100 ದಿನಗಳ ಸಂಭ್ರಮವಲ್ಲ, ದೃಢ ಕರ್ನಾಟಕದ ಸಂಕಲ್ಪ: ಡಾ. ಜಿ. ಪರಮೇಶ್ವರ
ಬೆಂಗಳೂರು, 10 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ 100 ದಿನಗಳ ಸಾಧನೆ ಜನಪರ ಆಡಳಿತಕ್ಕೆ ಹೊಸ ದಿಕ್ಕು ತೋರಿಸಿದೆ. ಇದು ಕೇವಲ 100 ದಿನಗಳ ಸಂಭ್ರಮಾಚರಣೆಯಲ್ಲ, ದೃಢ ಕರ್ನಾಟಕ ನಿರ್ಮಾಣದ ಸಂಕಲ್ಪ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ.
ಡಿಸಿಎಂ ಪರಮೇಶ್ವರ


ಬೆಂಗಳೂರು, 10 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ 100 ದಿನಗಳ ಸಾಧನೆ ಜನಪರ ಆಡಳಿತಕ್ಕೆ ಹೊಸ ದಿಕ್ಕು ತೋರಿಸಿದೆ. ಇದು ಕೇವಲ 100 ದಿನಗಳ ಸಂಭ್ರಮಾಚರಣೆಯಲ್ಲ, ದೃಢ ಕರ್ನಾಟಕ ನಿರ್ಮಾಣದ ಸಂಕಲ್ಪ ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವ ಡಾ. ಜಿ. ಪರಮೇಶ್ವರ ಹೇಳಿದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗುರುವಾರ ನಡೆದ ‘ದೃಢ ಕರ್ನಾಟಕದ ಸಂಕಲ್ಪ–100 ದಿನಗಳ ಯಶಸ್ವಿ ಪೂರೈಕೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರ ವಹಿಸಿಕೊಂಡ ಬಳಿಕ ಕೇವಲ 100 ದಿನಗಳಲ್ಲಿ ಹಲವು ಹೊಸ ಆಲೋಚನೆಗಳು ಮತ್ತು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದರು.

ರಾಜಕೀಯ ಕ್ಷೇತ್ರದಲ್ಲಿ ಆಧುನಿಕತೆ ಮತ್ತು ಹೋರಾಟಕ್ಕೆ ಮತ್ತೊಂದು ಹೆಸರಿದ್ದರೆ ಅದು ಡಿ.ಕೆ. ಶಿವಕುಮಾರ್. ಸಿದ್ದರಾಮಯ್ಯ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಡಿ.ಕೆ. ಶಿವಕುಮಾರ್ ತಮ್ಮದೇ ಹೊಸ ಆಲೋಚನೆಗಳೊಂದಿಗೆ ಆಡಳಿತ ನಡೆಸುತ್ತಿದ್ದಾರೆ. ಎಲ್ಲ ಇಲಾಖೆಗಳಲ್ಲೂ ಹೊಸ ಚಿಂತನೆ ಹಾಗೂ ಹೊಸ ಕಾರ್ಯಕ್ರಮಗಳು ಆರಂಭವಾಗಿವೆ ಎಂದು ಹೇಳಿದರು.

ವಿರೋಧ ಪಕ್ಷಗಳು ಸರ್ಕಾರವನ್ನು ಟೀಕಿಸುತ್ತಿರುವುದಕ್ಕೆ ಈ ಕಾರ್ಯಕ್ರಮವೇ ಉತ್ತರವಾಗಿದೆ. ಸರ್ಕಾರ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸಿದ್ದು, ಕರ್ನಾಟಕದ ಪ್ರಗತಿಯೇ ದೇಶದ ಪ್ರಗತಿ ಎಂದರು.

ಕಳೆದ 150 ವರ್ಷಗಳಲ್ಲೇ ಕಾಣದಂತಹ ಭೀಕರ ಬರಗಾಲವನ್ನು ರಾಜ್ಯ ಎದುರಿಸುತ್ತಿದೆ. ಕುಡಿಯುವ ನೀರು, ಜಾನುವಾರುಗಳ ಮೇವಿನ ಕೊರತೆ ಹಾಗೂ ಉದ್ಯೋಗಕ್ಕಾಗಿ ಗುಳೆ ಹೋಗುವ ಪರಿಸ್ಥಿತಿ ಹಲವು ಜಿಲ್ಲೆಗಳಲ್ಲಿ ಕಂಡುಬರುತ್ತಿದೆ. ಸರ್ಕಾರ ಬರ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ 101 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದೆ. ಇನ್ನೂ 100ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಅಧ್ಯಯನ ನಡೆಯುತ್ತಿದ್ದು, ಹಂತಹಂತವಾಗಿ ಅವುಗಳನ್ನೂ ಬರಪೀಡಿತ ಎಂದು ಘೋಷಿಸಲಾಗುವುದು ಎಂದು ತಿಳಿಸಿದರು.

ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಪರಿಹಾರ ಹಾಗೂ ತೆರಿಗೆ ಪಾಲಿನ ವಿಚಾರದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದ ಅವರು, ಜಿಎಸ್‌ಟಿ ಪರಿಹಾರ ನಿಂತ ಬಳಿಕ ರಾಜ್ಯಕ್ಕೆ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. 15ನೇ ಹಣಕಾಸು ಆಯೋಗದಲ್ಲೂ ರಾಜ್ಯದ ತೆರಿಗೆ ಪಾಲು ಕಡಿಮೆಯಾಗಿದ್ದರಿಂದ ನಷ್ಟ ಉಂಟಾಗಿದೆ ಎಂದರು.

ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದಿದ್ದು, ಇದಕ್ಕಾಗಿ ಈವರೆಗೆ 1.50 ಲಕ್ಷ ಕೋಟಿ ರೂ.ಗೂ ಅಧಿಕ ಹಣವನ್ನು ಖರ್ಚು ಮಾಡಲಾಗಿದೆ. ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ 590 ಭರವಸೆಗಳ ಪೈಕಿ 245ಕ್ಕೂ ಹೆಚ್ಚು ಭರವಸೆಗಳನ್ನು ಈಡೇರಿಸಲಾಗಿದೆ ಎಂದರು.

‘11ಜಿ’ ಆರ್ಥಿಕ ಮಾದರಿಯನ್ನು ಮುಂದಿಟ್ಟುಕೊಂಡು ಸರ್ಕಾರ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸುತ್ತಿದೆ. ಯುವಕರ ಉದ್ಯೋಗ, ಗ್ರಾಮೀಣ ಆರ್ಥಿಕತೆ, ಉತ್ತಮ ಆಡಳಿತ, ಹಸಿರು ಆರ್ಥಿಕತೆ, ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ರಾಹುಲ್ ಗಾಂಧಿ ಅವರ ಭಾರತ್ ಜೋಡೊ ಪಾದಯಾತ್ರೆ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಲು ರಾಜ್ಯದಲ್ಲಿ ಭಾರತ್ ಜೋಡೊ ಸಂಘಗಳನ್ನು ಸ್ಥಾಪಿಸಲಾಗುತ್ತಿದೆ. ರಾಜ್ಯಾದ್ಯಂತ ಸುಮಾರು 10 ಸಾವಿರ ಸಂಘಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ 1,000 ಕೋಟಿ ರೂ. ಮೀಸಲಿಡಲಾಗಿದೆ. ಸದಸ್ಯತ್ವ ಆರಂಭಿಸಿದ ಒಂದು ವಾರದಲ್ಲೇ 7.3 ಲಕ್ಷ ಯುವಕರು ನೋಂದಾಯಿಸಿಕೊಂಡಿದ್ದಾರೆ ಎಂದರು.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande