
ಗದಗ, 10 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:- ನೇರ ನೇಮಕಾತಿ ಮೂಲಕ ಪೌರಕಾರ್ಮಿಕರನ್ನು ಖಾಯಂ ನೌಕರರನ್ನಾಗಿ ಮಾಡಬೇಕು ಎಂದು ಒತ್ತಾಯಿಸಿ ಗದಗ-ಬೆಟಗೇರಿ ನಗರಸಭೆ ಪೌರಕಾರ್ಮಿಕರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಗದಗ ನಗರದ ಗಾಂಧಿ ಸರ್ಕಲ್ನಲ್ಲಿ ಮಾನವ ಸರಪಳಿ ನಿರ್ಮಿಸಿ ತೀವ್ರ ಪ್ರತಿಭಟನೆ ನಡೆಸಿದರು.
ಕಳೆದ ಹಲವು ವರ್ಷಗಳಿಂದ ನಗರ ಸ್ವಚ್ಛತೆ, ಕಸ ಸಂಗ್ರಹಣೆ ಸೇರಿದಂತೆ ವಿವಿಧ ಕೆಲಸಗಳನ್ನು ನಿರ್ವಹಿಸುತ್ತಿರುವ ಪೌರಕಾರ್ಮಿಕರು, ತಮ್ಮ ಸೇವೆಯನ್ನು ಪರಿಗಣಿಸಿ ನೇರ ನೇಮಕಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸುತ್ತಿದ್ದಾರೆ. ಬೇಡಿಕೆ ಈಡೇರಿಸುವವರೆಗೆ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಪೌರಕಾರ್ಮಿಕರು ಎಚ್ಚರಿಕೆ ನೀಡಿದ್ದಾರೆ.
ಉರಿ ಬಿಸಿಲಿನ ನಡುವೆಯೇ ಗಾಂಧಿ ಸರ್ಕಲ್ನಲ್ಲಿ ಪೌರಕಾರ್ಮಿಕರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಜಿಲ್ಲಾಡಳಿತ ಹಾಗೂ ನಗರಸಭೆ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಎರಡು ದಶಕಗಳಿಂದ ನಗರ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರೂ ತಮ್ಮ ಸೇವೆಗೆ ಖಾಯಂ ಮಾನ್ಯತೆ ದೊರೆಯದಿರುವುದು ಪೌರಕಾರ್ಮಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪ್ರತಿಭಟನೆ ವೇಳೆ ಕುಸಿದು ಬಿದ್ದ ಮಹಿಳಾ ಕಾರ್ಮಿಕ
ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಉರಿ ಬಿಸಿಲಿನ ತಾಪಕ್ಕೆ ಮಹಿಳಾ ಪೌರಕಾರ್ಮಿಕರಾದ ಜೋತಿ ಹೊಸಳ್ಳಿ ಅವರು ಅಸ್ವಸ್ಥಗೊಂಡು ಸ್ಥಳದಲ್ಲೇ ಕುಸಿದು ಬಿದ್ದ ಘಟನೆ ನಡೆಯಿತು. ಇದರಿಂದ ಕೆಲಕಾಲ ಪ್ರತಿಭಟನಾ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು.
ತೀವ್ರ ಅಸ್ವಸ್ಥಗೊಂಡಿದ್ದ ಜೋತಿ ಹೊಸಳ್ಳಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ನ್ನು ಸ್ಥಳಕ್ಕೆ ಕರೆಸಲಾಯಿತು. ಆದರೆ, ಆಸ್ಪತ್ರೆಗೆ ತೆರಳಲು ಅವರು ನಿರಾಕರಿಸಿದರು. “ನಾನು ಇಲ್ಲೇ ಸಾಯುತ್ತೇನೆ, ಆಸ್ಪತ್ರೆಗೆ ಹೋಗುವುದಿಲ್ಲ” ಎಂದು ಪಟ್ಟು ಹಿಡಿದ ಘಟನೆ ಪ್ರತಿಭಟನಾಕಾರರ ಮನಕಲಕುವಂತಿತ್ತು. ಬಳಿಕ ಸಹೋದ್ಯೋಗಿಗಳು ಹಾಗೂ ಇತರರು ಮನವೊಲಿಸಿ ಅವರನ್ನು ಆಸ್ಪತ್ರೆಗೆ ಕರೆದೊಯ್ದರು.
ಈ ಘಟನೆಯಿಂದ ಪೌರಕಾರ್ಮಿಕರ ಹೋರಾಟದ ತೀವ್ರತೆ ಮತ್ತಷ್ಟು ಹೆಚ್ಚಾಯಿತು. ತಮ್ಮ ಕುಟುಂಬದ ಆರ್ಥಿಕ ಸಂಕಷ್ಟ, ಕಡಿಮೆ ವೇತನ ಹಾಗೂ ಉದ್ಯೋಗ ಭದ್ರತೆಯ ಕೊರತೆಯ ನಡುವೆಯೂ ವರ್ಷಗಳಿಂದ ನಗರ ಸ್ವಚ್ಛತೆಗೆ ಸೇವೆ ಸಲ್ಲಿಸುತ್ತಿರುವುದಾಗಿ ಕಾರ್ಮಿಕರು ಅಳಲು ತೋಡಿಕೊಂಡರು.
ಡಿಸಿ ವಿರುದ್ಧ ಆಕ್ರೋಶ
ಪ್ರತಿಭಟನೆ ವೇಳೆ ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ವಿರುದ್ಧ ಪೌರಕಾರ್ಮಿಕರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನೇರ ನೇಮಕಾತಿ ವಿಚಾರದಲ್ಲಿ ಜಿಲ್ಲಾಡಳಿತ ಸ್ಪಷ್ಟ ನಿರ್ಧಾರ ಕೈಗೊಂಡು, ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
154 ಪೌರಕಾರ್ಮಿಕರ ನೇರ ನೇಮಕಾತಿಗೆ ಜಿಲ್ಲಾಧಿಕಾರಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದರೂ, ತಮ್ಮ ಬೇಡಿಕೆಯಂತೆ 130 ಪೌರಕಾರ್ಮಿಕರನ್ನು ನೇರವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
“ನಾವು ನಿನ್ನೆ ಮೊನ್ನೆ ಕೆಲಸಕ್ಕೆ ಬಂದವರಲ್ಲ. ಸುಮಾರು 20 ವರ್ಷಗಳಿಂದ ನಗರವನ್ನು ಸ್ವಚ್ಛವಾಗಿಡಲು ದುಡಿಯುತ್ತಿದ್ದೇವೆ. ಆದರೆ ಇಂದಿಗೂ ಖಾಯಂ ನೌಕರರ ಸ್ಥಾನಮಾನ ಸಿಕ್ಕಿಲ್ಲ. ನಮ್ಮ ಸೇವೆಯನ್ನು ಪರಿಗಣಿಸಿ ನೇರ ನೇಮಕಾತಿ ಮೂಲಕ ಖಾಯಂ ಮಾಡಬೇಕು” ಎಂದು ಪೌರಕಾರ್ಮಿಕರು ಆಗ್ರಹಿಸಿದರು.
ನಗರಸಭೆ ಮುಂದೆ ಮುಂದುವರಿದ ಧರಣಿ
ನೇರ ನೇಮಕಾತಿ ಸೇರಿದಂತೆ ತಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೌರಕಾರ್ಮಿಕರು ಗದಗ ನಗರಸಭೆ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರಿಸಿದ್ದಾರೆ. ನಾಲ್ಕನೇ ದಿನವೂ ಪ್ರತಿಭಟನೆ ಮುಂದುವರಿದಿದ್ದು, ದಿನದಿಂದ ದಿನಕ್ಕೆ ಹೋರಾಟ ತೀವ್ರಗೊಳ್ಳುತ್ತಿದೆ.
ನಗರದ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ಪೌರಕಾರ್ಮಿಕರ ಬೇಡಿಕೆಗಳನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ತಮ್ಮ ಬೇಡಿಕೆ ಈಡೇರುವವರೆಗೆ ಧರಣಿ ಮುಂದುವರಿಸುವುದಾಗಿ ಪೌರಕಾರ್ಮಿಕರು ಸ್ಪಷ್ಟಪಡಿಸಿದ್ದು, ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ನೇರ ನೇಮಕಾತಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / lalita MP