ವಿಜಯಪುರ ಜಿಲ್ಲೆಯಲ್ಲಿ ಕಳ್ಳರ ಹಾವಳಿ: ಶಟರ್ ಮುರಿದು ಸರಣಿ ಕಳ್ಳತನ
ವಿಜಯಪುರ, 27 ಆಗಸ್ಟ್ (ಹಿ.ಸ.) ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಅಂಗಡಿಗಳ ಶಟರ್ ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ. ಹೂವಿನಹಿಪ್ಪರಗಿ ಗ್ರಾಮದಲ್ಲಿ ನಾಲ್ವರು ಮುಸುಕುಧಾರಿ ಕಳ್ಳರ ಗ್ಯಾಂಗ
ಕಳ್ಳತನ


ವಿಜಯಪುರ, 27 ಆಗಸ್ಟ್ (ಹಿ.ಸ.)

ಆ್ಯಂಕರ್ : ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಕಳ್ಳರ ಹಾವಳಿ ಹೆಚ್ಚಾಗಿದ್ದು, ಅಂಗಡಿಗಳ ಶಟರ್ ಮುರಿದು ಸರಣಿ ಕಳ್ಳತನ ಮಾಡಿರುವ ಘಟನೆ ಬಸವನ ಬಾಗೇವಾಡಿ ತಾಲೂಕಿನ ಹೂವಿನಹಿಪ್ಪರಗಿ ಗ್ರಾಮದಲ್ಲಿ ನಡೆದಿದೆ.

ಹೂವಿನಹಿಪ್ಪರಗಿ ಗ್ರಾಮದಲ್ಲಿ ನಾಲ್ವರು ಮುಸುಕುಧಾರಿ ಕಳ್ಳರ ಗ್ಯಾಂಗ್ ರಾತ್ರಿ ವೇಳೆ ವಿವಿಧ ಅಂಗಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸಿದೆ. ರೈತ ಸಂಪರ್ಕ ಕೇಂದ್ರ, ಖಾಸಗಿ ರಸಗೊಬ್ಬರ ಅಂಗಡಿ ಹಾಗೂ ಹಾರ್ಡವೇರ್ ಅಂಗಡಿಗಳ ಶಟರ್ಗಳನ್ನು ಮುರಿದು ಒಳನುಗ್ಗಿರುವ ಕಳ್ಳರು, ಅಂಗಡಿಯಲ್ಲಿದ್ದ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಕಳ್ಳರು ಅಂಗಡಿಗಳ ಶಟರ್ ಮುರಿಯುತ್ತಿರುವ ಹಾಗೂ ಒಳಗೆ ಪ್ರವೇಶಿಸಿ ಕಳ್ಳತನ ನಡೆಸುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ನಾಲ್ವರು ಮುಸುಕುಧಾರಿಗಳು ಗುಂಪಾಗಿ ಬಂದು ಕಳ್ಳತನ ನಡೆಸಿರುವುದು ದೃಶ್ಯಾವಳಿಗಳಲ್ಲಿ ಕಂಡುಬಂದಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಒಂದೇ ರಾತ್ರಿ ಹಲವು ಅಂಗಡಿಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ನಡೆಸಿರುವುದರಿಂದ ಸ್ಥಳೀಯ ವ್ಯಾಪಾರಸ್ಥರು ಹಾಗೂ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಳ್ಳರ ಗ್ಯಾಂಗ್ ಪೂರ್ವನಿಯೋಜಿತವಾಗಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಘಟನೆ ಕುರಿತು ಮಾಹಿತಿ ತಿಳಿದು ಬಸವನ ಬಾಗೇವಾಡಿ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮುಸುಕುಧಾರಿ ಕಳ್ಳರ ಗುರುತು ಪತ್ತೆಹಚ್ಚಲು ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಕಳ್ಳರು ಯಾವ ದಿಕ್ಕಿನಲ್ಲಿ ಪರಾರಿಯಾಗಿದ್ದಾರೆ ಹಾಗೂ ಕಳ್ಳತನವಾದ ವಸ್ತುಗಳ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದಾರೆ.

ಗ್ರಾಮದಲ್ಲಿ ಸರಣಿ ಕಳ್ಳತನ ನಡೆದಿರುವ ಹಿನ್ನೆಲೆಯಲ್ಲಿ ರಾತ್ರಿ ಗಸ್ತು ಹೆಚ್ಚಿಸುವಂತೆ ಸ್ಥಳೀಯರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಅಲ್ಲದೆ, ವ್ಯಾಪಾರಸ್ಥರು ತಮ್ಮ ಅಂಗಡಿಗಳಿಗೆ ಸೂಕ್ತ ಭದ್ರತಾ ವ್ಯವಸ್ಥೆ ಹಾಗೂ ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆಗೆ ಮುಂದಾಗಬೇಕಾದ ಅಗತ್ಯವೂ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಸವನ ಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಕಳ್ಳತನದ ಒಟ್ಟು ಮೊತ್ತ ಹಾಗೂ ನಿಖರವಾಗಿ ಯಾವ ವಸ್ತುಗಳು ಕಳವಾಗಿವೆ ಎಂಬುದನ್ನು ಪೊಲೀಸ್ ತನಿಖೆಯ ನಂತರವೇ ಸ್ಪಷ್ಟವಾಗಬೇಕಿದೆ ಎಂದು ಎಸ್ಪಿ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande