
ಬೆಂಗಳೂರು, 12 ಸೆಪ್ಟೆಂಬರ್ (ಹಿ.ಸ.):
ಆ್ಯಂಕರ್:ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಳದ ಹಿನ್ನೆಲೆಯಲ್ಲಿ ವ್ಯಾಪಕ ವಿದ್ಯುತ್ ಕಡಿತ ಉಂಟಾಗಿದ್ದು, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರ ನಿಷ್ಕ್ರಿಯತೆ ಮತ್ತು ಪೂರ್ವಯೋಜನೆಯ ಕೊರತೆಯೇ ಇದಕ್ಕೆ ಕಾರಣ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ವಿದ್ಯುತ್ ಬೇಡಿಕೆ 20 ಸಾವಿರ ಮೆಗಾವಾಟ್‌ಗೆ ಏರಿಕೆಯಾಗಿದೆ ಎಂದು ತಾಂತ್ರಿಕ ಕಾರಣಗಳನ್ನು ನೀಡುತ್ತಿರುವ ಸರ್ಕಾರ, ಮುಂಗಾರು ಕ್ಷೀಣಿಸುವ ಮುನ್ಸೂಚನೆ ಇದ್ದಾಗಲೇ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿತ್ತು ಎಂದು ಟೀಕಿಸಿದ್ದಾರೆ.
ಬೆಳಿಗ್ಗೆ ಹಾಗೂ ಸಂಜೆ 6.30ರ ನಂತರ ರಾಜ್ಯದಾದ್ಯಂತ ನಿರಂತರ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಅಸ್ಸಾಂ ಮತ್ತು ಜಿಂದಾಲ್ ಕಂಪನಿಯಿಂದ ತಲಾ 100 ಮೆಗಾವಾಟ್ ವಿದ್ಯುತ್ ಖರೀದಿಸಿ ಪರಿಸ್ಥಿತಿ ನಿಭಾಯಿಸುತ್ತಿದ್ದೇವೆ ಎಂದು ಹೇಳಲಾಗುತ್ತಿದೆ. ಆದರೆ 20 ಸಾವಿರ ಮೆಗಾವಾಟ್ ಬೇಡಿಕೆ ಇರುವಾಗ ಕೇವಲ 200 ಮೆಗಾವಾಟ್ ವಿದ್ಯುತ್ ಖರೀದಿಸುವುದು ಯಾವ ರೀತಿಯ ಆಡಳಿತ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಮುಂಗಾರು ಕ್ಷೀಣಿಸಿ ವಿದ್ಯುತ್ ಅಭಾವ ಉಂಟಾಗುವ ಮುನ್ಸೂಚನೆ ಇದ್ದರೂ, ಪೂರ್ವಭಾವಿಯಾಗಿ ವಿದ್ಯುತ್ ಖರೀದಿ ಒಪ್ಪಂದಗಳನ್ನು ಮಾಡಿಕೊಳ್ಳದೆ ಇಂಧನ ಇಲಾಖೆ ಏನು ಮಾಡುತ್ತಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
‘ಉಚಿತ ವಿದ್ಯುತ್’ ಎಂದು ಗ್ಯಾರಂಟಿ ಕಾರ್ಡ್ ಹಂಚಿದ ಕಾಂಗ್ರೆಸ್ ಸರ್ಕಾರ ಈಗ ರಾಜ್ಯದ ಜನರಿಗೆ ‘ಉಚಿತ ಕತ್ತಲೆ’ಯನ್ನು ಗ್ಯಾರಂಟಿಯಾಗಿ ನೀಡುತ್ತಿದೆಯೇ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.
ವಿದ್ಯುತ್ ಕೊರತೆಯಿಂದ ನೀರಿಗಾಗಿ ಪರದಾಡುತ್ತಿರುವ ರೈತರು, ವ್ಯಾಪಾರ-ಉದ್ಯಮ ನಡೆಸಲಾಗದೆ ಸಂಕಷ್ಟದಲ್ಲಿರುವ ಜನರು ಹಾಗೂ ಓದಲು ಬೆಳಕಿಲ್ಲದೆ ಪರಿತಪಿಸುತ್ತಿರುವ ವಿದ್ಯಾರ್ಥಿಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ, ಮೈಸೂರು, ಕೋಲಾರ, ಧಾರವಾಡ, ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಕಲ್ಯಾಣ ಕರ್ನಾಟಕ ಸೇರಿದಂತೆ ರಾಜ್ಯದ ವಿವಿಧೆಡೆ ಎಸ್ಕಾಂ ಕಚೇರಿಗಳಿಗೆ ಜನರು ಮುತ್ತಿಗೆ ಹಾಕುತ್ತಿದ್ದಾರೆ ಎಂದು ಅಶೋಕ್ ತಿಳಿಸಿದ್ದಾರೆ.
ಸಮಾವೇಶ ಮತ್ತು ಸಮಾರಂಭಗಳಲ್ಲಿ ಮೆರೆಯುವುದನ್ನು ಬಿಟ್ಟು ಸರ್ಕಾರ ತಕ್ಷಣ ತುರ್ತು ಕ್ರಮ ಕೈಗೊಂಡು ರಾಜ್ಯಕ್ಕೆ ಪೂರ್ಣ ಪ್ರಮಾಣದ ವಿದ್ಯುತ್ ಸರಬರಾಜು ಮಾಡುವ ವ್ಯವಸ್ಥೆ ಮಾಡಬೇಕು. ಇಲ್ಲವಾದರೆ ಕನ್ನಡಿಗರ ಆಕ್ರೋಶದ ಕಿಚ್ಚು ಸರ್ಕಾರವನ್ನು ಭಸ್ಮ ಮಾಡುವುದು ನಿಶ್ಚಿತ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.