ಜಲಪ್ರಳಯದಲ್ಲಿ ನಾಪತ್ತೆಯಾದ ಪ್ರತಿಯೊಬ್ಬರ ರಕ್ಷಣೆಗೆ ಪ್ರಯತ್ನ: ನೇಪಾಳ ಪ್ರಧಾನಿ ಬಾಲೇಂದ್ರ ಶಾ
ಕಠ್ಮಂಡು, 30 ಆಗಸ್ಟ್ (ಹಿ.ಸ.): ಆ್ಯಂಕರ್:ನೇಪಾಳದಲ್ಲಿ ಜಲಪ್ರಳಯದಿಂದ ಉಂಟಾಗಿರುವ ಭೀಕರ ಪರಿಸ್ಥಿತಿಯ ನಡುವೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಪ್ರವಾಹದಲ್ಲಿ ನಾಪತ್ತೆಯಾಗಿರುವ ಪ್ರತಿಯೊಬ್ಬರನ್ನೂ ಪತ್ತೆಹಚ್ಚಿ ರಕ್ಷಿಸಲು ಸರ್ಕಾರ ಕೊನೆಯವರೆಗೂ ಪ್ರಯತ್ನಿಸಲಿದೆ ಎಂದು ಪ್ರಧಾನಿ ಬ
नेपाल के प्रधानमंत्री बालेन्द्र शाह। फोटो - इंटरनेट मीडिया


ಕಠ್ಮಂಡು, 30 ಆಗಸ್ಟ್ (ಹಿ.ಸ.):

ಆ್ಯಂಕರ್:ನೇಪಾಳದಲ್ಲಿ ಜಲಪ್ರಳಯದಿಂದ ಉಂಟಾಗಿರುವ ಭೀಕರ ಪರಿಸ್ಥಿತಿಯ ನಡುವೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಪ್ರವಾಹದಲ್ಲಿ ನಾಪತ್ತೆಯಾಗಿರುವ ಪ್ರತಿಯೊಬ್ಬರನ್ನೂ ಪತ್ತೆಹಚ್ಚಿ ರಕ್ಷಿಸಲು ಸರ್ಕಾರ ಕೊನೆಯವರೆಗೂ ಪ್ರಯತ್ನಿಸಲಿದೆ ಎಂದು ಪ್ರಧಾನಿ ಬಾಲೇಂದ್ರ ಶಾ ಭರವಸೆ ನೀಡಿದ್ದಾರೆ.

ಶನಿವಾರ ರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಪ್ರಕಟಿಸಿರುವ ಅವರು, ರಸುವಾ, ನುವಾಕೋಟ್ ಮತ್ತು ಧಾದಿಂಗ್ ಜಿಲ್ಲೆಗಳ ನದಿ ತಗ್ಗು ಪ್ರದೇಶಗಳಲ್ಲಿ ವಾಸಿಸುತ್ತಿದ್ದ ಜನರು ಪ್ರವಾಹದಿಂದ ತೀವ್ರವಾಗಿ ಬಾಧಿತರಾಗಿದ್ದಾರೆ. ಸಂಕಷ್ಟದಲ್ಲಿರುವ ಪ್ರತಿಯೊಬ್ಬ ನಾಗರಿಕನ ಜೀವ ಉಳಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.

ಪ್ರತಿಕೂಲ ಹವಾಮಾನ ಹಾಗೂ ದುರ್ಗಮ ಪ್ರದೇಶಗಳ ನಡುವೆಯೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಈವರೆಗೆ 7,500ಕ್ಕೂ ಹೆಚ್ಚು ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ವಿವಿಧ ಜಲವಿದ್ಯುತ್ ಯೋಜನೆಗಳ ಸ್ಥಳಗಳಲ್ಲಿ ಸಿಲುಕಿದ್ದ 279 ಸಿಬ್ಬಂದಿಯನ್ನೂ ರಕ್ಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯಲ್ಲಿ ನೇಪಾಳ ಸೇನೆ, ಪೊಲೀಸ್ ಹಾಗೂ ಸಶಸ್ತ್ರ ಪೊಲೀಸ್ ಪಡೆಯ 18,708 ಸಿಬ್ಬಂದಿ 16 ಹೆಲಿಕಾಪ್ಟರ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಈವರೆಗೆ 236 ರಕ್ಷಣಾ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಲಾಗಿದೆ. ಭಾರತ ಮತ್ತು ಚೀನಾದ ಅಂತಾರಾಷ್ಟ್ರೀಯ ತಜ್ಞರೂ ನೆಲಮಟ್ಟದಲ್ಲಿ ನೆರವು ನೀಡುತ್ತಿದ್ದಾರೆ ಎಂದು ಶಾ ತಿಳಿಸಿದ್ದಾರೆ.

ಅಪಾಯಕಾರಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮುಂಚೂಣಿ ಸಿಬ್ಬಂದಿಯ ಉತ್ಸಾಹ ಹೆಚ್ಚಿಸಲು ಭದ್ರತಾ ಪಡೆಗಳಿಗೆ ನೀಡುವ ದೈನಂದಿನ ಉಪಾಹಾರ ಭತ್ಯೆ ಹಾಗೂ ಪ್ರೋತ್ಸಾಹಧನವನ್ನು ತಕ್ಷಣ ಹೆಚ್ಚಿಸುವುದಾಗಿ ಪ್ರಧಾನಿ ಘೋಷಿಸಿದ್ದಾರೆ.

ಪ್ರಧಾನಿ ಪರಿಹಾರ ನಿಧಿಗೆ ವಾಣಿಜ್ಯ ಖಾತೆಗಳ ಮೂಲಕ 5.04 ಬಿಲಿಯನ್ ನೇಪಾಳಿ ರೂಪಾಯಿ ಹಾಗೂ 18 ಲಕ್ಷ ಅಮೆರಿಕನ್ ಡಾಲರ್‌ಗಳು ಜಮೆಯಾಗಿವೆ. ವಂಚನೆ ತಪ್ಪಿಸಲು ಅಧಿಕೃತ ಸರ್ಕಾರಿ ಸಂಕೇತದ ಮೂಲಕ ಮಾತ್ರ ದೇಣಿಗೆ ನೀಡುವಂತೆ ಅವರು ನಾಗರಿಕರು ಹಾಗೂ ದಾನಿಗಳಿಗೆ ಮನವಿ ಮಾಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ನೇಪಾಳಕ್ಕೆ ನೆರವು ದೊರೆತಿದೆ. ವಿಶ್ವಬ್ಯಾಂಕ್‌ನಿಂದ 167 ದಶಲಕ್ಷ ಅಮೆರಿಕನ್ ಡಾಲರ್‌ಗಳ ರಿಯಾಯಿತಿ ಸಾಲ, ಏಷ್ಯನ್ ಅಭಿವೃದ್ಧಿ ಬ್ಯಾಂಕ್‌ನಿಂದ 50 ಲಕ್ಷ ಡಾಲರ್‌ಗಳ ಅನುದಾನ ಹಾಗೂ 1.5 ಲಕ್ಷ ಡಾಲರ್‌ಗಳ ತಾಂತ್ರಿಕ ನೆರವು, ಅಮೆರಿಕದಿಂದ 5 ಲಕ್ಷ ಡಾಲರ್‌, ಆಸ್ಟ್ರೇಲಿಯಾದಿಂದ 10 ಲಕ್ಷ ಆಸ್ಟ್ರೇಲಿಯನ್ ಡಾಲರ್‌ ಹಾಗೂ ವಿಶ್ವಸಂಸ್ಥೆಯ ಮೂಲಕ ಸ್ವಿಟ್ಜರ್ಲೆಂಡ್‌ನಿಂದ 10 ಲಕ್ಷ ಸ್ವಿಸ್ ಫ್ರಾಂಕ್ ನೆರವು ದೊರೆತಿದೆ ಎಂದು ಅವರು ತಿಳಿಸಿದ್ದಾರೆ.

ಭಾರತವು 57.5 ಟನ್ ತುರ್ತು ವೈದ್ಯಕೀಯ ಮತ್ತು ಮಾನವೀಯ ನೆರವು ಸಾಮಗ್ರಿಗಳ ಜೊತೆಗೆ 2,000 ಜಲನಿರೋಧಕ ಮೃತದೇಹ ಚೀಲಗಳನ್ನು ನೇಪಾಳಕ್ಕೆ ಕಳುಹಿಸಿದೆ. ಚೀನಾವೂ ಮಾನವೀಯ ನೆರವು ಮತ್ತು ಮೃತದೇಹ ಚೀಲಗಳನ್ನು ಕಳುಹಿಸುತ್ತಿದೆ. ಪ್ರವಾಹದಿಂದ ನಾಶಗೊಂಡ ನದಿ ಸೇತುವೆಗಳನ್ನು ಪುನರ್‌ ನಿರ್ಮಿಸಲು ಚೀನಾದಿಂದ 30 ತಾತ್ಕಾಲಿಕ ಸೇತುವೆಗಳನ್ನು ನೀಡುವಂತೆ ನೇಪಾಳ ಅಧಿಕೃತವಾಗಿ ಮನವಿ ಮಾಡಿದೆ ಎಂದು ಶಾ ತಿಳಿಸಿದ್ದಾರೆ.

ಎಂಟು ಜಿಲ್ಲೆಗಳಿಂದ ಈವರೆಗೆ 675 ಮೃತದೇಹಗಳನ್ನು ಹೊರತೆಗೆಯಲಾಗಿದೆ ಎಂದು ಪ್ರಧಾನಿ ದೃಢಪಡಿಸಿದ್ದಾರೆ. ಪ್ರವಾಹದಿಂದ ಬಾಧಿತರಾದ ಪ್ರತಿಯೊಬ್ಬರಿಗೂ ಸರ್ಕಾರ ಪುನರ್ವಸತಿ ಕಲ್ಪಿಸಲಿದೆ. ರಕ್ಷಣಾ ಕಾರ್ಯಾಚರಣೆ ಮಾತ್ರವಲ್ಲದೆ ದೀರ್ಘಾವಧಿಯ ಪುನರ್‌ನಿರ್ಮಾಣ ಕಾರ್ಯಗಳ ಗುರಿ ಸಂಪೂರ್ಣವಾಗಿ ಈಡೇರುವವರೆಗೂ ಸರ್ಕಾರದ ಸಂಪೂರ್ಣ ವ್ಯವಸ್ಥೆ ಶಕ್ತಿಮೀರಿ ಕಾರ್ಯನಿರ್ವಹಿಸಲಿದೆ ಎಂದು ಬಾಲೇಂದ್ರ ಶಾ ಪುನರುಚ್ಚರಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande