
ಕುಡತಿನಿ, 27 ಆಗಸ್ಟ್ (ಹಿ.ಸ.)
ಆ್ಯಂಕರ್ : ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಹಾಗೂ ‘ಪ್ಯಾನ್-ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ’ದ ಅಂಗವಾಗಿ, ಕುಡತಿನಿ ವ್ಯಾಪ್ತಿಯ ವಿವಿಧ ಉದ್ದಿಮೆಗಳ ಮೇಲೆ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ ಟಾಸ್ಕ್ ಫೋರ್ಸ್ ಸಮಿತಿ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಕಾರ್ಯನಿರ್ವಹಿಸುತ್ತಿದ್ದ ಇಬ್ಬರು ಬಾಲಕಾರ್ಮಿಕರು ಹಾಗೂ ಕಿಶೋರ ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ.
ಇದಕ್ಕೂ ಮುನ್ನ ಕುಡತಿನಿಯ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಯಿತು. ಬಳಿಕ ಕುಡತಿನಿ ಹೋಬಳಿ ವ್ಯಾಪ್ತಿಯ ಅಂಗಡಿ-ಮುಂಗಟ್ಟು ಹಾಗೂ ಉದ್ದಿಮೆಗಳ ಮೇಲೆ ಅಧಿಕಾರಿಗಳ ತಂಡ ದಾಳಿ ನಡೆಸಿತು. ತಪಾಸಣೆ ಸಂದರ್ಭದಲ್ಲಿ ಕೆಲಸದಲ್ಲಿ ತೊಡಗಿದ್ದ ಮಕ್ಕಳ ಹೇಳಿಕೆಗಳನ್ನು ಸ್ಥಳದಲ್ಲೇ ದಾಖಲಿಸಿಕೊಂಡು, ನಂತರ ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ಹಾಜರುಪಡಿಸಲಾಯಿತು.
ಇದೇ ಸಂದರ್ಭದಲ್ಲಿ ವ್ಯಾಪಾರಸ್ಥರು ಮತ್ತು ಉದ್ದಿಮೆ ಮಾಲೀಕರಿಗೆ ಕರಪತ್ರ ಹಾಗೂ ಭಿತ್ತಿಪತ್ರಗಳನ್ನು ವಿತರಿಸಿ, ಯಾವುದೇ ಕಾರಣಕ್ಕೂ ಮಕ್ಕಳನ್ನು ದುಡಿಮೆಗೆ ಬಳಸಿಕೊಳ್ಳದಂತೆ ಕಟ್ಟುನಿಟ್ಟಿನ ಜಾಗೃತಿ ಮೂಡಿಸಲಾಯಿತು.
ಈ ಕಾರ್ಯಾಚರಣೆಯಲ್ಲಿ ಬಳ್ಳಾರಿ 2ನೇ ವೃತ್ತದ ಕಾರ್ಮಿಕ ನಿರೀಕ್ಷಕ ಪರಶುರಾಮ್, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ನಿರ್ದೇಶಕ ಮೌನೇಶ್, ಶಿಕ್ಷಣ ಇಲಾಖೆಯ ಟಿ. ಬಸವರಾಜ್, ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಇದಾಯತುಲ್ಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಹೊಸಮನೆ ಜ್ಯೋತಿ, ಪಟ್ಟಣ ಪಂಚಾಯಿತಿಯ ಸೈಯದ್ ಅಲಿ, ಮಕ್ಕಳ ರಕ್ಷಣಾ ಘಟಕದ ಸುಧಾ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಚಂದ್ರಕಲಾ, ರೀಚ್ ಸಂಸ್ಥೆಯ ಸಂಯೋಜಕ ಹನುಮಂತಪ್ಪ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್