
ಬೆಂಗಳೂರು, 27 ಆಗಸ್ಟ್ (ಹಿ.ಸ.):
ಆ್ಯಂಕರ್:
ನೇಪಾಳದಲ್ಲಿ ಸಂಭವಿಸಿರುವ ಭೀಕರ ಪ್ರವಾಹದಲ್ಲಿ ಬೆಂಗಳೂರಿನ ಐವರು ಸೇರಿದಂತೆ ಕರ್ನಾಟಕ ಮೂಲದ ಪ್ರವಾಸಿಗರು ಸಿಲುಕಿದ್ದು, ಅವರನ್ನು ತಕ್ಷಣವೇ ಸಂಪರ್ಕಿಸಿ ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದಾರೆ.
ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಲು ಹಿರಿಯ ಅಧಿಕಾರಿ ಅಥವಾ ಅಗತ್ಯವಿದ್ದರೆ ಸಚಿವರೊಬ್ಬರನ್ನು ಅಲ್ಲಿಗೆ ಕಳುಹಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಟಿಬೆಟ್ ಜೊತೆ ಗಡಿ ಹಂಚಿಕೊಂಡಿರುವ ನೇಪಾಳದ ಮೂರು ಜಿಲ್ಲೆಗಳಲ್ಲಿ ಉಂಟಾದ ಹಠಾತ್ ಪ್ರವಾಹದಿಂದಾಗಿ ಈಗಾಗಲೇ 177 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ರಸ್ತೆಗಳು, ಮನೆಗಳು ಹಾಗೂ ಸೇತುವೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಪ್ರವಾಹದಲ್ಲಿ ಒಟ್ಟು 300 ಭಾರತೀಯರು ಕಾಣೆಯಾಗಿದ್ದಾರೆ. ಅವರ ರಕ್ಷಣೆಗೆ ಭಾರತ ಸರ್ಕಾರ ಮುಂದಾಗಿದ್ದು, ರಾಜ್ಯ ಸರ್ಕಾರವೂ ಪೂರ್ಣ ಪ್ರಮಾಣದಲ್ಲಿ ಸ್ಪಂದಿಸುತ್ತಿದೆ.
ಸಂಕಷ್ಟದಲ್ಲಿರುವ ಕನ್ನಡಿಗರು ಮತ್ತು ಅವರ ಕುಟುಂಬಗಳ ಸಹಾಯಕ್ಕಾಗಿ ರಾಜ್ಯ ಸರ್ಕಾರದಿಂದ ತುರ್ತು ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದೆ. ಸಂತ್ರಸ್ತರು ಅಥವಾ ಅವರ ಕುಟುಂಬದವರು 1070 ಅಥವಾ 080-2253707 ಸಂಖ್ಯೆಗಳಿಗೆ ಕರೆ ಮಾಡಿ ತಕ್ಷಣವೇ ನೆರವು ಪಡೆಯಬಹುದು ಎಂದು ಸರ್ಕಾರ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R