ಬಾದಾಮಿ ರೈತ ಮಾರುಕಟ್ಟೆ ಖಾಲಿ:ಮ್ಯೂಜಿಯಂ ರಸ್ತೆ ಅತಿಕ್ರಮಣದಿಂದ ಪ್ರವಾಸಿಗರ ಪರದಾಟ
ಬಾಗಲಕೋಟೆ, 29 ಆಗಸ್ಟ್ (ಹಿ.ಸ.) ಆ್ಯಂಕರ್ : ಐತಿಹಾಸಿಕ ಚಾಲುಕ್ಯರ ರಾಜಧಾನಿಯಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಬಾಗಲಕೋಟೆ ಜಿಲ್ಲೆಯ ಬಾದಾಮಿ ನಗರವು ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರನ್ನು ಪ್ರತಿವರ್ಷ ತನ್ನತ್ತ ಸೆಳೆಯುತ್ತಿದೆ. ಶಿಲ್ಪಕಲೆ, ಗುಹಾಂತರ ದೇವಾಲಯಗಳು, ಐತಿಹಾಸಿಕ ಸ್ಮಾರಕಗಳ
ಅತಿಕ್ರಮಣ


ಬಾಗಲಕೋಟೆ, 29 ಆಗಸ್ಟ್ (ಹಿ.ಸ.)

ಆ್ಯಂಕರ್ : ಐತಿಹಾಸಿಕ ಚಾಲುಕ್ಯರ ರಾಜಧಾನಿಯಾಗಿ ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದಿರುವ ಬಾಗಲಕೋಟೆ ಜಿಲ್ಲೆಯ

ಬಾದಾಮಿ ನಗರವು ದೇಶ-ವಿದೇಶಗಳ ಸಾವಿರಾರು ಪ್ರವಾಸಿಗರನ್ನು ಪ್ರತಿವರ್ಷ ತನ್ನತ್ತ ಸೆಳೆಯುತ್ತಿದೆ. ಶಿಲ್ಪಕಲೆ, ಗುಹಾಂತರ ದೇವಾಲಯಗಳು, ಐತಿಹಾಸಿಕ ಸ್ಮಾರಕಗಳು, ಶಾಸನಗಳು ಹಾಗೂ ಅಪರೂಪದ ಪುರಾತತ್ವ ಸಂಪತ್ತಿನಿಂದ ಕಂಗೊಳಿಸುವ ಬಾದಾಮಿ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ವಿಶೇಷವಾಗಿ ಚಾಲುಕ್ಯರ ಕಾಲದ ಶಿಲ್ಪಕಲೆ ಹಾಗೂ ಪುರಾತತ್ವ ಮಹತ್ವದ ವಸ್ತುಗಳನ್ನು ಒಳಗೊಂಡಿರುವ ಬಾದಾಮಿ ಪುರಾತತ್ವ ಸಂಗ್ರಹಾಲಯವು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ. ದೇಶದ ವಿವಿಧ ರಾಜ್ಯಗಳಷ್ಟೇ ಅಲ್ಲದೆ ವಿದೇಶಗಳಿಂದಲೂ ಆಗಮಿಸುವ ಪ್ರವಾಸಿಗರು ಬಾದಾಮಿಯ ಐತಿಹಾಸಿಕ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರತಿನಿತ್ಯ ಭೇಟಿ ನೀಡುತ್ತಾರೆ.

ಆದರೆ, ಪುರಾತತ್ವ ಸಂಗ್ರಹಾಲಯಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯ ಎರಡೂ ಬದಿಗಳಲ್ಲಿ ಹೆಚ್ಚುತ್ತಿರುವ ಬೀದಿ ವ್ಯಾಪಾರ, ಕಾಯಿಪಲ್ಲೆ ಮಾರಾಟ ಹಾಗೂ ತಾತ್ಕಾಲಿಕ ಅಂಗಡಿಗಳ ಅತಿಕ್ರಮಣದಿಂದ ಪ್ರವಾಸಿಗರು ಮತ್ತು ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಮ್ಯೂಜಿಯಂ ರಸ್ತೆಯಲ್ಲಿ ಅಸ್ತವ್ಯಸ್ತವಾಗಿ ನಡೆಯುತ್ತಿರುವ ವ್ಯಾಪಾರ ಚಟುವಟಿಕೆಗಳಿಂದ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಪಾದಚಾರಿಗಳು ಕೂಡ ಸುಗಮವಾಗಿ ಓಡಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯ ನಾಗರಿಕರು ದೂರಿದ್ದಾರೆ. ಪ್ರವಾಸಿಗರು ತಮ್ಮ ವಾಹನಗಳನ್ನು ನಿಲ್ಲಿಸಲು ಹಾಗೂ ಮ್ಯೂಜಿಯಂ ಮತ್ತು ಇತರ ಐತಿಹಾಸಿಕ ತಾಣಗಳಿಗೆ ತಲುಪಲು ಪರದಾಡುವಂತಾಗಿದೆ ಎಂದು ಪ್ರವಾಸಿಗ ಬೆಂಗಳೂರು ಮೂಲದ ರಾಹುಲ್ ಕಶ್ಯಪ್ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ರೈತ ಮಾರುಕಟ್ಟೆಯನ್ನು ನಿರ್ಮಿಸಲಾಗಿದ್ದರ, ಅದು ಸಮರ್ಪಕವಾಗಿ ಬಳಕೆಯಾಗದೆ ಬಹುತೇಕ ಖಾಲಿಯಾಗಿ ಉಳಿದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಒಂದೆಡೆ ರೈತ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಸಾಕಷ್ಟು ಅವಕಾಶವಿದ್ದರೂ, ಇನ್ನೊಂದೆಡೆ ಪ್ರಮುಖ ಪ್ರವಾಸಿ ರಸ್ತೆಯಲ್ಲಿಯೇ ಬೀದಿ ವ್ಯಾಪಾರ ಹೆಚ್ಚಾಗುತ್ತಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ರೈತ ಮಾರುಕಟ್ಟೆಗೆ ವ್ಯಾಪಾರಿಗಳ ಸ್ಥಳಾಂತರಕ್ಕೆ ಆಗ್ರಹ

ಮ್ಯೂಜಿಯಂ ರಸ್ತೆಯಲ್ಲಿ ವ್ಯಾಪಾರ ನಡೆಸುತ್ತಿರುವ ಬೀದಿ ವ್ಯಾಪಾರಿಗಳು, ತರಕಾರಿ ಹಾಗೂ ಹಣ್ಣು ಮಾರಾಟಗಾರರನ್ನು ಸೂಕ್ತ ವ್ಯವಸ್ಥೆ ಕಲ್ಪಿಸಿ ರೈತ ಮಾರುಕಟ್ಟೆಯೊಳಗೆ ಸ್ಥಳಾಂತರಿಸಬೇಕು ಎಂಬುದು ಸಾರ್ವಜನಿಕರ ಪ್ರಮುಖ ಬೇಡಿಕೆಯಾಗಿದೆ.

ಹೀಗೆ ಮಾಡಿದರೆ ಒಂದು ಕಡೆ ರೈತ ಮಾರುಕಟ್ಟೆ ಸಕ್ರಿಯಗೊಳ್ಳಲಿದ್ದು, ಮತ್ತೊಂದೆಡೆ ಮ್ಯೂಜಿಯಂ ರಸ್ತೆ ಅತಿಕ್ರಮಣದಿಂದ ಮುಕ್ತವಾಗಿ ವಾಹನ ಹಾಗೂ ಪಾದಚಾರಿ ಸಂಚಾರ ಸುಗಮವಾಗಲಿದೆ. ಇದರಿಂದ ಪ್ರವಾಸಿಗರಿಗೆ ಉತ್ತಮ ಅನುಭವ ದೊರೆಯುವುದರ ಜೊತೆಗೆ ವ್ಯಾಪಾರಿಗಳಿಗೂ ವ್ಯವಸ್ಥಿತ ಹಾಗೂ ಶಾಶ್ವತ ವ್ಯಾಪಾರ ಸ್ಥಳ ದೊರೆಯಲಿದೆ ಎಂದು ನಾಗರಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬಾದಾಮಿಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳ ಸುತ್ತಮುತ್ತ ಸ್ವಚ್ಛತೆ, ಸುಗಮ ರಸ್ತೆ, ವಾಹನ ನಿಲುಗಡೆ, ಪಾದಚಾರಿ ಮಾರ್ಗ ಹಾಗೂ ಸುಸಜ್ಜಿತ ವ್ಯಾಪಾರ ವಲಯ ನಿರ್ಮಿಸುವ ಅಗತ್ಯವಿದೆ. ಪ್ರಮುಖ ಪ್ರವಾಸಿ ಮಾರ್ಗಗಳಲ್ಲಿ ಅನಧಿಕೃತ ಹಾಗೂ ಅಸ್ತವ್ಯಸ್ತ ವ್ಯಾಪಾರ ಚಟುವಟಿಕೆಗಳು ಹೆಚ್ಚಾದರೆ ನಗರದ ಸೌಂದರ್ಯ ಮತ್ತು ಪ್ರವಾಸೋದ್ಯಮದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಹೈಟೆಕ್ ರೈತ ಮಾರುಕಟ್ಟೆ ನಿರ್ಮಾಣಕ್ಕೆ ಬೇಡಿಕೆ

ನಗರದ ಅಭಿವೃದ್ಧಿ ಮತ್ತು ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಬಾದಾಮಿಯಲ್ಲಿ ನೂತನ, ಆಧುನಿಕ ಹಾಗೂ ಹೈಟೆಕ್ ಮಾದರಿಯ ರೈತ ಮಾರುಕಟ್ಟೆ ನಿರ್ಮಿಸಬೇಕು ಎಂಬ ಬೇಡಿಕೆಯೂ ಸಾರ್ವಜನಿಕರಿಂದ ಕೇಳಿಬರುತ್ತಿದೆ.

ರೈತರು, ತರಕಾರಿ ಮತ್ತು ಹಣ್ಣು ವ್ಯಾಪಾರಿಗಳು ಹಾಗೂ ಸಣ್ಣ ವ್ಯಾಪಾರಿಗಳಿಗೆ ಒಂದೇ ಸೂರಿನಡಿ ವ್ಯಾಪಾರ ನಡೆಸಲು ಅನುಕೂಲವಾಗುವಂತೆ ಸುಸಜ್ಜಿತ ಮಾರುಕಟ್ಟೆ ನಿರ್ಮಿಸಬೇಕು.

ಮಾರುಕಟ್ಟೆಯಲ್ಲಿ ಸಮರ್ಪಕ ವಾಹನ ನಿಲುಗಡೆ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಸ್ವಚ್ಛತೆ, ವಿದ್ಯುತ್ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ವಿಶ್ವದ ವಿವಿಧ ಭಾಗಗಳಿಂದ ಬಾದಾಮಿಗೆ ಆಗಮಿಸುವ ಪ್ರವಾಸಿಗರನ್ನು ಆಕರ್ಷಿಸುವ ರೀತಿಯಲ್ಲಿ ನಗರದ ಪ್ರಮುಖ ಭಾಗಗಳನ್ನು ಅಭಿವೃದ್ಧಿಪಡಿಸುವ ಜೊತೆಗೆ ಸ್ಥಳೀಯ ವ್ಯಾಪಾರ ವ್ಯವಸ್ಥೆಯನ್ನು ಸಹ ಆಧುನಿಕಗೊಳಿಸಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ತಕ್ಷಣ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ಬಾದಾಮಿ ವಿಶ್ವಪ್ರಸಿದ್ಧ ಐತಿಹಾಸಿಕ ಹಾಗೂ ಪ್ರವಾಸಿ ನಗರವಾಗಿರುವ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು, ಜಿಲ್ಲಾಡಳಿತ, ಸಂಬಂಧಿತ ಇಲಾಖೆಗಳು ಹಾಗೂ ಜನಪ್ರತಿನಿಧಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಖಾಲಿಯಾಗಿ ಉಳಿದಿರುವ ರೈತ ಮಾರುಕಟ್ಟೆಯನ್ನು ಸಮರ್ಪಕವಾಗಿ ಬಳಕೆಗೆ ತಂದು, ಮ್ಯೂಜಿಯಂ ರಸ್ತೆಯ ಅತಿಕ್ರಮಣವನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು. ಜೊತೆಗೆ ಪ್ರವಾಸಿಗರಿಗೆ ಅನುಕೂಲವಾಗುವಂತೆ ರಸ್ತೆ, ಪಾರ್ಕಿಂಗ್, ಸ್ವಚ್ಛತೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.

ನಗರದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರವಾಸೋದ್ಯಮ ಪ್ರಮುಖ ಪಾತ್ರ ವಹಿಸುತ್ತಿರುವುದರಿಂದ ಬಾದಾಮಿಯ ಐತಿಹಾಸಿಕ ಮಹತ್ವಕ್ಕೆ ತಕ್ಕಂತೆ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಅಗತ್ಯವಾಗಿದೆ. ರೈತ ಮಾರುಕಟ್ಟೆಯನ್ನು ಸಕ್ರಿಯಗೊಳಿಸುವ ಜೊತೆಗೆ ನೂತನ ಮತ್ತು ಆಧುನಿಕ ಮಾರುಕಟ್ಟೆ ನಿರ್ಮಾಣಕ್ಕೆ ಯೋಜನೆ ರೂಪಿಸಿ ಶೀಘ್ರದಲ್ಲಿಯೇ ಕಾಮಗಾರಿಗೆ ಚಾಲನೆ ನೀಡಬೇಕು ಎಂಬ ಬೇಡಿಕೆಯೂ ಕೇಳಿಬರುತ್ತಿದೆ.

ಪ್ರವಾಸೋದ್ಯಮ, ವ್ಯಾಪಾರ ಹಾಗೂ ನಗರದ ಸಾಂಸ್ಕೃತಿಕ ಅಭಿವೃದ್ಧಿಗೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ ಸರ್ಕಾರ ಮತ್ತು ಜನಪ್ರತಿನಿಧಿಗಳು ತುರ್ತು ಕ್ರಮ ಕೈಗೊಳ್ಳಬೇಕು ಎಂಬುದು ಬಾದಾಮಿ ನಾಗರಿಕರ ಒಕ್ಕೊರಲಿನ ಆಗ್ರಹವಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande