ ವ್ಯಾಪಾರ, ಹೂಡಿಕೆ ಮತ್ತು ಉದ್ಯಮ ವಿಸ್ತರಣೆಯ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದು ಚಾಂದಿನಿ ಚೌಕ್ ಸಂಸದ ಹಾಗೂ ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಖಂಡೇಲ್ವಾಲ್ ಹೇಳಿದ್ದಾರೆ.

18ನೇ ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾದ ನವ ದೆಹಲಿ ಘೋಷಣಾಪತ್ರದ ಕುರಿತು ಭಾನುವಾರ ಪ್ರತಿಕ್ರಿಯಿಸಿದ ಅವರು, ಜಾಗತಿಕ ಮಟ್ಟದಲ್ಲಿ ಭಾರತದ ಹೆಚ್ಚುತ್ತಿರುವ ಪ್ರಭಾವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಯಶಸ್ವಿ ನಾಯಕತ್ವಕ್ಕೆ ಈ ಘೋಷಣಾಪತ್ರ ಸಾಕ್ಷಿಯಾಗಿದೆ. ಭಾರತ ಇಂದು ಜಾಗತಿಕ ವೇದಿಕೆಯಲ್ಲಿ ಬಲಿಷ್ಠ ಹಾಗೂ ವಿಶ್ವಾಸಾರ್ಹ ಧ್ವನಿಯಾಗಿ ಹೊರಹೊಮ್ಮಿದೆ ಎಂದು ಹೇಳಿದರು.

ವ್ಯಾಪಾರ ಸುಗಮತೆ, ಸ್ಥಳೀಯ ಕರೆನ್ಸಿಗಳಲ್ಲಿ ವಹಿವಾಟು, ಡಿಜಿಟಲ್ ಪಾವತಿ, ತಾಂತ್ರಿಕ ಸಹಕಾರ, ಬಲಿಷ್ಠ ಪೂರೈಕೆ ಸರಪಳಿ ಹಾಗೂ ಆರ್ಥಿಕ ಪಾಲುದಾರಿಕೆಗಳಿಗೆ ಘೋಷಣಾಪತ್ರದಲ್ಲಿ ನೀಡಿರುವ ಆದ್ಯತೆಯಿಂದ ಭಾರತೀಯ ಉದ್ಯಮಗಳಿಗೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಮಾರುಕಟ್ಟೆಗಳಲ್ಲಿ ವಿಸ್ತರಿಸಲು ಹೊಸ ಅವಕಾಶಗಳು ದೊರೆಯಲಿವೆ ಎಂದು ಖಂಡೇಲ್ವಾಲ್ ತಿಳಿಸಿದರು.

ನ್ಯಾಯಸಮ್ಮತ ಹಾಗೂ ನಿಯಮಾಧಾರಿತ ಜಾಗತಿಕ ವ್ಯಾಪಾರ ವ್ಯವಸ್ಥೆಯ ಬದ್ಧತೆಯನ್ನು ಸ್ವಾಗತಿಸಿದ ಅವರು, ಸಂರಕ್ಷಣಾತ್ಮಕ ವ್ಯಾಪಾರ ನೀತಿಗಳಿಗೆ ವಿರೋಧ ವ್ಯಕ್ತಪಡಿಸಿರುವುದು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅನುಕೂಲವಾಗಲಿದೆ. ಇದರಿಂದ ಅಂತರರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಗೆ ಮತ್ತಷ್ಟು ಬಲ ದೊರೆಯಲಿದೆ ಎಂದರು.

‘ಆತ್ಮನಿರ್ಭರ ಭಾರತ’, ‘ಮೇಕ್ ಇನ್ ಇಂಡಿಯಾ’, ‘ವೋಕಲ್ ಫಾರ್ ಲೋಕಲ್’ ಹಾಗೂ ‘ಲೋಕಲ್ ಟು ಗ್ಲೋಬಲ್’ ಪರಿಕಲ್ಪನೆಗಳಿಗೆ ನವ ದೆಹಲಿ ಘೋಷಣಾಪತ್ರದ ಆಶಯಗಳು ಹೊಂದಿಕೆಯಾಗುತ್ತವೆ. ಭಾರತೀಯ ಉತ್ಪಾದಕರು, ವ್ಯಾಪಾರಿಗಳು ಹಾಗೂ ಉದ್ಯಮಿಗಳು ಜಾಗತಿಕ ಮೌಲ್ಯ ಸರಪಳಿಗಳೊಂದಿಗೆ ಸಂಪರ್ಕ ಸಾಧಿಸಲು ಇದು ಹೆಚ್ಚಿನ ಅವಕಾಶಗಳನ್ನು ಒದಗಿಸಲಿದೆ ಎಂದು ಅವರು ಹೇಳಿದರು.

ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಕೃತಕ ಬುದ್ಧಿಮತ್ತೆ, ನವೋದ್ಯಮ ಹಾಗೂ ಹಣಕಾಸು ತಂತ್ರಜ್ಞಾನ ಕ್ಷೇತ್ರಗಳಿಗೆ ನೀಡಿರುವ ವಿಶೇಷ ಆದ್ಯತೆಯನ್ನು ಖಂಡೇಲ್ವಾಲ್ ಸ್ವಾಗತಿಸಿದರು. ಈ ಕ್ಷೇತ್ರಗಳಲ್ಲಿ ಭಾರತ ವೇಗವಾಗಿ ಜಾಗತಿಕ ನಾಯಕತ್ವದತ್ತ ಮುನ್ನಡೆಯುತ್ತಿದೆ ಎಂದರು.

ಭಯೋತ್ಪಾದನೆ ವಿರುದ್ಧ ಅಳವಡಿಸಿಕೊಂಡಿರುವ ಕಠಿಣ ನಿಲುವು ಕೂಡ ಭಾರತದ ದೀರ್ಘಕಾಲದ ನೀತಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ದೊರೆತಿರುವ ಬೆಂಬಲಕ್ಕೆ ಸಾಕ್ಷಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ನವ ದೆಹಲಿ ಘೋಷಣಾಪತ್ರದ ಆಶಯಗಳಿಗೆ ಅನುಗುಣವಾಗಿ ‘ಬ್ರಿಕ್ಸ್ ವ್ಯಾಪಾರ ಸಂಪರ್ಕ ಅಭಿಯಾನ’ ಆರಂಭಿಸುವಂತೆ ಖಂಡೇಲ್ವಾಲ್ ಸಲಹೆ ನೀಡಿದರು. ಇದರ ಮೂಲಕ ಭಾರತೀಯ ವ್ಯಾಪಾರಿಗಳು ಮತ್ತು ಸಣ್ಣ ಹಾಗೂ ಮಧ್ಯಮ ಉದ್ಯಮಗಳಿಗೆ ಮಾರುಕಟ್ಟೆ ಕುರಿತ ಮಾಹಿತಿ, ಖರೀದಿದಾರರು-ಮಾರಾಟಗಾರರ ಸಭೆಗಳು, ರಫ್ತು ನೆರವು ಹಾಗೂ ವಾಣಿಜ್ಯ ಸಂಪರ್ಕ ಜಾಲದಂತಹ ಸೌಲಭ್ಯಗಳನ್ನು ಒದಗಿಸಬಹುದು ಎಂದು ಹೇಳಿದರು.

“ನವ ದೆಹಲಿ ಘೋಷಣಾಪತ್ರ ಕೇವಲ ರಾಜತಾಂತ್ರಿಕ ದಾಖಲೆಯಲ್ಲ. ಇದು ಆರ್ಥಿಕ ಅಭಿವೃದ್ಧಿ, ವ್ಯಾಪಾರ ವಿಸ್ತರಣೆ ಹಾಗೂ ಜಾಗತಿಕ ಸಹಕಾರದ ದೂರದೃಷ್ಟಿಯ ಮಾರ್ಗಸೂಚಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಜಾಗತಿಕ ಆರ್ಥಿಕ ವ್ಯವಸ್ಥೆಯ ನಿರ್ಮಾಣದಲ್ಲಿ ಭಾರತ ಮಹತ್ವದ ಪಾತ್ರ ವಹಿಸುತ್ತಿದೆ. ಇದರ ನೇರ ಪ್ರಯೋಜನ ದೇಶದ ವ್ಯಾಪಾರಿಗಳು, ಉದ್ಯಮಿಗಳು, ಸಣ್ಣ ಮತ್ತು ಮಧ್ಯಮ ಉದ್ಯಮಗಳು ಹಾಗೂ ಕೈಗಾರಿಕಾ ವಲಯಕ್ಕೆ ದೊರೆಯಲಿದೆ” ಎಂದು ಖಂಡೇಲ್ವಾಲ್ ಹೇಳಿದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande