ಸಿದ್ದೇಶ್ವರ ಶ್ರೀಗಳ ಜ್ಞಾನಾಮೃತದ ಇಂಗ್ಲಿಷ್ ಹೊತ್ತಿಗೆ ಸ್ವೀಕರಿಸಿದ ಸಚಿವ ಎಂ.ಬಿ. ಪಾಟೀಲ
ವಿಜಯಪುರ, 29 ಆಗಸ್ಟ್ (ಹಿ.ಸ.) ಆ್ಯಂಕರ್ : ಜ್ಞಾನಯೋಗಿ, ಪರಮಪೂಜ್ಯ ಸಿದ್ದೇಶ್ವರ ಶ್ರೀಗಳ ಇಂಗ್ಲಿಷ್ ಪ್ರವಚನಗಳ ಮಹತ್ವದ ಸಂಗ್ರಹವಾಗಿರುವ ‘Realisation of the Self’ ಕೃತಿಯನ್ನು ಹಿರಿಯ ಲೇಖಕರಾದ ಎಂ.ಎಸ್. ಚಾಂದಕವಟೆ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ನೀಡಿ ಗೌರವಿಸಿದರು. ಸಿ
ಪುಸ್ತಕ


ವಿಜಯಪುರ, 29 ಆಗಸ್ಟ್ (ಹಿ.ಸ.)

ಆ್ಯಂಕರ್ : ಜ್ಞಾನಯೋಗಿ, ಪರಮಪೂಜ್ಯ ಸಿದ್ದೇಶ್ವರ ಶ್ರೀಗಳ ಇಂಗ್ಲಿಷ್ ಪ್ರವಚನಗಳ ಮಹತ್ವದ ಸಂಗ್ರಹವಾಗಿರುವ ‘Realisation of the Self’ ಕೃತಿಯನ್ನು ಹಿರಿಯ ಲೇಖಕರಾದ ಎಂ.ಎಸ್. ಚಾಂದಕವಟೆ ಅವರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರಿಗೆ ನೀಡಿ ಗೌರವಿಸಿದರು. ಸಿದ್ದೇಶ್ವರ ಶ್ರೀಗಳ ಜ್ಞಾನ, ಚಿಂತನೆ ಮತ್ತು ಮಾನವೀಯ ಮೌಲ್ಯಗಳನ್ನು ಇಂಗ್ಲಿಷ್ ಭಾಷೆಯ ಮೂಲಕ ವಿಶಾಲ ಜನಸಮುದಾಯಕ್ಕೆ ತಲುಪಿಸುವ ಈ ಮಹತ್ವದ ಪ್ರಯತ್ನಕ್ಕೆ ಸಚಿವ ಎಂ.ಬಿ. ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಂತಸ ವ್ಯಕ್ತಪಡಿಸಿರುವ ಸಚಿವ ಎಂ.ಬಿ. ಪಾಟೀಲ ಅವರು, ಪರಮಪೂಜ್ಯ ಸಿದ್ದೇಶ್ವರ ಶ್ರೀಗಳ ಇಂಗ್ಲಿಷ್ ಪ್ರವಚನಗಳ ಸಂಗ್ರಹವಾದ ‘Realisation of the Self’ ಕೃತಿಯನ್ನು ಸ್ವೀಕರಿಸಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.

ಬೆಂಗಳೂರಿನ ಭಾರತೀಯ ವಿದ್ಯಾಭವನದ ‘ಗಾಂಧಿ ಸೆಂಟರ್ ಆಫ್ ಸೈನ್ಸ್ ಆ್ಯಂಡ್ ಹ್ಯೂಮನ್ ವ್ಯಾಲ್ಯುಸ್’ ಸಂಸ್ಥೆ ಈ ವಿಶೇಷ ಹೊತ್ತಿಗೆಯನ್ನು ಪ್ರಕಟಿಸಿದೆ. ಸಿದ್ದೇಶ್ವರ ಶ್ರೀಗಳೇ ಇಂಗ್ಲಿಷ್ ಭಾಷೆಯಲ್ಲಿ ನೀಡಿರುವ ಪ್ರವಚನಗಳನ್ನು ಒಂದೆಡೆ ಸಂಗ್ರಹಿಸಿ ಈ ಕೃತಿಯಲ್ಲಿ ಪ್ರಕಟಿಸಿರುವುದು ಇದರ ಪ್ರಮುಖ ವಿಶೇಷತೆಯಾಗಿದೆ.

ಸಿದ್ದೇಶ್ವರ ಶ್ರೀಗಳ ಕನ್ನಡ ಪ್ರವಚನಗಳ ಅನೇಕ ಕೃತಿಗಳು ಈಗಾಗಲೇ ಪ್ರಕಟಗೊಂಡಿದ್ದು, ಅವುಗಳ ಭಾಷಾಂತರಗಳೂ ಲಭ್ಯವಿವೆ. ಆದರೆ ಶ್ರೀಗಳ ಇಂಗ್ಲಿಷ್ ಪ್ರವಚನಗಳನ್ನೇ ಪ್ರತ್ಯೇಕವಾಗಿ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ಪ್ರಕಟಿಸಿರುವುದು ಇದೇ ಮೊದಲ ಬಾರಿಗೆ ಎಂಬುದು ಈ ಕೃತಿಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ.

ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಶ್ರೀಗಳು ಪ್ರತಿ ಭಾನುವಾರ ಇಂಗ್ಲಿಷ್ ಭಾಷೆಯಲ್ಲಿ ಪ್ರವಚನಗಳನ್ನು ನೀಡುತ್ತಿದ್ದರು. ಆಧ್ಯಾತ್ಮಿಕತೆ, ಆತ್ಮಜ್ಞಾನ, ಜೀವನದ ಮೌಲ್ಯಗಳು, ಮಾನವೀಯತೆ ಹಾಗೂ ವ್ಯಕ್ತಿತ್ವ ವಿಕಸನದ ಕುರಿತು ಶ್ರೀಗಳು ಅತ್ಯಂತ ಸರಳ, ಸುಲಭ ಮತ್ತು ಪರಿಣಾಮಕಾರಿ ಭಾಷೆಯಲ್ಲಿ ತಮ್ಮ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದರು.

ಕನ್ನಡದಷ್ಟೇ ಇಂಗ್ಲಿಷ್ ಭಾಷೆಯ ಮೇಲೂ ಶ್ರೀಗಳಿಗೆ ಅಪಾರ ಪ್ರಭುತ್ವವಿತ್ತು ಎಂಬುದು ಅವರ ಪ್ರವಚನಗಳಿಂದ ಸ್ಪಷ್ಟವಾಗುತ್ತಿತ್ತು.

ಶ್ರೀಗಳ ಜ್ಞಾನ ಮತ್ತು ಚಿಂತನೆ ಕೇವಲ ಒಂದು ಭಾಷೆ ಅಥವಾ ಪ್ರದೇಶಕ್ಕೆ ಸೀಮಿತವಾಗದೆ ದೇಶ-ವಿದೇಶಗಳ ಜನರಿಗೆ ತಲುಪಬೇಕು ಎಂಬ ಉದ್ದೇಶದಿಂದ ಹಿರಿಯ ಲೇಖಕ ಎಂ.ಎಸ್. ಚಾಂದಕವಟೆ ಅವರು ಕೈಗೊಂಡಿರುವ ಈ ಕಾರ್ಯ ಅತ್ಯಂತ ಶ್ಲಾಘನೀಯವಾಗಿದೆ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂದರ್ಭದಲ್ಲಿ ಸಿದ್ದೇಶ್ವರ ಶ್ರೀಗಳ ಆಯ್ದ ಪ್ರವಚನಗಳನ್ನು ಒಳಗೊಂಡ ‘ಸಾಧಕರ ಜೀವನ ಪ್ರಸಂಗಗಳು’ ಹಾಗೂ ಬುದ್ಧನ ಕುರಿತು ಶ್ರೀಗಳು ವ್ಯಕ್ತಪಡಿಸಿರುವ ವಿಚಾರಗಳನ್ನು ಒಳಗೊಂಡ ‘ಬುದ್ಧನ ನೆನಹುಗಳು’ ಕೃತಿಗಳನ್ನೂ ಸಚಿವ ಎಂ.ಬಿ. ಪಾಟೀಲ ಅವರು ಸ್ವೀಕರಿಸಿದರು.

ಸಿದ್ದೇಶ್ವರ ಶ್ರೀಗಳ ಬದುಕು, ಅವರ ಚಿಂತನೆ ಮತ್ತು ಪ್ರವಚನಗಳು ಲಕ್ಷಾಂತರ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗೆ ಕಾರಣವಾಗಿವೆ. ಆತ್ಮಜ್ಞಾನ, ಸರಳತೆ, ಪ್ರಾಮಾಣಿಕತೆ, ಮಾನವೀಯತೆ ಮತ್ತು ಜೀವನದ ನಿಜವಾದ ಅರ್ಥವನ್ನು ಜನರಿಗೆ ತಿಳಿಸಿಕೊಟ್ಟ ಶ್ರೀಗಳ ಸಂದೇಶಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ.

ಅಂತಹ ಮಹಾನ್ ಜ್ಞಾನಯೋಗಿಯ ಜ್ಞಾನಾಮೃತವನ್ನು ಪುಸ್ತಕಗಳ ಮೂಲಕ ಮುಂದಿನ ಪೀಳಿಗೆಗೂ ಹಾಗೂ ದೇಶ-ವಿದೇಶಗಳ ಓದುಗರಿಗೂ ತಲುಪಿಸುವ ಪ್ರಯತ್ನಗಳು ಅತ್ಯಂತ ಅರ್ಥಪೂರ್ಣವಾಗಿವೆ. ಈ ರೀತಿಯ ಕೃತಿಗಳ ಪ್ರಕಟಣೆ ಸಿದ್ದೇಶ್ವರ ಶ್ರೀಗಳ ವಿಚಾರಧಾರೆಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಈ ಮಹತ್ವದ ಕಾರ್ಯವನ್ನು ಕೈಗೊಂಡಿರುವ ಹಿರಿಯ ಲೇಖಕ ಎಂ.ಎಸ್. ಚಾಂದಕವಟೆ ಅವರಿಗೆ ಸಚಿವರು ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ನಾಗಠಾಣ ಕ್ಷೇತ್ರದ ಶಾಸಕರಾದ ವಿಠ್ಠಲ ಕಟಕದೋಂಢ ಹಾಗೂ ಬಾಪೂಗೌಡ ಪಾಟೀಲ ಶೇಗುಣಸಿ ಅವರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande