
ಸೇಂಟ್ ಲೂಯಿಸ್, 28 ಆಗಸ್ಟ್(ಹಿ.ಸ.):
ಆ್ಯಂಕರ್:ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಜ್ಞಾನಂದ ಅವರು ಅದ್ಭುತ ಪುನರಾಗಮನದ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಫ್ಯಾಬಿಯಾನೊ ಕರುವಾನಾ ಅವರನ್ನು ಮಣಿಸಿದ ಅವರು ಗ್ರ್ಯಾಂಡ್ ಚೆಸ್ ಟೂರ್ ಫೈನಲ್ ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಫೈನಲ್‌ನ ಕೊನೆಯ ದಿನ ಪ್ರಜ್ಞಾನಂದ ಅವರು ಆರು ಅಂಕಗಳ ಹಿನ್ನಡೆಯಲ್ಲಿದ್ದರು. ಆದರೆ ಎರಡೂ ಕ್ಷಿಪ್ರ ಚೆಸ್ ಪಂದ್ಯಗಳನ್ನು ಗೆದ್ದು ಭರ್ಜರಿ ತಿರುಗೇಟು ನೀಡಿದರು. ಬಳಿಕ ಒತ್ತಡದ ಬ್ಲಿಟ್ಜ್ ಪಂದ್ಯಗಳಲ್ಲೂ ಮುನ್ನಡೆ ಕಾಯ್ದುಕೊಂಡು 15-13 ಅಂಕಗಳ ಅಂತರದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು.
ಇದು ಪ್ರಜ್ಞಾನಂದ ಅವರ ವೃತ್ತಿಜೀವನದ ಇದುವರೆಗಿನ ಅತಿ ದೊಡ್ಡ ಪ್ರಶಸ್ತಿಯಾಗಿದ್ದು, ಗೆಲುವಿನೊಂದಿಗೆ ಅವರಿಗೆ 2 ಲಕ್ಷ ಅಮೆರಿಕನ್ ಡಾಲರ್ ಬಹುಮಾನ ದೊರೆತಿದೆ.
ಶಾಸ್ತ್ರೀಯ ಚೆಸ್ ಪಂದ್ಯಗಳ ಬಳಿಕ ಕರುವಾನಾ ಆರು ಅಂಕಗಳ ಮುನ್ನಡೆ ಹೊಂದಿದ್ದರು. ಮೊದಲ ಪಂದ್ಯದಲ್ಲಿ ಪ್ರಜ್ಞಾನಂದ 0-6ರಿಂದ ಸೋತಿದ್ದರೆ, ಎರಡನೇ ಪಂದ್ಯ 3-3ರಲ್ಲಿ ಡ್ರಾಗೊಂಡಿತ್ತು. ನಂತರ ಎರಡೂ ಕ್ಷಿಪ್ರ ಪಂದ್ಯಗಳನ್ನು ಗೆದ್ದ ಪ್ರಜ್ಞಾನಂದ ಅವರು ಬ್ಲಿಟ್ಜ್‌ನ ನಾಲ್ಕು ಪಂದ್ಯಗಳಲ್ಲಿ ಮುನ್ನಡೆ ಕಾಯ್ದುಕೊಂಡು ಪ್ರಶಸ್ತಿ ಗೆದ್ದರು.
ಪ್ರಶಸ್ತಿ ಗೆದ್ದ ಬಳಿಕ ಮಾತನಾಡಿದ ಪ್ರಜ್ಞಾನಂದ, ಪ್ರಶಸ್ತಿ ಗೆದ್ದಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವಿಶ್ವ ಚಾಂಪಿಯನ್‌ಶಿಪ್ ಬಳಿಕ ಗ್ರ್ಯಾಂಡ್ ಚೆಸ್ ಟೂರ್ ವಿಶ್ವದ ಅತ್ಯಂತ ಪ್ರಮುಖ ಸ್ಪರ್ಧೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.