
ನವದೆಹಲಿ, 30 ಆಗಸ್ಟ್ (ಹಿ.ಸ.):
ಆ್ಯಂಕರ್:ವಿದೇಶಾಂಗ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ಪಬಿತ್ರ ಮಾರ್ಗೆರಿಟಾ ಅವರು ಆ.26ರಿಂದ 29ರವರೆಗೆ ವಿಯೆಟ್ನಾಂ ಮತ್ತು ಲಾವೋಸ್‌ಗೆ ನಾಲ್ಕು ದಿನಗಳ ಅಧಿಕೃತ ಪ್ರವಾಸದಲ್ಲಿ, ಉಭಯ ದೇಶಗಳೊಂದಿಗೆ ಭಾರತದ ರಾಜತಾಂತ್ರಿಕ, ಸಾಂಸ್ಕೃತಿಕ, ವ್ಯಾಪಾರಿಕ ಹಾಗೂ ಕಾರ್ಯತಂತ್ರದ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ಕುರಿತು ಚರ್ಚೆ ನಡೆಸಿದರು.
ಪ್ರವಾಸದ ಮೊದಲ ಹಂತದಲ್ಲಿ ಹನೋಯ್‌ಗೆ ತೆರಳಿದ ಅವರು ಹೋ ಚಿ ಮಿನ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ವಿಯೆಟ್ನಾಂ ಪ್ರಧಾನಿ ಲೆ ಮಿನ್ ಹಂಗ್ ಹಾಗೂ ರಾಷ್ಟ್ರೀಯ ಅಸೆಂಬ್ಲಿಯ ರಕ್ಷಣಾ, ಭದ್ರತೆ ಮತ್ತು ವಿದೇಶಾಂಗ ವ್ಯವಹಾರಗಳ ಸಮಿತಿ ಅಧ್ಯಕ್ಷ ಲೆಫ್ಟಿನೆಂಟ್ ಜನರಲ್ ಲೆ ಟಾನ್ ತೋಯ್ ಅವರನ್ನು ಭೇಟಿ ಮಾಡಿದರು. ಮೇ 2026ರಲ್ಲಿ ವಿಯೆಟ್ನಾಂ ಅಧ್ಯಕ್ಷ ತೋ ಲಾಮ್ ಅವರ ಭಾರತ ಭೇಟಿಯ ಬಳಿಕ ದ್ವಿಪಕ್ಷೀಯ ಸಂಬಂಧಗಳಲ್ಲಿ ಆಗಿರುವ ಪ್ರಗತಿಯನ್ನು ಈ ಸಂದರ್ಭದಲ್ಲಿ ಪರಿಶೀಲಿಸಲಾಯಿತು.
ವಿಯೆಟ್ನಾಂ ಸಾಮಾಜಿಕ ವಿಜ್ಞಾನಗಳ ಅಕಾಡೆಮಿಯಲ್ಲಿ ಮುಖ್ಯ ಭಾಷಣ ಮಾಡಿದ ಮಾರ್ಗೆರಿಟಾ, ಸಂಸ್ಥೆಯ ಅಧ್ಯಕ್ಷ ಡಾ. ಲೆ ವಾನ್ ಲೋಯ್ ಅವರನ್ನು ಭೇಟಿ ಮಾಡಿದರು. ಫಾಪ್ ವಾನ್ ಪಗೋಡಾಗೆ ಭೇಟಿ ನೀಡಿ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಸಸಿ ನೆಟ್ಟರು. ವಿಯೆಟ್ನಾಂನ ಪ್ರಮುಖ ಉಡುಪು ತಯಾರಿಕಾ ಸಂಸ್ಥೆ ಗಾರ್ಕೊ 10 ಕಾರ್ಪೊರೇಷನ್‌ಗೆ ಭೇಟಿ ನೀಡಿ ಪ್ರವಾಸೋದ್ಯಮ ಮತ್ತು ಜವಳಿ ಉದ್ಯಮದ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು.
ಭಾರತೀಯ ಸಮುದಾಯ ಹಾಗೂ ಭಾರತೀಯ ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ ಹಳೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ವಿದೇಶದಲ್ಲಿರುವ ಭಾರತೀಯರ ಕಲ್ಯಾಣಕ್ಕೆ ಕೇಂದ್ರ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು.
ಆ.27ರಿಂದ 29ರವರೆಗೆ ಲಾವೋಸ್ ಪ್ರವಾಸ ಕೈಗೊಂಡ ಸಚಿವರು, ರಾಜಧಾನಿ ವಿಯೆಂತಿಯಾನ್‌ನಲ್ಲಿ ಉಪಪ್ರಧಾನಿ ಹಾಗೂ ವಿದೇಶಾಂಗ ಸಚಿವ ಥೋಂಗ್ಸಾವನ್ ಫೋಮ್ವಿಹಾನ್, ಉಪಪ್ರಧಾನಿ ಹಾಗೂ ರಕ್ಷಣಾ ಸಚಿವ ಜನರಲ್ ಖಮ್ಲಿಯಾಂಗ್ ಒಥಕಾಯ್ಸೋನ್ ಮತ್ತು ಉಪ ವಿದೇಶಾಂಗ ಸಚಿವ ಅನೌಪಾರ್ಬ್ ವಾಂಗ್ನೋರ್ಕಿಯೋ ಅವರೊಂದಿಗೆ ವ್ಯಾಪಕ ದ್ವಿಪಕ್ಷೀಯ ಮಾತುಕತೆ ನಡೆಸಿದರು.
‘ಭಾರತ–ಲಾವೋಸ್ 70’ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಸಾಂಪ್ರದಾಯಿಕ ‘ಫಲಕ್–ಫಲಾಮ್’ ರಾಮಾಯಣ ನೃತ್ಯ ಪರಂಪರೆಯ ಸಂರಕ್ಷಣೆ ಹಾಗೂ ಲಾವೋಸ್ ರಾಷ್ಟ್ರೀಯ ಕಲಾ ಕಾಲೇಜಿನ ಅಭಿವೃದ್ಧಿ ಯೋಜನೆಗೆ ಚಾಲನೆ ನೀಡಿದರು. ಲುವಾಂಗ್ ಪ್ರಬಾಂಗ್‌ನಲ್ಲಿ ‘ವಾಟ್ ಪಾ ಖೇ’ ದೇವಾಲಯದ ಭಿತ್ತಿಚಿತ್ರಗಳ ಸಂರಕ್ಷಣೆಗೆ ಸಂಬಂಧಿಸಿದ ಒಪ್ಪಂದದ ವಿನಿಮಯಕ್ಕೆ ಸಾಕ್ಷಿಯಾದರು. ಮೌಂಟ್ ಫೂ ಸಿಯಲ್ಲಿನ ಬೋಧಿವೃಕ್ಷ ಹಾಗೂ ರಾಮಾಯಣ ರಂಗಮಂದಿರ ಸೇರಿದಂತೆ ತ್ವರಿತ ಅನುಷ್ಠಾನ ಯೋಜನೆಗಳ ಸ್ಥಳಗಳಿಗೂ ಭೇಟಿ ನೀಡಿದರು.
ಪಬಿತ್ರಾ ಮಾರ್ಗೆರಿಟಾ ಅವರ ಪ್ರವಾಸವು ಭಾರತದ ‘ಆ್ಯಕ್ಟ್ ಈಸ್ಟ್’ ನೀತಿಯ ಮೇಲಿನ ನಿರಂತರ ಬದ್ಧತೆಯನ್ನು ಪ್ರತಿಬಿಂಬಿಸಿದೆ. ಆಸಿಯಾನ್‌ನ ಕೇಂದ್ರ ಸ್ಥಾನಮಾನ ಹಾಗೂ ‘ಇಂಡೋ–ಪೆಸಿಫಿಕ್ ಕುರಿತ ಆಸಿಯಾನ್ ದೃಷ್ಟಿಕೋನ’ದ ಹಿನ್ನೆಲೆಯಲ್ಲಿ ವಿಯೆಟ್ನಾಂ ಮತ್ತು ಲಾವೋಸ್ ಜತೆಗಿನ ಭಾರತದ ಪಾಲುದಾರಿಕೆಗೆ ಈ ಭೇಟಿ ಮತ್ತಷ್ಟು ವೇಗ ನೀಡಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.