ಇಂಡಿ ಬರಪೀಡಿತ ತಾಲ್ಲೂಕು ಘೋಷಣೆಗೆ ಬಿಜೆಪಿ ಆಗ್ರಹ: ಆಗಸ್ಟ್ 31ರಿಂದ ರೈತರೊಂದಿಗೆ ಧರಣಿ ಎಚ್ಚರಿಕೆ
ವಿಜಯಪುರ, 29 ಆಗಸ್ಟ್ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕನ್ನು ತಕ್ಷಣವೇ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು. ಇಲ್ಲವಾದಲ್ಲಿ ಆಗಸ್ಟ್ 31ರಿಂದ ನಗರದ ಆಡಳಿತ ಸೌಧದ ಎದುರು ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ರೈತರನ್ನು ಸಂಘಟಿಸಿ ಉಗ್ರ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ
ಹೊರಟ


ವಿಜಯಪುರ, 29 ಆಗಸ್ಟ್ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯ ಇಂಡಿ ತಾಲೂಕನ್ನು ತಕ್ಷಣವೇ ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು. ಇಲ್ಲವಾದಲ್ಲಿ ಆಗಸ್ಟ್ 31ರಿಂದ ನಗರದ ಆಡಳಿತ ಸೌಧದ ಎದುರು ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ರೈತರನ್ನು ಸಂಘಟಿಸಿ ಉಗ್ರ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮುಖಂಡರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇಂಡಿ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮಂಡಲ ಅಧ್ಯಕ್ಷ ಹಣಮಂತ್ರಾಯಗೌಡ ಪಾಟೀಲ, ತಾಲೂಕಿನಾದ್ಯಂತ ಮಳೆ ಕೊರತೆ ಹಾಗೂ ಬೆಳೆ ಹಾನಿಯಿಂದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಭೀಕರ ಪರಿಸ್ಥಿತಿಯ ನಡುವೆಯೂ ರಾಜ್ಯ ಸರ್ಕಾರ ಇಂಡಿ ತಾಲೂಕನ್ನು ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸದೇ ಇರುವುದು ಅತ್ಯಂತ ದುರದೃಷ್ಟಕರ ಹಾಗೂ ರೈತ ವಿರೋಧಿ ಧೋರಣೆಯಾಗಿದೆ ಎಂದು ಆರೋಪಿಸಿದರು.

ಇಂಡಿ ತಾಲೂಕಿನ ರೈತರು ಈಗಾಗಲೇ ಸಂಕಷ್ಟದ ದಿನಗಳನ್ನು ಎದುರಿಸುತ್ತಿದ್ದು, ಬಿತ್ತನೆ ಮಾಡಿದ ಬೆಳೆಗಳು ಮಳೆ ಕೊರತೆಯಿಂದ ಹಾನಿಗೊಳಗಾಗಿವೆ. ಕೃಷಿ ಚಟುವಟಿಕೆಗಳಿಗೆ ರೈತರು ಮಾಡಿದ ವೆಚ್ಚವೂ ವಾಪಸ್ ಬರುವ ಸ್ಥಿತಿ ಇಲ್ಲದಂತಾಗಿದೆ. ಸಾಲ ಮಾಡಿ ಕೃಷಿ ಮಾಡಿದ ಅನೇಕ ರೈತ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದ ಪರಿಹಾರ ಮತ್ತು ನೆರವಿನ ನಿರೀಕ್ಷೆಯಲ್ಲಿವೆ ಎಂದು ಅವರು ಹೇಳಿದರು.

ಆದರೆ, ನೈಜ ಪರಿಸ್ಥಿತಿಯನ್ನು ಅರಿತುಕೊಳ್ಳದೇ ಸರ್ಕಾರ ಇಂಡಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶಗಳ ಪಟ್ಟಿಯಿಂದ ಹೊರಗಿಟ್ಟಿದೆ. ಇದು ಇಂಡಿ ಕ್ಷೇತ್ರದ ರೈತರ ಹಿತರಕ್ಷಣೆಯನ್ನು ಸಂಪೂರ್ಣವಾಗಿ ಕಡೆಗಣಿಸಿದಂತಾಗಿದೆ. ರಾಜ್ಯ ಸರ್ಕಾರ ಕೂಡಲೇ ತನ್ನ ನಿರ್ಧಾರವನ್ನು ಮರುಪರಿಶೀಲಿಸಿ, ವಾಸ್ತವಿಕ ಪರಿಸ್ಥಿತಿಯ ಸಮೀಕ್ಷೆ ನಡೆಸಿ ಇಂಡಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಬೇಕು ಎಂದು ಅವರು ಬಲವಾಗಿ ಒತ್ತಾಯಿಸಿದರು.

ರೈತರಿಗೆ ಸೂಕ್ತ ಪರಿಹಾರ, ಬೆಳೆ ನಷ್ಟ ಪರಿಹಾರ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು. ರೈತರ ಸಂಕಷ್ಟವನ್ನು ರಾಜಕೀಯ ದೃಷ್ಟಿಯಿಂದ ನೋಡದೆ ಮಾನವೀಯತೆ ಹಾಗೂ ಜವಾಬ್ದಾರಿಯಿಂದ ಪರಿಹರಿಸಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದರು.

ಸ್ಥಳೀಯ ಶಾಸಕ ಯಶವಂತ್ರಾಯಗೌಡರು ಕ್ಷೇತ್ರದ ರೈತರ ಸಂಕಷ್ಟದ ಬಗ್ಗೆ ಸರ್ಕಾರದ ಗಮನ ಸೆಳೆಯಬೇಕು. ಸಚಿವ ಸ್ಥಾನ ಪಡೆಯಲು ಮಾಡುವ ಪ್ರಯತ್ನದ ಕನಿಷ್ಠ ಶೇ.50ರಷ್ಟು ಪ್ರಯತ್ನವನ್ನಾದರೂ ಕ್ಷೇತ್ರದ ರೈತರ ಸಮಸ್ಯೆ ಪರಿಹಾರಕ್ಕೆ ಮೀಸಲಿಟ್ಟು, ಇಂಡಿಯನ್ನು ಬರಗಾಲ ಪಟ್ಟಿಗೆ ಸೇರಿಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಬಿಜೆಪಿ ಮುಖಂಡರು ಟೀಕಿಸಿದರು.

ಇಂಡಿ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸದಿದ್ದರೆ ಆಗಸ್ಟ್ 31ರಿಂದ ನಗರದ ಆಡಳಿತ ಸೌಧದ ಎದುರು ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ರೈತರನ್ನು ಸೇರಿಸಿ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ರೈತರ ನ್ಯಾಯಸಮ್ಮತ ಹಕ್ಕಿಗಾಗಿ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಸಿದ್ದಲಿಂಗ ಹಂಜಗಿ, ಅನಿಲ ಜಮಾದಾರ, ಮಲ್ಲಿಕಾರ್ಜುನ ಕಿವುಡೆ, ಶೀಲವಂತ ಉಮರಾಣಿ, ದೇವೇಂದ್ರ ಕುಂಬಾರ, ರೈತ ಮೋರ್ಚಾ ಉಪಾಧ್ಯಕ್ಷರು, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಈರಣ್ಣಗೌಡ ಪಾಟೀಲ, ಜೆಟ್ಟು ಮರಡಿ, ನಾಗೇಶ ಹೆಗಡ್ಯಾಳ, ರಮೇಶ ಧರೇನವರ, ಮಹೇಶ ಹೂಗಾರ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande