
ಮದ್ದೂರು, 12 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಗೌರಿ-ಗಣೇಶ ಹಬ್ಬದ ಅಂಗವಾಗಿ ಸೆಪ್ಟೆಂಬರ್ 16ರಂದು ಮದ್ದೂರಿನಲ್ಲಿ 108 ಗ್ರಾಮಗಳ ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಹಾಗೂ ಬೃಹತ್ ಮೆರವಣಿಗೆ ಆಯೋಜಿಸಲು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ನಿರ್ಧರಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಹಾಗೂ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ಮಾತನಾಡಿ, ಮದ್ದೂರು ತಾಲ್ಲೂಕಿನ 108 ಗ್ರಾಮಗಳಲ್ಲಿ ಪ್ರತಿಷ್ಠಾಪಿಸಲಾಗುವ ಗಣೇಶ ಮೂರ್ತಿಗಳನ್ನು ಸೆ.16ರಂದು ಒಂದೇ ಕಡೆ ಸೇರಿಸಿ ಸಾಮೂಹಿಕವಾಗಿ ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದರು.
ಗೊರವನಹಳ್ಳಿಯಿಂದ ಆರಂಭವಾಗುವ ಮೆರವಣಿಗೆ ಪೇಟೆ ಬೀದಿ ಮೂಲಕ ಸಾಗಲಿದ್ದು, ಹೊಳೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ. ರಾಮಸೇನೆ, ಭಜರಂಗದಳ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮುಖಂಡರು ಹೇಳಿದರು.
ಕಳೆದ ವರ್ಷ ಗಣೇಶ ಮೆರವಣಿಗೆ ಸಂದರ್ಭದಲ್ಲಿ ಕಲ್ಲು ತೂರಾಟ ಸೇರಿದಂತೆ ಗಲಾಟೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುವ ಮೂಲಕ ಶಾಂತಿಯುತವಾಗಿ ಹಾಗೂ ಅದ್ದೂರಿಯಾಗಿ ಸಾಮೂಹಿಕ ಗಣೇಶ ವಿಸರ್ಜನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ಕಳೆದ ವರ್ಷದ ಘಟನೆಗೆ ಸಂಬಂಧಿಸಿದಂತೆ 23 ಮಂದಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿರುವುದನ್ನು ಉಲ್ಲೇಖಿಸಿದ ಮುಖಂಡರು, ಗಣೇಶೋತ್ಸವ ಆಚರಣೆಗೆ ಯಾವುದೇ ರೀತಿಯ ಅಡ್ಡಿಪಡಿಸಬಾರದು ಎಂದು ಮನವಿ ಮಾಡಿದರು.
ಮೆರವಣಿಗೆ ವೇಳೆ ಮಸೀದಿ ಇರುವ ರಸ್ತೆಯಲ್ಲಿ ತೆರಳಬಾರದು ಎಂಬ ನಿರ್ಬಂಧದ ಕುರಿತು ಮಾತನಾಡಿದ ಅವರು, ಸಾರ್ವಜನಿಕ ರಸ್ತೆಯಲ್ಲಿ ಮೆರವಣಿಗೆ ಸಾಗುವುದಕ್ಕೆ ಕಾನೂನುಬದ್ಧವಾಗಿ ಅನುಮತಿ ನೀಡಬೇಕು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಮೆರವಣಿಗೆಗೆ ಸಂಬಂಧಿಸಿದಂತೆ ಯುವಕರಲ್ಲಿ ಪೊಲೀಸರು ಗೊಂದಲ ಉಂಟುಮಾಡಬಾರದು ಎಂದು ಒತ್ತಾಯಿಸಿದರು.
ಎಲ್ಲರೂ ಪಕ್ಷಭೇದ ಮರೆತು ಗಣೇಶೋತ್ಸವದಲ್ಲಿ ಪಾಲ್ಗೊಳ್ಳಬೇಕು. ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿ ಮತ್ತು ಸೌಹಾರ್ದತೆ ಕಾಪಾಡಬೇಕು ಎಂದು ಮುಖಂಡರು ಮನವಿ ಮಾಡಿದರು.
ಪೊಲೀಸರು ಕಾನೂನು ಮತ್ತು ನಿಯಮಗಳ ಪ್ರಕಾರ ಅಗತ್ಯ ಅನುಮತಿ ನೀಡಬೇಕು ಹಾಗೂ ಗಣೇಶೋತ್ಸವ ಆಚರಣೆಗೆ ಅನಗತ್ಯ ಕಠಿಣ ಷರತ್ತುಗಳನ್ನು ವಿಧಿಸಬಾರದು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R