
ನವದೆಹಲಿ, 27 ಆಗಸ್ಟ್ (ಹಿ.ಸ.):
ಆ್ಯಂಕರ್:
ನೇಪಾಳದಲ್ಲಿ ಸಂಭವಿಸಿರುವ ದುರಂತದ ಹಿನ್ನೆಲೆಯಲ್ಲಿ ಅಲ್ಲಿ ಸಿಲುಕಿರುವ ಕನ್ನಡಿಗರಿಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧೈರ್ಯ ತುಂಬಿದ್ದಾರೆ. ಸುರಕ್ಷಿತ ಸ್ಥಳದಲ್ಲಿರುವವರು ಅಲ್ಲಿಂದ ಹೊರಬರುವ ಪ್ರಯತ್ನ ಮಾಡದೆ ಪರಿಸ್ಥಿತಿ ಸುಧಾರಿಸುವವರೆಗೆ ಅಲ್ಲಿಯೇ ಇರುವಂತೆ ಅವರು ಸಲಹೆ ನೀಡಿದ್ದಾರೆ.
ನವದೆಹಲಿಯ ಪ್ರವಾಸದಲ್ಲಿರುವ ಡಿ.ಕೆ. ಶಿವಕುಮಾರ್ ಅವರು ಗುರುವಾರ ನೇಪಾಳ ದುರಂತದಲ್ಲಿ ಸಿಲುಕಿರುವ ಕನ್ನಡಿಗ ಮಲ್ಲಿನಾಥ್ ಅವರೊಂದಿಗೆ ವೀಡಿಯೋ ಕರೆ ಮೂಲಕ ಮಾತನಾಡಿ, ಅವರ ಪರಿಸ್ಥಿತಿಯನ್ನು ವಿಚಾರಿಸಿದರು.
“ಧೈರ್ಯವಾಗಿರಿ. ನೀವು ಸುರಕ್ಷಿತ ಸ್ಥಳದಲ್ಲಿದ್ದರೆ ಅಲ್ಲಿಂದ ಹೊರಬರುವ ಪ್ರಯತ್ನ ಮಾಡಬೇಡಿ. ನಿಮ್ಮ ಜೊತೆ ನಮ್ಮ ಸರ್ಕಾರವಿದೆ. ನಿಮ್ಮ ಸಂಕಷ್ಟಕ್ಕೆ ಸರ್ಕಾರ ಸಂಪೂರ್ಣವಾಗಿ ಸ್ಪಂದಿಸಲಿದೆ” ಎಂದು ಮುಖ್ಯಮಂತ್ರಿ ಅಭಯ ನೀಡಿದರು.
ನೇಪಾಳ ಪ್ರವಾಸಕ್ಕೆ ಕರ್ನಾಟಕದಿಂದ ತೆರಳಿರುವ ಕೆಲವರೊಂದಿಗೆ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಮಾಹಿತಿ ಬಂದಿದ್ದು, ಅವರಿಗಾಗಿ ಹುಡುಕಾಟ ಹಾಗೂ ಸಂಪರ್ಕ ಸಾಧಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಮುಖ್ಯಮಂತ್ರಿ ಮಾಧ್ಯಮಗಳಿಗೆ ತಿಳಿಸಿದರು.
“ಯಾರೂ ಎದೆಗುಂದುವ ಅಗತ್ಯವಿಲ್ಲ. ನಾವೆಲ್ಲ ಕನ್ನಡಿಗರು. ಸಂಕಷ್ಟದ ಸಂದರ್ಭದಲ್ಲಿ ನಿಮ್ಮ ಜೊತೆ ನಮ್ಮ ಸರ್ಕಾರ ಇರಲಿದೆ. ಅಗತ್ಯ ನೆರವು ಮತ್ತು ಸುರಕ್ಷಿತ ಸ್ಥಳಾಂತರಕ್ಕೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು” ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.