
ನವದೆಹಲಿ, 30 ಆಗಸ್ಟ್ (ಹಿ.ಸ.):
ಆ್ಯಂಕರ್:
ನೇಪಾಳದಲ್ಲಿ ಪ್ರವಾಹದಿಂದ ಉಂಟಾಗಿರುವ ಭೀಕರ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಭಾರತವು 11 ಟನ್ ಪರಿಹಾರ ಸಾಮಗ್ರಿಗಳನ್ನು ಹೊತ್ತ ನಾಲ್ಕನೇ ವಿಮಾನವನ್ನು ಭಾನುವಾರ ಕಠ್ಮಂಡುವಿಗೆ ಕಳುಹಿಸಿದೆ. ವಿಮಾನದಲ್ಲಿ ಬಂದ ಸಾಮಗ್ರಿಗಳನ್ನು ನೇಪಾಳ ಸರ್ಕಾರಕ್ಕೆ ಹಸ್ತಾಂತರಿಸಲಾಗಿದೆ.
ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರು ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದು, ನೇಪಾಳದಲ್ಲಿ ನಡೆಯುತ್ತಿರುವ ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಅಗತ್ಯವಿರುವ ಸಾಮಗ್ರಿಗಳು ಹಾಗೂ ತಾಂತ್ರಿಕ ನೆರವನ್ನು ವಿಮಾನ ಹೊತ್ತೊಯ್ದಿದೆ ಎಂದು ತಿಳಿಸಿದ್ದಾರೆ.
ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗೆ ಅಗತ್ಯವಾದ ಉಪಕರಣಗಳು, ಸುರಂಗ ತಾಂತ್ರಿಕ ತಂಡ, ಮೃತರ ಗುರುತು ಪತ್ತೆಗಾಗಿ ಡಿಎನ್‌ಎ ವಿಶ್ಲೇಷಣೆ ನಡೆಸುವ ವಿಧಿವಿಜ್ಞಾನ ತಜ್ಞರ ತಂಡವನ್ನು ಕಳುಹಿಸಲಾಗಿದೆ. ಇದರ ಜೊತೆಗೆ ಕಂಬಳಿ, ಮಲಗುವ ಚೀಲಗಳು, ತಾರ್ಪಾಲು, ಪ್ಲಾಸ್ಟಿಕ್ ಹಾಳೆಗಳು ಹಾಗೂ ನೈರ್ಮಲ್ಯ ಕಿಟ್‌ಗಳನ್ನು ಒಳಗೊಂಡ ಪರಿಹಾರ ಸಾಮಗ್ರಿಗಳನ್ನು ರವಾನಿಸಲಾಗಿದೆ.
ಆಗಸ್ಟ್ 26ರಂದು ಬೆಳಗ್ಗೆ ನೇಪಾಳದ ರಸುವಾ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೋಟೆಕೋಶಿ ನದಿಯಲ್ಲಿ ದಿಢೀರ್ ಉಂಟಾದ ಭೀಕರ ಪ್ರವಾಹದಿಂದ ವ್ಯಾಪಕ ಹಾನಿಯಾಗಿದೆ. ಇದುವರೆಗೆ ಸುಮಾರು 724 ಮೃತದೇಹಗಳನ್ನು ಪತ್ತೆಹಚ್ಚಲಾಗಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ ವಿದೇಶಿ ಪ್ರಜೆಗಳು ಮತ್ತು ಭದ್ರತಾ ಸಿಬ್ಬಂದಿಯೂ ಸೇರಿದ್ದಾರೆ. ಪ್ರವಾಹದಿಂದ ಮೂರು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.