
ಶ್ರೀ ವಿಜಯಪುರಂ (ಪೋರ್ಟ್ ಬ್ಲೇರ್), 09 ಆಗಸ್ಟ್ (ಹಿ.ಸ.):
ಆ್ಯಂಕರ್:
ಭಾರತದ ಶಾಂತಿ ಮತ್ತು ಉದಾರತೆಯನ್ನು ದುರ್ಬಲತೆ ಎಂದು ಯಾರೂ ಭಾವಿಸಬಾರದು. ರಾಷ್ಟ್ರೀಯ ಹಿತಾಸಕ್ತಿ ಹಾಗೂ ಸಾರ್ವಭೌಮತ್ವದ ರಕ್ಷಣೆಗೆ ಪ್ರತಿಯೊಬ್ಬರೂ ಸದಾ ಸಿದ್ಧರಾಗಿರಬೇಕು ಎಂದು ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಕರೆ ನೀಡಿದ್ದಾರೆ.
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ರಾಜಧಾನಿ ಶ್ರೀ ವಿಜಯಪುರಂನ ಐತಿಹಾಸಿಕ ಫ್ಲ್ಯಾಗ್ ಪಾಯಿಂಟ್‌ನಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಅವರು ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ಚಾಲನೆ ನೀಡಿದರು. ಇದೇ ಸ್ಥಳದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1943ರ ಡಿಸೆಂಬರ್ 30ರಂದು ತ್ರಿವರ್ಣ ಧ್ವಜ ಹಾರಿಸಿದ್ದರು.
‘ಹರ್ ಘರ್ ತಿರಂಗಾ’ ಅಭಿಯಾನ ರಾಷ್ಟ್ರವ್ಯಾಪಿ ಜನಾಂದೋಲನವಾಗಿ ರೂಪುಗೊಂಡಿದ್ದು, ಪ್ರತಿಯೊಬ್ಬರೂ ಹೆಮ್ಮೆಯಿಂದ ತ್ರಿವರ್ಣ ಧ್ವಜ ಹಾರಿಸಿ ದೇಶಭಕ್ತಿ, ಏಕತೆ ಮತ್ತು ಸಾಮೂಹಿಕ ಹೊಣೆಗಾರಿಕೆಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದರು.
ಅಂಡಮಾನ್ ಮತ್ತು ನಿಕೋಬಾರ್ ಕೇವಲ ಭಾರತದ ಭೌಗೋಳಿಕ ಭಾಗವಲ್ಲ, ಬದಲಾಗಿ ಅನೇಕ ದೇಶಭಕ್ತರ ತ್ಯಾಗದಿಂದ ಪವಿತ್ರಗೊಂಡ ಭೂಮಿ ಎಂದು ರಾಧಾಕೃಷ್ಣನ್ ಹೇಳಿದರು. ವೀರ ಸಾವರ್ಕರ್ ಸೇರಿದಂತೆ ಸೆಲ್ಯುಲರ್ ಜೈಲಿನಲ್ಲಿ ಬಂಧಿತರಾಗಿದ್ದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿದ ಅವರು, ಅವರ ಧೈರ್ಯ ಮತ್ತು ದೇಶಭಕ್ತಿ ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಲಿದೆ ಎಂದರು.
‘ವೈವಿಧ್ಯತೆಯಲ್ಲಿ ಏಕತೆ’ ಮತ್ತು ‘ಏಕ ಭಾರತ, ಶ್ರೇಷ್ಠ ಭಾರತ’ಕ್ಕೆ ಅಂಡಮಾನ್-ನಿಕೋಬಾರ್ ಜೀವಂತ ಉದಾಹರಣೆಯಾಗಿದೆ. ಗ್ರೇಟ್ ನಿಕೋಬಾರ್ ದ್ವೀಪ ಅಭಿವೃದ್ಧಿ ಯೋಜನೆಯು ಭಾರತದ ಸಾಗರ ಸಾಮರ್ಥ್ಯ, ಸಂಪರ್ಕ ವ್ಯವಸ್ಥೆ ಮತ್ತು ಆರ್ಥಿಕ ಅವಕಾಶಗಳನ್ನು ಮತ್ತಷ್ಟು ಬಲಪಡಿಸಲಿದೆ. ಇದೇ ವೇಳೆ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆಯ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದು ಅವರು ಹೇಳಿದರು.
ಭಾರತ ಸದಾ ಶಾಂತಿ ಮತ್ತು ಉದಾರತೆಯ ಪರಂಪರೆಯನ್ನು ಹೊಂದಿದೆ. ಆದರೆ ಭಾರತದ ಉದಾರತೆಯನ್ನು ಯಾರೂ ದುರ್ಬಲತೆ ಎಂದು ಪರಿಗಣಿಸಬಾರದು ಎಂದು ಉಪರಾಷ್ಟ್ರಪತಿ ಎಚ್ಚರಿಸಿದರು. ಸಮಾರಂಭದಲ್ಲಿ ಅಂಡಮಾನ್-ನಿಕೋಬಾರ್ ಉಪರಾಜ್ಯಪಾಲ ಅಡ್ಮಿರಲ್ ಡಿ.ಕೆ. ಜೋಶಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.