ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಳ
33°C ತಾಪಮಾನ ಸಾಧ್ಯತೆ
ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಳ


ಬೆಂಗಳೂರು, 10 ಸೆಪ್ಟೆಂಬರ್(ಹಿ.ಸ.)

ಆ್ಯಂಕರ್:

ಸಾಮಾನ್ಯವಾಗಿ ಮಳೆಗಾಲದ ವಾತಾವರಣ ಕಂಡುಬರುವ ಸೆಪ್ಟೆಂಬರ್ನಲ್ಲಿ ಬೆಂಗಳೂರಿನಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಕಳೆದ ಒಂದು ವಾರದಿಂದ ನಗರದಲ್ಲಿ ಗರಿಷ್ಠ 31.22°C ತಾಪಮಾನ ದಾಖಲಾಗಿದ್ದು, ಸೆಪ್ಟೆಂಬರ್ ತಿಂಗಳಲ್ಲಿ ಕಳೆದ ಮೂರು ವರ್ಷಗಳಲ್ಲೇ ಇದು ಅತ್ಯಧಿಕ ತಾಪಮಾನ ಎನ್ನಲಾಗಿದೆ.

ಪ್ರಸ್ತುತ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32–33°C ಆಸುಪಾಸಿನಲ್ಲಿದ್ದು, ವಾಡಿಕೆಗಿಂತ ಸುಮಾರು 4°C ಹೆಚ್ಚಾಗಿದೆ. ಮುಂದಿನ ದಿನಗಳಲ್ಲೂ ತಾಪಮಾನ 33°C ಆಸುಪಾಸಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ತಜ್ಞ ಸಿಎಸ್ ಪಾಟೀಲ್ ಅವರ ಪ್ರಕಾರ, ಎಲ್ ನಿನೋ ಪರಿಣಾಮದಿಂದಾಗಿ ಮೋಡಗಳ ಪ್ರಮಾಣ ಕಡಿಮೆಯಾಗಿದ್ದು, ಮಳೆಯಲ್ಲೂ ಗಣನೀಯ ಇಳಿಕೆಯಾಗಿದೆ. ಇದರಿಂದ ಭೂಮಿಯ ಮೇಲ್ಮೈ ವೇಗವಾಗಿ ಬಿಸಿಯಾಗುತ್ತಿದೆ. ಮಣ್ಣಿನಲ್ಲಿನ ತೇವಾಂಶದ ಕೊರತೆಯೂ ತಾಪಮಾನ ಏರಿಕೆಗೆ ಕಾರಣವಾಗಿದೆ.

“ಮೋಡಗಳ ಕೊರತೆ ಮತ್ತು ಮಳೆ ಪ್ರಮಾಣ ಕಡಿಮೆಯಾಗಿರುವುದರಿಂದ ಭೂಮಿ ಬೇಗ ಬಿಸಿಯಾಗುತ್ತಿದೆ. ಮಣ್ಣಿನಲ್ಲಿನ ತೇವಾಂಶದ ಕೊರತೆಯೂ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದೆ. ಮುಂದಿನ ಒಂದು ವಾರದವರೆಗೆ ಇದೇ ರೀತಿಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ. ಸೆಪ್ಟೆಂಬರ್ 16ರ ನಂತರ ಮಳೆಯಾಗುವ ನಿರೀಕ್ಷೆಯಿದೆ,” ಎಂದು ಸಿಎಸ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರಿನಷ್ಟೇ ಅಲ್ಲದೆ ದಕ್ಷಿಣ ಒಳನಾಡು, ಕಲಬುರಗಿ, ಉಡುಪಿ ಹಾಗೂ ಮಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲೂ ಬಿಸಿಲಿನ ಝಳ ಹೆಚ್ಚಾಗಿದೆ.

ಮಳೆಯ ಕೊರತೆಯಿಂದಾಗಿ ಸೆಪ್ಟೆಂಬರ್ನಲ್ಲೇ ಬೇಸಿಗೆಯಂತಹ ವಾತಾವರಣ ನಿರ್ಮಾಣವಾಗಿದ್ದು, ಮುಂದಿನ ದಿನಗಳಲ್ಲಿ ತಾಪಮಾನ ಹಾಗೂ ಮಳೆಯ ಪರಿಸ್ಥಿತಿಯಲ್ಲಿ ಬದಲಾವಣೆಯಾಗುವ ನಿರೀಕ್ಷೆ ಇದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande