
ವಿಜಯಪುರ, 27 ಆಗಸ್ಟ್ (ಹಿ.ಸ.)
ಆ್ಯಂಕರ್ : ವಿಜಯಪುರ ಜಿಲ್ಲೆಯ ಸಿಂದಗಿ ನಗರದ ಪ್ರಮುಖ ಜಲಮೂಲವಾಗಿರುವ ಕೆರೆಗೆ ನಗರಾಭಿವೃದ್ಧಿ ಸಚಿವರಾದ ಯತೀಂದ್ರ ಸಿದ್ದರಾಮಯ್ಯ ಹಾಗೂ ಶಾಸಕ ಅಶೋಕ್ ಮನಗೂಳಿ ಭೇಟಿ ನೀಡಿ ವೀಕ್ಷಣೆ ನಡೆಸಿದರು.
ಈ ಸಂದರ್ಭದಲ್ಲಿ ಕೆರೆಯ ಪ್ರಸ್ತುತ ಸ್ಥಿತಿಗತಿ, ನಗರದ ಜಲಮೂಲಗಳ ಸಂರಕ್ಷಣೆ, ಕೆರೆಯ ಸಮಗ್ರ ಅಭಿವೃದ್ಧಿ ಹಾಗೂ ಸೌಂದರ್ಯೀಕರಣ ಸೇರಿದಂತೆ ಸುತ್ತಮುತ್ತಲಿನ ಪರಿಸರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕುರಿತು ಸಚಿವರೊಂದಿಗೆ ಸವಿಸ್ತಾರವಾಗಿ ಚರ್ಚೆ ನಡೆಸಲಾಯಿತು.
ಸಿಂದಗಿ ನಗರವು ಭವಿಷ್ಯದಲ್ಲಿ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನಗರದ ಜಲಮೂಲಗಳ ಸಂರಕ್ಷಣೆ ಅತ್ಯಂತ ಅಗತ್ಯವಾಗಿದೆ. ಕೆರೆಗಳ ಸಂರಕ್ಷಣೆಯೊಂದಿಗೆ ಅವುಗಳನ್ನು ಪರಿಸರ ಸ್ನೇಹಿ ರೀತಿಯಲ್ಲಿ ಅಭಿವೃದ್ಧಿಪಡಿಸುವುದರಿಂದ ನಗರದ ಸೌಂದರ್ಯ ಹೆಚ್ಚುವುದರ ಜೊತೆಗೆ, ಮಳೆನೀರು ಸಂಗ್ರಹಣೆ ಹಾಗೂ ಅಂತರ್ಜಲ ಮಟ್ಟ ಕಾಪಾಡುವ ನಿಟ್ಟಿನಲ್ಲಿಯೂ ಮಹತ್ವದ ಪ್ರಯೋಜನವಾಗಲಿದೆ ಎಂಬ ಅಭಿಪ್ರಾಯವನ್ನು ಶಾಸಕ ಅಶೋಕ್ ಮನಗೂಳಿ ಅವರು ಸಚಿವರ ಗಮನಕ್ಕೆ ತಂದರು.
ಕೆರೆಯ ಸುತ್ತಮುತ್ತಲ ಪ್ರದೇಶವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಿ, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವುದು, ಹಸಿರು ಪ್ರದೇಶವನ್ನು ವಿಸ್ತರಿಸುವುದು ಹಾಗೂ ಪರಿಸರ ಸಂರಕ್ಷಣೆಗೆ ಆದ್ಯತೆ ನೀಡುವ ಕುರಿತು ಚರ್ಚೆ ನಡೆಯಿತು. ಕೆರೆಯ ಸ್ವಚ್ಛತೆ, ನೀರಿನ ಸಂರಕ್ಷಣೆ ಹಾಗೂ ಸುತ್ತಲಿನ ಪ್ರದೇಶದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆಯೂ ಸಚಿವರೊಂದಿಗೆ ವಿಚಾರ ವಿನಿಮಯ ನಡೆಸಲಾಯಿತು.
ಸಿಂದಗಿ ನಗರದ ಅಭಿವೃದ್ಧಿಯಲ್ಲಿ ಜಲಮೂಲಗಳ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗುವುದು. ನಗರದ ಕೆರೆಯನ್ನು ಸುಂದರ, ಸ್ವಚ್ಛ ಹಾಗೂ ಪರಿಸರ ಸ್ನೇಹಿ ತಾಣವನ್ನಾಗಿ ರೂಪಿಸುವ ಮೂಲಕ ಸಾರ್ವಜನಿಕರಿಗೆ ಉತ್ತಮ ವಾತಾವರಣ ಕಲ್ಪಿಸುವ ಉದ್ದೇಶ ಹೊಂದಲಾಗಿದೆ ಎಂದು ಶಾಸಕ ಅಶೋಕ್ ಮನಗೂಳಿ ಹೇಳಿದರು.
ನಗರದ ಅಭಿವೃದ್ಧಿ ಯೋಜನೆಗಳಲ್ಲಿ ಕೆರೆ ಹಾಗೂ ಇತರೆ ಜಲಮೂಲಗಳ ಸಂರಕ್ಷಣೆಯನ್ನು ಪ್ರಮುಖವಾಗಿ ಪರಿಗಣಿಸುವಂತೆ ಸಚಿವರಿಗೆ ಮನವಿ ಮಾಡಲಾಗಿದ್ದು, ಈ ಕುರಿತು ಸರ್ಕಾರದ ಮಟ್ಟದಲ್ಲಿ ಅಗತ್ಯ ಸಹಕಾರ ಹಾಗೂ ಕ್ರಮಗಳ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು
---------------
ಹಿಂದೂಸ್ತಾನ್ ಸಮಾಚಾರ್ / jyothi deshpande