
ನವದೆಹಲಿ, 09 ಆಗಸ್ಟ್ (ಹಿ.ಸ.):
ಆ್ಯಂಕರ್:‘ಭಾರತ ಬಿಟ್ಟು ತೊಲಗಿ’ ಚಳವಳಿ ಹಾಗೂ ಕಾಕೋರಿ ರೈಲು ಕಾರ್ಯಾಚರಣೆಯ ವರ್ಷಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಸ್ವಾತಂತ್ರ್ಯ ಹೋರಾಟದ ಅಮರ ಸೇನಾನಿಗಳಿಗೆ ಭಾವಪೂರ್ಣ ನಮನ ಸಲ್ಲಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಂದೇಶ ನೀಡಿದ್ದು, ಐತಿಹಾಸಿಕ ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಭಾಗವಹಿಸಿದ ಎಲ್ಲರ ಧೈರ್ಯವು ಪ್ರತಿಯೊಬ್ಬ ಭಾರತೀಯನಿಗೂ ಸದಾ ಪ್ರೇರಣೆಯಾಗಿರುತ್ತದೆ ಎಂದು ಹೇಳಿದ್ದಾರೆ. ಮಹಾತ್ಮ ಗಾಂಧೀಜಿ ಅವರ ನೇತೃತ್ವದಲ್ಲಿ ನೀಡಲಾದ ‘ಭಾರತ ಬಿಟ್ಟು ತೊಲಗಿ’ ಕರೆ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಶಕ್ತಿ ತುಂಬಿತ್ತು ಎಂದು ಅವರು ಸ್ಮರಿಸಿದ್ದಾರೆ.
ಓಂ ಬಿರ್ಲಾ ಅವರು, ಮಹಾತ್ಮ ಗಾಂಧೀಜಿ ಅವರ ‘ಮಾಡು ಇಲ್ಲವೇ ಮಡಿ’ ಕರೆ ಕೋಟ್ಯಂತರ ಭಾರತೀಯರಲ್ಲಿ ಧೈರ್ಯ ಮತ್ತು ಸಂಕಲ್ಪ ಮೂಡಿಸಿತ್ತು. ಅನೇಕ ಸ್ವಾತಂತ್ರ್ಯ ಹೋರಾಟಗಾರರು ಜೈಲು ಶಿಕ್ಷೆ ಅನುಭವಿಸಿ, ಹೋರಾಡಿ, ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಅವರ ಹೋರಾಟ ಕೇವಲ ರಾಜಕೀಯ ಸ್ವಾತಂತ್ರ್ಯಕ್ಕಾಗಿ ಮಾತ್ರವಲ್ಲದೆ, ಸತ್ಯ, ಅಹಿಂಸೆ, ಪ್ರಜಾಪ್ರಭುತ್ವ, ಸಮಾನತೆ ಮತ್ತು ದೇಶಭಕ್ತಿಯ ಮೌಲ್ಯಗಳ ಆಧಾರದ ಮೇಲೆ ಭಾರತ ನಿರ್ಮಾಣಕ್ಕಾಗಿ ನಡೆದಿತ್ತು ಎಂದು ಹೇಳಿದರು.
ಅಮಿತ್ ಶಾ ಅವರು, ‘ಭಾರತ ಬಿಟ್ಟು ತೊಲಗಿ’ ಚಳವಳಿಯು ದೇಶವಾಸಿಗಳನ್ನು ಒಗ್ಗೂಡಿಸಿ ಬ್ರಿಟಿಷ್ ಆಡಳಿತದಿಂದ ಮುಕ್ತಿ ಪಡೆಯಲು ‘ಮಾಡು ಇಲ್ಲವೇ ಮಡಿ’ ಎಂಬ ಸಂಕಲ್ಪ ಮತ್ತು ಅಪ್ರತಿಮ ಧೈರ್ಯ ನೀಡಿತು ಎಂದರು. ಈ ದಿನ ಸ್ವದೇಶಿ ಅಳವಡಿಕೆ, ಆತ್ಮನಿರ್ಭರ ಭಾರತ ನಿರ್ಮಾಣ ಹಾಗೂ ಅಭಿವೃದ್ಧಿ ಹೊಂದಿದ ಭಾರತದ ಸಂಕಲ್ಪವನ್ನು ಸಾಕಾರಗೊಳಿಸಲು ಪ್ರೇರಣೆ ನೀಡುತ್ತದೆ ಎಂದು ಹೇಳಿದರು.
ಕಾಕೋರಿ ರೈಲು ಕಾರ್ಯಾಚರಣೆ ಸ್ವಾತಂತ್ರ್ಯ ಹೋರಾಟದ ಮರೆಯಲಾಗದ ಅಧ್ಯಾಯವಾಗಿದ್ದು, ಬ್ರಿಟಿಷರ ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ಸಶಸ್ತ್ರ ಕ್ರಾಂತಿಗೆ ಹೊಸ ಶಕ್ತಿ ನೀಡಿತ್ತು. ಚಂದ್ರಶೇಖರ ಆಜಾದ್ ಮತ್ತು ರಾಮಪ್ರಸಾದ್ ಬಿಸ್ಮಿಲ್ ಸೇರಿದಂತೆ ಕ್ರಾಂತಿಕಾರಿಗಳ ತ್ಯಾಗ ಮತ್ತು ಸಾಹಸವನ್ನು ದೇಶ ಸದಾ ಸ್ಮರಿಸಲಿದೆ ಎಂದು ಶಾ ಹೇಳಿದರು.
ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಎಸ್. ಜೈಶಂಕರ್, ಗಿರಿರಾಜ್ ಸಿಂಗ್ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಸೇರಿದಂತೆ ಹಲವು ನಾಯಕರು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಹೋರಾಟವನ್ನು ಸ್ಮರಿಸಿ ಗೌರವ ಸಲ್ಲಿಸಿದರು. ಬಲಿಷ್ಠ, ಸಮೃದ್ಧ, ಆತ್ಮನಿರ್ಭರ ಹಾಗೂ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಶ್ರಮಿಸುವುದೇ ಸ್ವಾತಂತ್ರ್ಯ ಸೇನಾನಿಗಳಿಗೆ ಸಲ್ಲಿಸುವ ನಿಜವಾದ ಗೌರವ ಎಂದು ನಾಯಕರು ಅಭಿಪ್ರಾಯಪಟ್ಟಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.