
ಬೆಂಗಳೂರು, 27 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಜ್ಯದ ಕ್ರಿಶ್ಚಿಯನ್ ಸಮುದಾಯದ ಅರ್ಹ ಫಲಾನುಭವಿಗಳಿಂದ 2026-27ನೇ ಸಾಲಿನ ವಿವಿಧ ಕಲ್ಯಾಣ ಹಾಗೂ ಆರ್ಥಿಕ ಸಬಲೀಕರಣ ಯೋಜನೆಗಳಡಿ ಸೌಲಭ್ಯ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸಮುದಾಯದ ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗಾಗಿ ಸರ್ಕಾರವು ವಿವಿಧ ಯೋಜನೆಗಳಡಿ ಸಾಲ ಮತ್ತು ಸಂಪೂರ್ಣ ಸಹಾಯಧನವನ್ನು ಘೋಷಿಸಿದೆ.
ಪ್ರಮುಖ ಯೋಜನೆಗಳ ವಿವರ:ಗಂಗಾ ಕಲ್ಯಾಣ ಯೋಜನೆ: ಗ್ರಾಮೀಣ ಪ್ರದೇಶದ ಕ್ರಿಶ್ಚಿಯನ್ ಸಮುದಾಯದ ಸಣ್ಣ ಹಾಗೂ ಅತಿ ಸಣ್ಣ ರೈತರು ಕೊಳವೆಬಾವಿ ಕೊರೆಯಿಸಿ, ಪಂಪ್ ಮೋಟಾರ್ ಮತ್ತು ವಿದ್ಯುದ್ಧೀಕರಣಗೊಳಿಸಿ ನೀರು ಪಡೆದುಕೊಳ್ಳಲು ಇದು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಿಗೆ ₹4 ಲಕ್ಷ ಹಾಗೂ ಇತರೆ ಜಿಲ್ಲೆಗಳಿಗೆ ₹3 ಲಕ್ಷ ನಿಗದಿಪಡಿಸಲಾಗಿದೆ.
ಅರಿವು ವಿದ್ಯಾಭ್ಯಾಸ ಸಾಲ: ಸಿಇಟಿ, ನೀಟ್, ಜೆಇಇ, ಸಾಮಾನ್ಯ ಪದವಿ, ಸ್ನಾತಕೋತ್ತರ, ಪಿಹೆಚ್.ಡಿ., ಐಟಿಐ ಹಾಗೂ ಡಿಪ್ಲೋಮಾ ಕೋರ್ಸ್ಗಳ ವಿದ್ಯಾರ್ಥಿಗಳಿಗೆ (ಸಕಾರಿ, ಮ್ಯಾನೇಜ್ಮೆಂಟ್ ಮತ್ತು ಖಾಸಗಿ ಸೀಟುಗಳು) ಬಡ್ಡಿರಹಿತ ಶೈಕ್ಷಣಿಕ ಸಾಲ ನೀಡಲಾಗುತ್ತದೆ.ವಿದೇಶಿ ವಿದ್ಯಾಭ್ಯಾಸ ಸಾಲ: ಮಾನ್ಯತೆ ಪಡೆದ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಲು ಇಚ್ಛಿಸುವವರಿಗೆ ₹20 ಲಕ್ಷದವರೆಗೆ ಬಡ್ಡಿರಹಿತ ಸಾಲ ಸೌಲಭ್ಯ ದೊರೆಯಲಿದೆ.
ಸ್ವಯಂ ಉದ್ಯೋಗ ಮತ್ತು ಮಹಿಳಾ ಸಬಲೀಕರಣ: ಮಹಿಳಾ ಸ್ವ-ಸಹಾಯ ಗುಂಪುಗಳ ಸ್ವಯಂ ಉದ್ಯೋಗಕ್ಕೆ ಬ್ಯಾಂಕ್ಗಳಿಂದ ಪಡೆಯುವ ಸಾಲಕ್ಕೆ ಶೇ 50ರಷ್ಟು ಅಥವಾ ಗರಿಷ್ಠ ₹2 ಲಕ್ಷದವರೆಗೆ ಬ್ಯಾಕ್-ಎಂಡ್ ಸಹಾಯಧನ ಸಿಗಲಿದೆ. ಅಲ್ಲದೆ, ಸಂಚಾರಿ ಆಹಾರ ಉದ್ಯಮ (ಮೊಬೈಲ್ ಫುಡ್ ಟ್ರಕ್) ಆರಂಭಿಸಲು ಆರ್ಥಿಕ ನೆರವು ಲಭ್ಯವಿದೆ.ಆಶ್ರಯ ಗೃಹ ಯೋಜನೆ: ವಿಶೇಷ ಚೇತನರು ಮತ್ತು ಎಚ್ಐವಿ ಪೀಡಿತರಿಗೆ ಉಚಿತ ಆಹಾರ, ವಸತಿ ಹಾಗೂ ವೈದ್ಯಕೀಯ ಸೌಲಭ್ಯ ಒದಗಿಸುವ ಅರ್ಹ ಸ್ವಯಂಸೇವಾ ಸಂಸ್ಥೆಗಳಿಗೆ ಗರಿಷ್ಠ ₹8 ಲಕ್ಷ ಸಹಾಯಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆ ಮಾಹಿತಿ:ಆಸಕ್ತರು ಹಾಗೂ ಅರ್ಹರು ಸೆಪ್ಟೆಂಬರ್ 30ರೊಳಗೆ ಅಧಿಕೃತ ವೆಬ್ಸೈಟ್ https://kccdonline.karnataka.gov.in/ ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R