
ನವದೆಹಲಿ, 11 ಸೆಪ್ಟೆಂಬರ್ (ಹಿ.ಸ.):
ದೇಶದ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಸಕ್ಕರೆ ವಲಯದಲ್ಲಿ ಆರ್ಥಿಕ ಸುಸ್ಥಿರ ವ್ಯವಸ್ಥೆ ರೂಪಿಸಲು ಒತ್ತು ನೀಡಿದೆ.
ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಬಾಕಿ ಹಣ ಪಾವತಿಸುವುದಕ್ಕೆ ಕೇಂದ್ರ ಸರ್ಕಾರ ಆದ್ಯತೆ ನೀಡಿದೆ. 2024-25ರ ಸಕ್ಕರೆ ಹಂಗಾಮಿನಲ್ಲಿ ಒಟ್ಟು ₹1,02,687 ಕೋಟಿ ಬಾಕಿ ಮೊತ್ತವಿದ್ದು, 2026ರ ಏಪ್ರಿಲ್ 20ರ ವೇಳೆಗೆ ₹1,02,209 ಕೋಟಿ ಪಾವತಿಸಲಾಗಿದೆ. ಇದರಿಂದ ಶೇ.99.5ರಷ್ಟು ಬಾಕಿ ಮೊತ್ತ ವಿಲೇವಾರಿಯಾಗಿದ್ದು, ರೈತರು ಮತ್ತು ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ಸ್ಥಿರತೆ ದೊರೆತಿದೆ.
2025-26ರ ಸಕ್ಕರೆ ಹಂಗಾಮಿನಲ್ಲಿಯೂ ಆಗಸ್ಟ್ 20ರ ವೇಳೆಗೆ ಶೇ.97ರಷ್ಟು ಕಬ್ಬಿನ ಬಾಕಿ ಹಣ ಪಾವತಿಸಲಾಗಿದೆ. ಹಿಂದಿನ ಸಕ್ಕರೆ ಹಂಗಾಮುಗಳ ಬಹುತೇಕ ಬಾಕಿ ಹಣವನ್ನೂ ಪಾವತಿಸಲಾಗಿದ್ದು, ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಹಾಗೂ ರೈತರಿಗೆ ಸಕಾಲಿಕ ಪಾವತಿ ಖಾತ್ರಿಯಾಗುತ್ತಿರುವುದನ್ನು ಇದು ಪ್ರತಿಬಿಂಬಿಸುತ್ತದೆ.
ಕಬ್ಬಿನ ನ್ಯಾಯಯುತ ಬೆಲೆಯಲ್ಲಿ ಗಣನೀಯ ಹೆಚ್ಚಳ
ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ನಿಗದಿಪಡಿಸುವಲ್ಲಿಯೂ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. 2014-15ರಲ್ಲಿ ಪ್ರತಿ ಕ್ವಿಂಟಲ್‌ಗೆ ₹220ರಷ್ಟಿದ್ದ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ಇದೀಗ ₹365ಕ್ಕೆ ಏರಿಕೆಯಾಗಿದೆ. ಇದು ಸರಿಸುಮಾರು ಶೇ.66ರಷ್ಟು ಹೆಚ್ಚಳವಾಗಿದೆ.
ಪ್ರಮುಖವಾಗಿ ಸಕ್ಕರೆ ಇಳುವರಿ ಪ್ರಮಾಣ ಶೇ.9.5ಕ್ಕಿಂತ ಕಡಿಮೆಯಿರುವ ರೈತರಿಗೂ ಯಾವುದೇ ಬೆಲೆ ಕಡಿತ ಮಾಡದೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆ ನೀಡಲು ನಿರ್ಧರಿಸಲಾಗಿದೆ. 2026-27ರ ಸಕ್ಕರೆ ಹಂಗಾಮಿನಲ್ಲಿ ರೈತರು ಪ್ರತಿ ಕ್ವಿಂಟಲ್ ಕಬ್ಬಿಗೆ ಸರಾಸರಿ ₹338.30 ದರ ಪಡೆಯಲಿದ್ದಾರೆ.
2026-27ರ ಸಕ್ಕರೆ ಹಂಗಾಮಿನ ನಿಗದಿತ ಬೆಲೆಯು 2025-26ರ ಹಂಗಾಮಿನ ದರಕ್ಕಿಂತ ಶೇ.2.81ರಷ್ಟು ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಈ ಕ್ರಮದಿಂದ ದೇಶದ ಸುಮಾರು 5 ಕೋಟಿ ಕಬ್ಬು ಬೆಳೆಗಾರರು ಹಾಗೂ ಅವರ ಅವಲಂಬಿತರಿಗೆ ಪ್ರಯೋಜನ ದೊರೆಯಲಿದೆ. ಸಕ್ಕರೆ ಕಾರ್ಖಾನೆಗಳು ಸೇರಿದಂತೆ ಸಕ್ಕರೆ ವಲಯದಲ್ಲಿ ತೊಡಗಿಸಿಕೊಂಡಿರುವ ಸುಮಾರು 5 ಲಕ್ಷ ಮಂದಿಗೂ ಇದರಿಂದ ಅನುಕೂಲವಾಗಲಿದೆ.
ಎಥೆನಾಲ್ ಉತ್ಪಾದನೆಗೆ ಆದ್ಯತೆ
ಭಾರತದಲ್ಲಿ ವಾರ್ಷಿಕವಾಗಿ ಸುಮಾರು 300ರಿಂದ 340 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ಉತ್ಪಾದನೆಯಾಗುತ್ತಿದ್ದು, ದೇಶೀಯ ಬಳಕೆ 280ರಿಂದ 290 ಲಕ್ಷ ಮೆಟ್ರಿಕ್ ಟನ್‌ಗಳಷ್ಟಿದೆ. ಹೆಚ್ಚುವರಿ ಸಕ್ಕರೆ ದಾಸ್ತಾನು ಬೆಲೆ ಕುಸಿತಕ್ಕೆ ಕಾರಣವಾಗುವುದರ ಜತೆಗೆ ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸ್ಥಿತಿ ಹಾಗೂ ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿಯ ಮೇಲೂ ಪರಿಣಾಮ ಬೀರುತ್ತಿತ್ತು.
ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಹೆಚ್ಚುವರಿ ಸಕ್ಕರೆ ಹಾಗೂ ಕಬ್ಬು ಆಧಾರಿತ ಕಚ್ಚಾ ವಸ್ತುಗಳನ್ನು ಎಥೆನಾಲ್ ಉತ್ಪಾದನೆಗೆ ಬಳಸಲು ಹೆಚ್ಚಿನ ಅವಕಾಶ ಕಲ್ಪಿಸಿದೆ. ಇದರಿಂದ ಸಕ್ಕರೆ ವಲಯಕ್ಕೆ ಪರ್ಯಾಯ ಮಾರುಕಟ್ಟೆ ಸೃಷ್ಟಿಯಾಗಿದ್ದು, ಕಾರ್ಖಾನೆಗಳ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು ನೆರವಾಗಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಜೈವಿಕ ಇಂಧನ ನೀತಿ ಹಾಗೂ ಎಥೆನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದಿಂದ ಕಬ್ಬಿಗೆ ಪ್ರಮುಖ ಮಾರುಕಟ್ಟೆ ದೊರೆತಿದೆ. 2014-15ರಿಂದ 2024-25ರ ಅವಧಿಯಲ್ಲಿ ಎಥೆನಾಲ್ ಮಾರಾಟದ ಮೂಲಕ ಸಕ್ಕರೆ ಕಾರ್ಖಾನೆಗಳು ₹1.29 ಲಕ್ಷ ಕೋಟಿಗೂ ಹೆಚ್ಚು ಆದಾಯ ಗಳಿಸಿವೆ. 2014-15ರಿಂದ 2025ರ ಅಕ್ಟೋಬರ್‌ವರೆಗೆ ರೈತರಿಗೆ ₹1,36,300 ಕೋಟಿಗೂ ಹೆಚ್ಚಿನ ಮೊತ್ತವನ್ನು ತ್ವರಿತವಾಗಿ ಪಾವತಿಸಲು ಇದು ನೆರವಾಗಿದೆ.
ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನೆರವು
ಸಹಕಾರಿ ಸಕ್ಕರೆ ಕಾರ್ಖಾನೆಗಳ ಬಲವರ್ಧನೆಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಸಹಕಾರಿ ಅಭಿವೃದ್ಧಿ ನಿಗಮಕ್ಕೆ ₹1,000 ಕೋಟಿ ಅನುದಾನ ಒದಗಿಸಿದೆ. ಇದರ ಮೂಲಕ ಎಥೆನಾಲ್ ಘಟಕಗಳು, ಸಹ-ಉತ್ಪಾದನಾ ಘಟಕಗಳು ಹಾಗೂ ಕಾರ್ಯನಿರತ ಬಂಡವಾಳಕ್ಕಾಗಿ ₹10,000 ಕೋಟಿ ಸಾಲ ಒದಗಿಸಲಾಗಿದೆ. ಅವಧಿ ಸಾಲದ ಮೇಲಿನ ಬಡ್ಡಿ ದರವನ್ನೂ ಶೇ.8.5ಕ್ಕೆ ಇಳಿಸಲಾಗಿದೆ.
ಇದರ ಜತೆಗೆ ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಆಧುನೀಕರಣ, ಸಹ-ಉತ್ಪಾದನೆ ಹಾಗೂ ಎಥೆನಾಲ್ ಯೋಜನೆಗಳಿಗಾಗಿ ಸಕ್ಕರೆ ಅಭಿವೃದ್ಧಿ ನಿಧಿಯಡಿ ಆರ್ಥಿಕ ನೆರವು ಪಡೆಯಲು ಅವಕಾಶ ಕಲ್ಪಿಸಲಾಗಿದೆ. 2026ರ ಮಾರ್ಚ್ ವೇಳೆಗೆ ಉತ್ತರ ಪ್ರದೇಶದ ನಾಲ್ಕು ಸಹಕಾರಿ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಅಭಿವೃದ್ಧಿ ನಿಧಿಯಡಿ ಪ್ರಯೋಜನ ಪಡೆದಿವೆ.
ಸಕ್ಕರೆ ವಲಯದಲ್ಲಿ ಡಿಜಿಟಲೀಕರಣಕ್ಕೆ ಒತ್ತು
ಸಕ್ಕರೆ ವಲಯದಲ್ಲಿ ಪಾರದರ್ಶಕತೆ ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ರಾಷ್ಟ್ರೀಯ ಏಕಗವಾಕ್ಷಿ ವ್ಯವಸ್ಥೆಯನ್ನು ಅಳವಡಿಸಿದೆ. ಇದರ ಮೂಲಕ ಸಕ್ಕರೆ ಕಾರ್ಖಾನೆಗಳ ನಿಯಮಾನುಸರಣೆ ಹಾಗೂ ಮಾಸಿಕ ವರದಿ ಸಲ್ಲಿಕೆ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸಲಾಗಿದೆ. ಸುಮಾರು 535 ಸಕ್ಕರೆ ಕಾರ್ಖಾನೆಗಳು ತಮ್ಮ ಮಾಸಿಕ ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸಲ್ಲಿಸುತ್ತಿವೆ.
ಮಾಸಿಕ ಸಕ್ಕರೆ ಮಾರಾಟದ ಪಾರದರ್ಶಕ ಹಾಗೂ ನಿಖರ ನಿರ್ವಹಣೆಗಾಗಿ ‘ಚಿನಿ ದರ್ಪಣ’ ಅಂತರ್ಜಾಲ ವೇದಿಕೆಯನ್ನೂ ಅಭಿವೃದ್ಧಿಪಡಿಸಲಾಗಿದೆ.
ಸಕ್ಕರೆ ರಫ್ತಿಗೂ ಉತ್ತೇಜನ
2025-26ರ ಸಕ್ಕರೆ ಹಂಗಾಮಿನಲ್ಲಿ 20 ಲಕ್ಷ ಮೆಟ್ರಿಕ್ ಟನ್‌ವರೆಗೆ ಸಕ್ಕರೆ ರಫ್ತು ಮಾಡಲು ಕೇಂದ್ರ ಸರ್ಕಾರ ಅವಕಾಶ ವಿಸ್ತರಿಸಿದೆ. ಇದರ ಪರಿಣಾಮವಾಗಿ ಸಕ್ಕರೆ ರಫ್ತಿನಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. 2016-17ರಲ್ಲಿ ಕೇವಲ 0.47 ಲಕ್ಷ ಮೆಟ್ರಿಕ್ ಟನ್ ಸಕ್ಕರೆ ರಫ್ತಾಗಿದ್ದರೆ, 2025-26ರಲ್ಲಿ ಭಾರತ 8 ಲಕ್ಷ ಮೆಟ್ರಿಕ್ ಟನ್ ಸಕ್ಕರೆಯನ್ನು ರಫ್ತು ಮಾಡಿದೆ.
ಶ್ರೀಲಂಕಾ, ಪಶ್ಚಿಮ ಏಷ್ಯಾ ಹಾಗೂ ಪೂರ್ವ ಆಫ್ರಿಕಾ ಪ್ರಮುಖ ರಫ್ತು ಮಾರುಕಟ್ಟೆಗಳಾಗಿದ್ದು, ಹೆಚ್ಚುವರಿ ಸಕ್ಕರೆ ಉತ್ಪಾದನೆಯನ್ನು ನಿರ್ವಹಿಸಲು ಈ ರಫ್ತು ಅವಕಾಶಗಳು ಸಕ್ಕರೆ ಕಾರ್ಖಾನೆಗಳಿಗೆ ನೆರವಾಗಿವೆ.
ಕಬ್ಬು ಉತ್ಪಾದನೆಯಲ್ಲೂ ಏರಿಕೆ
ದೇಶದಲ್ಲಿ ಕಬ್ಬು ಉತ್ಪಾದನೆಯಲ್ಲಿಯೂ ಗಣನೀಯ ಪ್ರಗತಿ ಕಂಡುಬಂದಿದೆ. 2025-26ರಲ್ಲಿ ಭಾರತದಲ್ಲಿ ಕಬ್ಬು ಉತ್ಪಾದನೆ 500 ದಶಲಕ್ಷ ಮೆಟ್ರಿಕ್ ಟನ್ ತಲುಪಿದೆ. 2015-16ರ 348.44 ದಶಲಕ್ಷ ಮೆಟ್ರಿಕ್ ಟನ್ ಉತ್ಪಾದನೆಗೆ ಹೋಲಿಸಿದರೆ ಶೇ.43.5ರಷ್ಟು ಏರಿಕೆಯಾಗಿದೆ.
ಕಬ್ಬು ಬೆಳೆಯುವ ಪ್ರದೇಶವೂ ವಿಸ್ತಾರಗೊಂಡಿದೆ. 2015-16ರಲ್ಲಿ 49.27 ಲಕ್ಷ ಹೆಕ್ಟೇರ್‌ನಷ್ಟಿದ್ದ ಕಬ್ಬು ಬೆಳೆಯುವ ಪ್ರದೇಶ ಇದೀಗ 58.87 ಲಕ್ಷ ಹೆಕ್ಟೇರ್‌ಗೆ ಹೆಚ್ಚಾಗಿದೆ.
ಕಬ್ಬು ಬೆಳೆಗಾರರಿಗೆ ಸಕಾಲಿಕ ಬಾಕಿ ಪಾವತಿ, ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಯಲ್ಲಿ ಹೆಚ್ಚಳ, ಎಥೆನಾಲ್ ಉತ್ಪಾದನೆಗೆ ಉತ್ತೇಜನ, ಸಹಕಾರಿ ಸಕ್ಕರೆ ಕಾರ್ಖಾನೆಗಳಿಗೆ ಆರ್ಥಿಕ ನೆರವು, ಸಕ್ಕರೆ ರಫ್ತಿಗೆ ಅವಕಾಶ ಹಾಗೂ ವಲಯದ ಡಿಜಿಟಲೀಕರಣ ಸೇರಿದಂತೆ ಹಲವು ಕ್ರಮಗಳ ಮೂಲಕ ಕೇಂದ್ರ ಸರ್ಕಾರ ದೇಶದ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಆರ್ಥಿಕ ಸಬಲತೆಗೆ ಒತ್ತು ನೀಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.