
ನವದೆಹಲಿ, 30 ಆಗಸ್ಟ್ (ಹಿ.ಸ.):
ಆ್ಯಂಕರ್:ಭಾರತ ಮತ್ತು ಉಜ್ಬೇಕಿಸ್ತಾನ ತಮ್ಮ ದ್ವಿಪಕ್ಷೀಯ ಸಂಬಂಧವನ್ನು ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಮಟ್ಟಕ್ಕೆ ವಿಸ್ತರಿಸಲು ಒಪ್ಪಿಕೊಂಡಿವೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಉಜ್ಬೇಕಿಸ್ತಾನ ಅಧ್ಯಕ್ಷ ಶೌಕತ್ ಮಿರ್ಜಿಯೋಯೆವ್ ಅವರ ನಡುವೆ ಭಾನುವಾರ ನಡೆದ ಪ್ರತಿನಿಧಿ ಮಟ್ಟದ ಮಾತುಕತೆ ಬಳಿಕ 11 ಒಪ್ಪಂದಗಳಿಗೆ ಸಹಿ ಹಾಕಲಾಗಿದ್ದು, ಐದು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ.
2030ರ ವೇಳೆಗೆ ಉಭಯ ದೇಶಗಳ ನಡುವಿನ ವ್ಯಾಪಾರವನ್ನು ಪ್ರಸ್ತುತ 1 ಬಿಲಿಯನ್ ಡಾಲರ್‌ನಿಂದ 5 ಬಿಲಿಯನ್ ಡಾಲರ್‌ಗೆ ಹೆಚ್ಚಿಸಲು ಎರಡೂ ದೇಶಗಳು ಗುರಿ ನಿಗದಿಪಡಿಸಿವೆ. ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಭಾರತದಲ್ಲಿನ ಯುಪಿಐ ಬಳಕೆದಾರರು ಉಜ್ಬೇಕಿಸ್ತಾನದಲ್ಲಿ ಯುಜ್‌ಕ್ಯೂಆರ್ ರಾಷ್ಟ್ರೀಯ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಪಾವತಿ ಮಾಡಲು ಅನುಕೂಲವಾಗುವಂತೆ ಎನ್‌ಪಿಸಿಐ ಇಂಟರ್‌ನ್ಯಾಷನಲ್ ಪೇಮೆಂಟ್ಸ್ ಲಿಮಿಟೆಡ್ ಹಾಗೂ ಉಜ್ಬೇಕಿಸ್ತಾನದ ನ್ಯಾಷನಲ್ ಇಂಟರ್‌ಬ್ಯಾಂಕ್ ಪ್ರೊಸೆಸಿಂಗ್ ಸೆಂಟರ್ ನಡುವೆ ವಾಣಿಜ್ಯ ಒಪ್ಪಂದ ಮಾಡಿಕೊಳ್ಳಲಾಗಿದೆ.
ಅರಲ್ ಸಮುದ್ರ ಪ್ರದೇಶದಲ್ಲಿ ಅರಣ್ಯೀಕರಣಕ್ಕಾಗಿ ಭಾರತವು 10 ಲಕ್ಷ ಅಮೆರಿಕನ್ ಡಾಲರ್ ನೆರವು ನೀಡಲಿದೆ. ಹಿಂದಿ ಭಾಷಾ ಅಧ್ಯಯನ ಉತ್ತೇಜನಕ್ಕಾಗಿ ಲಾಲ್ ಬಹದ್ದೂರ್ ಶಾಸ್ತ್ರಿ ಹಿಂದಿ ಭಾಷಾ ವಿದ್ಯಾರ್ಥಿವೇತನದಡಿ 100 ವಿದ್ಯಾರ್ಥಿವೇತನ ನೀಡಲಾಗುವುದು. ತಾಷ್ಕೆಂಟ್ ಸ್ಟೇಟ್ ಯೂನಿವರ್ಸಿಟಿ ಆಫ್ ಓರಿಯೆಂಟಲ್ ಸ್ಟಡೀಸ್‌ನಲ್ಲಿ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ ಸಂಸ್ಕೃತ ಪೀಠ ಸ್ಥಾಪಿಸಲಾಗುವುದು.
2026ರಿಂದ 2030ರವರೆಗೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮಕ್ಕೂ ಒಪ್ಪಿಗೆ ದೊರೆತಿದೆ. ತೇರ್ಮೆಜ್‌ನ ಪ್ರಾಚೀನ ಬೌದ್ಧ ತಾಣಗಳಾದ ಫಯಾಜ್ ತೆಪಾ ಮತ್ತು ಕರಾ ತೆಪಾಗಳ ಸಂರಕ್ಷಣೆ ಹಾಗೂ ಪುನರ್‌ನಿರ್ಮಾಣಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ಅಭಿಲೇಖಾಗಾರ, ಆಯುರ್ವೇದ ಮತ್ತು ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳು, ಭೂವಿಜ್ಞಾನ ಮತ್ತು ಖನಿಜ ಸಂಪನ್ಮೂಲಗಳು, ಪರಿಸರ ಸಂರಕ್ಷಣೆ, ಪ್ರವಾಸೋದ್ಯಮ, ವಿದೇಶಾಂಗ ಸೇವಾ ತರಬೇತಿ, ಆರ್ಥಿಕ ಮತ್ತು ಹಣಕಾಸು ಸಂವಾದ, ಉನ್ನತ ಶಿಕ್ಷಣ ಹಾಗೂ ವೈಜ್ಞಾನಿಕ ಸಂಶೋಧನೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಒಪ್ಪಂದಗಳು ನಡೆದಿವೆ. ಗುಜರಾತ್ ಮತ್ತು ಉಜ್ಬೇಕಿಸ್ತಾನದ ಸಮರ್‌ಕಂಡ್ ಪ್ರದೇಶದ ನಡುವೆ ಸಹಭಾಗಿತ್ವ ಸಂಬಂಧ ಸ್ಥಾಪಿಸುವ ಒಪ್ಪಂದಕ್ಕೂ ಸಹಿ ಹಾಕಲಾಗಿದೆ.
ಸಾರಿಗೆ ಸಂಪರ್ಕ, ಬಹುಮಾದರಿ ಸಾರಿಗೆ ಮಾರ್ಗಗಳು, ಗಣಿಗಾರಿಕೆ, ಭೂವಿಜ್ಞಾನ, ಪರಮಾಣು ಇಂಧನ ಹಾಗೂ ಪ್ರಮುಖ ಖನಿಜಗಳ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ನಾಯಕರು ಒಪ್ಪಿಕೊಂಡಿದ್ದಾರೆ. ವ್ಯಾಪಾರ ವಿಸ್ತರಣೆಗೆ ಇರುವ ಸುಂಕೇತರ ಅಡೆತಡೆಗಳನ್ನು ನಿವಾರಿಸಲು ಹಾಗೂ ಹೂಡಿಕೆ ಹೆಚ್ಚಿಸಲು ಜಂಟಿ ಕಾರ್ಯಪಡೆ ರಚಿಸಲಾಗುವುದು.
ಭಯೋತ್ಪಾದನೆ, ಗಡಿಯಾಚೆಗಿನ ಭಯೋತ್ಪಾದನೆ, ಭಯೋತ್ಪಾದನೆಗೆ ಹಣಕಾಸು, ಮಾದಕ ವಸ್ತುಗಳ ಕಳ್ಳಸಾಗಣೆ, ಸಂಘಟಿತ ಅಪರಾಧ ಹಾಗೂ ಸೈಬರ್ ಅಪಾಯಗಳ ವಿರುದ್ಧ ಸಹಕಾರ ಬಲಪಡಿಸುವ ಬದ್ಧತೆಯನ್ನೂ ಉಭಯ ನಾಯಕರು ಪುನರುಚ್ಚರಿಸಿದ್ದಾರೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ವ್ಯಾಪಕ ಸುಧಾರಣೆಗೆ ಬೆಂಬಲ ವ್ಯಕ್ತಪಡಿಸಿದ ಉಜ್ಬೇಕಿಸ್ತಾನ, ಭದ್ರತಾ ಮಂಡಳಿಯ ಖಾಯಂ ಸದಸ್ಯತ್ವಕ್ಕಾಗಿ ಭಾರತದ ಉಮೇದುವಾರಿಕೆಗೆ ತನ್ನ ಬೆಂಬಲವನ್ನು ಪುನರುಚ್ಚರಿಸಿದೆ. ಪ್ರಧಾನಿ ಮೋದಿ ಅವರು ಉಜ್ಬೇಕಿಸ್ತಾನ ಅಧ್ಯಕ್ಷರನ್ನು ಭಾರತಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿದ್ದು, ಭೇಟಿಯ ದಿನಾಂಕವನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ನಿಗದಿಪಡಿಸಲಾಗುವುದು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.