
ಬೆಂಗಳೂರು, 27 ಆಗಸ್ಟ್ (ಹಿ.ಸ.)
ಆ್ಯಂಕರ್:
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಲಬೆರಕೆ ಆಹಾರ ಪದಾರ್ಥಗಳು ಹಾಗೂ ಅಡುಗೆ ಎಣ್ಣೆಯ ಬಳಕೆ ವಿರುದ್ಧ ರಾಜ್ಯ ಸರ್ಕಾರ ಕಠಿಣ ಸಮರ ಸಾರಿದೆ. ಕಡಿಮೆ ಬೆಲೆಗೆ ಸಿಗುತ್ತದೆ ಎಂಬ ಕಾರಣಕ್ಕೆ ಗ್ರಾಹಕರು ಖರೀದಿಸುವ ಲೂಸ್ ಅಡುಗೆ ಎಣ್ಣೆ ಮತ್ತು ಮರುಬಳಕೆ ಎಣ್ಣೆಯ ಮಾರಾಟಕ್ಕೆ ಕಡಿವಾಣ ಹಾಕಲು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮುಂದಾಗಿದೆ.
ಮಾರುಕಟ್ಟೆಯಲ್ಲಿ ಮುದ್ರಿತ ಲೇಬಲ್ ಇಲ್ಲದೆ, ಪೌಚ್ ಅಥವಾ ಡಬ್ಬಗಳಲ್ಲಿ ಸೀಲ್ ಮಾಡದೆ ಲೂಸ್ ಆಗಿ ಮಾರಾಟವಾಗುವ ಅಡುಗೆ ಎಣ್ಣೆಯನ್ನು ಸಂಪೂರ್ಣವಾಗಿ ಬ್ಯಾನ್ ಮಾಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಲೂಸ್ ಎಣ್ಣೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳು ಹಾಗೂ ಇದರ ಪರ-ವಿರೋಧಗಳ ಕುರಿತು ಸಮಗ್ರ ವರದಿ ನೀಡಲು ತಜ್ಞ ಅಧಿಕಾರಿಗಳ ಸಮಿತಿಯನ್ನು ರಚಿಸಲಾಗಿದೆ. ಈ ಸಮಿತಿಯ ವರದಿಯ ಆಧಾರದ ಮೇಲೆ ಮುಂದಿನ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಅಡುಗೆ ಎಣ್ಣೆಯಲ್ಲಿ ಅಗ್ಗದ ಅಥವಾ ಕಲುಷಿತ ಎಣ್ಣೆಗಳ ಬೆರಕೆ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಇಲಾಖೆಯು ನಿರಂತರವಾಗಿ ಸ್ಯಾಂಪಲ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸುತ್ತಿದೆ. ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾದರೆ ಮಾರಾಟವನ್ನು ತಡೆಹಿಡಿದು ಕಾನೂನು ಕ್ರಮ ಜರುಗಿಸುವುದು ಖಚಿತವಾಗಿದೆ. ಯಾವುದೇ ಪರವಾನಗಿ ಇಲ್ಲದೆ ಅಥವಾ ಸರಿಯಾದ ಮಾಹಿತಿ ನಮೂದಿಸದೆ ಅಡುಗೆ ಎಣ್ಣೆ ಮಾರಾಟ ಮಾಡುವವರ ವಿರುದ್ಧವೂ ಕಠಿಣ ಕ್ರಮಕ್ಕೆ ಸರ್ಕಾರ ಮುಂದಾಗಿದೆ.
ಅಡುಗೆಮನೆಯಲ್ಲಿ ಪ್ರತಿದಿನ ಬಳಸುವ ಎಣ್ಣೆ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ. ಲೂಸ್ ಎಣ್ಣೆಯ ಬದಲಿಗೆ ಕಡ್ಡಾಯವಾಗಿ ಸರ್ಕಾರದ ಮಾನದಂಡಗಳನ್ನೊಳಗೊಂಡ, ಸೀಲ್ ಮಾಡಿದ ಮತ್ತು ಸರಿಯಾದ ಲೇಬಲ್ ಇರುವ ಪ್ಯಾಕೇಜ್ಡ್ ಎಣ್ಣೆಯನ್ನು ಮಾತ್ರ ಖರೀದಿಸುವಂತೆ ಆಹಾರ ಸುರಕ್ಷತೆ ಇಲಾಖೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ. ರಾಜ್ಯ ಸರ್ಕಾರದ ಈ ಹೊಸ ಹೆಜ್ಜೆಯಿಂದ ಕಲಬೆರಕೆ ಎಣ್ಣೆ ಮಾಫಿಯಾಕ್ಕೆ ತಡೆಬೀಳಲಿದ್ದು, ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮುನ್ನೆಚ್ಚರಿಕೆ ಸಿಗುವ ನಿರೀಕ್ಷೆಯಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R