
ನವದೆಹಲಿ, 27 ಆಗಸ್ಟ್ (ಹಿ.ಸ.):
ಆ್ಯಂಕರ್:
ಹಬ್ಬಗಳ ಋತು ಆರಂಭವಾಗಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಿ ಸ್ಥಿರತೆ ಕಾಪಾಡಲು ಕೇಂದ್ರ ಸರ್ಕಾರ ವ್ಯಾಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಹಾಲು, ಬೇಳೆಕಾಳು, ತರಕಾರಿ ಸೇರಿದಂತೆ ಒಟ್ಟು 41 ಬಗೆಯ ಅಗತ್ಯ ವಸ್ತುಗಳ ಬೆಲೆ, ಬೇಡಿಕೆ ಮತ್ತು ಪೂರೈಕೆಯ ಮೇಲೆ ನಿರಂತರ ನಿಗಾ ವಹಿಸಲಾಗುತ್ತಿದೆ.
ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಅವರ ನಿರ್ದೇಶನದಂತೆ ದೇಶಾದ್ಯಂತ 579 ಕೇಂದ್ರಗಳಲ್ಲಿ ಅಗತ್ಯ ವಸ್ತುಗಳ ಮಾರುಕಟ್ಟೆ ಪರಿಸ್ಥಿತಿಯನ್ನು ಪ್ರತಿದಿನ ಮೇಲ್ವಿಚಾರಣೆ ಮಾಡಲಾಗುತ್ತಿದೆ. ನಾಗರ ಪಂಚಮಿ, ವರಮಹಾಲಕ್ಷ್ಮಿ, ಗಣೇಶ ಚತುರ್ಥಿ, ಓಣಂ, ದುರ್ಗಾ ಪೂಜೆ, ದಸರಾ, ದೀಪಾವಳಿ ಹಾಗೂ ವಿವಾಹ ಋತುವಿನಲ್ಲಿ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಹ್ಲಾದ ಜೋಶಿ ಮಾಧ್ಯಮ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
₹35ಕ್ಕೆ ಈರುಳ್ಳಿ ಮಾರಾಟ
ಈರುಳ್ಳಿ ಬೆಲೆ ಏರಿಕೆ ನಿಯಂತ್ರಣಕ್ಕೆ ವಿಶೇಷ ಆದ್ಯತೆ ನೀಡಿರುವ ಕೇಂದ್ರ ಸರ್ಕಾರ, ಬಫರ್ ದಾಸ್ತಾನಿನಿಂದ ಈರುಳ್ಳಿ ಪೂರೈಕೆಯನ್ನು ಹೆಚ್ಚಿಸಿದೆ. ದೆಹಲಿಯಲ್ಲಿ ಗ್ರಾಹಕರಿಗೆ ಕೆಜಿಗೆ ₹35ರ ದರದಲ್ಲಿ ಈರುಳ್ಳಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲಾಗಿದೆ. ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟ, ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ, ಸಫಲ್ ಮತ್ತು ಕೇಂದ್ರೀಯ ಭಂಡಾರ್‌ಗಳ ಮಳಿಗೆಗಳ ಮೂಲಕವೂ ಇದೇ ದರದಲ್ಲಿ ಈರುಳ್ಳಿ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ದೇಶದ ವಿವಿಧ ಭಾಗಗಳಲ್ಲಿ ಒಟ್ಟಾರೆ 122 ಮಳಿಗೆಗಳು ಹಾಗೂ 90 ಸಂಚಾರಿ ವಾಹನಗಳ ಮೂಲಕ ಈರುಳ್ಳಿ ಚಿಲ್ಲರೆ ಮಾರಾಟ ನಡೆಸಲಾಗುತ್ತಿದೆ. ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಬಫರ್ ದಾಸ್ತಾನಿನಿಂದ ಈರುಳ್ಳಿಯನ್ನು ಸಕಾಲದಲ್ಲಿ ಸಾಗಿಸಲು ಕ್ರಮ ಕೈಗೊಳ್ಳಲಾಗಿದೆ.
‘ಕಾಂದಾ ಎಕ್ಸ್‌ಪ್ರೆಸ್’ ಮೂಲಕ ಸಾಗಣೆ
ಈರುಳ್ಳಿ ಸಾಗಣೆಗೆ ರೈಲು ಮಾರ್ಗಕ್ಕೂ ಆದ್ಯತೆ ನೀಡಲಾಗಿದ್ದು, ಮಹಾರಾಷ್ಟ್ರದ ನಾಸಿಕ್‌ನಿಂದ ನವದೆಹಲಿಗೆ ‘ಕಾಂದಾ ಎಕ್ಸ್‌ಪ್ರೆಸ್’ ರೈಲಿನ ಮೂಲಕ ಈರುಳ್ಳಿ ಸಾಗಣೆ ಆರಂಭಿಸಲಾಗಿದೆ. ಇದರಿಂದ ಹೆಚ್ಚಿನ ಪ್ರಮಾಣದ ಈರುಳ್ಳಿಯನ್ನು ತ್ವರಿತವಾಗಿ ಮಾರುಕಟ್ಟೆಗೆ ತಲುಪಿಸಲು ಸಾಧ್ಯವಾಗಲಿದೆ.
ಚೆನ್ನೈ, ಕೋಲ್ಕತ್ತಾ, ಎರ್ನಾಕುಲಂ, ಗುವಾಹಟಿ, ವಾರಣಾಸಿ, ಲಕ್ನೋ, ಪಾಟ್ನಾ, ಚಂಡೀಗಢ, ಜಮ್ಮು ಮತ್ತು ಅಮೃತಸರ ಸೇರಿದಂತೆ ಹಲವು ನಗರಗಳಿಗೆ ರಸ್ತೆ ಮಾರ್ಗದ ಮೂಲಕವೂ ಈರುಳ್ಳಿ ಸಾಗಿಸಲಾಗುತ್ತಿದೆ.
2 ಲಕ್ಷ ಟನ್ ಈರುಳ್ಳಿ ಖರೀದಿ ಗುರಿ
2026-27ನೇ ಸಾಲಿನಲ್ಲಿ ಬೆಲೆ ಸ್ಥಿರೀಕರಣ ನಿಧಿಯ ಬಫರ್‌ಗಾಗಿ 2 ಲಕ್ಷ ಟನ್ ರಬಿ ಈರುಳ್ಳಿ ಖರೀದಿಸುವ ಗುರಿಯನ್ನು ಕೇಂದ್ರ ಸರ್ಕಾರ ನಿಗದಿಪಡಿಸಿದೆ. ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ ಮತ್ತು ರಾಷ್ಟ್ರೀಯ ಸಹಕಾರಿ ಗ್ರಾಹಕರ ಒಕ್ಕೂಟದ ಮೂಲಕ ಮೇ 15ರಿಂದ ಈವರೆಗೆ ಸುಮಾರು 1.21 ಲಕ್ಷ ಟನ್ ಈರುಳ್ಳಿ ಖರೀದಿಸಲಾಗಿದೆ.
ಕೇಂದ್ರೀಯ ಗೋದಾಮು ನಿಗಮವನ್ನು 2026-27ನೇ ಸಾಲಿನಲ್ಲಿ ಬೆಲೆ ಸ್ಥಿರೀಕರಣ ನಿಧಿಯ ಈರುಳ್ಳಿ ಬಫರ್ ಸಂಗ್ರಹಣೆಗೆ ಇದೇ ಮೊದಲ ಬಾರಿಗೆ ಶೇಖರಣಾ ಸಂಸ್ಥೆಯಾಗಿ ತೊಡಗಿಸಿಕೊಳ್ಳಲಾಗಿದೆ.
ಎಲ್ಲ ರಾಜ್ಯಗಳಲ್ಲೂ ಬೆಲೆ ಮೇಲೆ ನಿಗಾ
ಈರುಳ್ಳಿ ಬೆಲೆ, ಬೇಡಿಕೆ ಮತ್ತು ಲಭ್ಯತೆಯನ್ನು ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಲ್ಲೂ ಸೂಕ್ಷ್ಮವಾಗಿ ಗಮನಿಸುತ್ತಿದೆ. ಮಾರುಕಟ್ಟೆಯಲ್ಲಿ ಸಾಕಷ್ಟು ಪೂರೈಕೆ ಖಚಿತಪಡಿಸುವುದರ ಜತೆಗೆ ಅನಗತ್ಯ ಬೆಲೆ ಏರಿಕೆ ಕಂಡುಬಂದಲ್ಲಿ ಮಧ್ಯಸ್ಥಿಕೆ ವಹಿಸಿ ಗ್ರಾಹಕರ ಹಿತಾಸಕ್ತಿ ರಕ್ಷಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತ ಉಂಟಾಗದಂತೆ ಬಫರ್ ದಾಸ್ತಾನಿನಿಂದ ಈರುಳ್ಳಿ ಬಿಡುಗಡೆ ಮಾಡಲಾಗುತ್ತಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ನಾಸಿಕ್‌ನಿಂದ ನವದೆಹಲಿಗೆ ರೈಲು ಮೂಲಕ ಈರುಳ್ಳಿ ಸಾಗಣೆ ಆರಂಭಿಸಿರುವುದು ಈ ಕ್ರಮದ ಪ್ರಮುಖ ಭಾಗವಾಗಿದೆ.
41 ಅಗತ್ಯ ವಸ್ತುಗಳ ಮೇಲೆ ದೈನಂದಿನ ನಿಗಾ
ಈರುಳ್ಳಿ ಮತ್ತು ಬೇಳೆಕಾಳು ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರುಮುಖವಾಗದಂತೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ನಿರಂತರ ಮೇಲ್ವಿಚಾರಣೆ ನಡೆಸುತ್ತಿದೆ. ದೇಶಾದ್ಯಂತ 579 ಕೇಂದ್ರಗಳಲ್ಲಿ ಒಟ್ಟು 41 ಬಗೆಯ ಅಗತ್ಯ ವಸ್ತುಗಳ ಪೂರೈಕೆ, ಬೇಡಿಕೆ, ಲಭ್ಯತೆ ಹಾಗೂ ಬೆಲೆಗಳ ಮಾಹಿತಿಯನ್ನು ಸಂಗ್ರಹಿಸಿ ಪರಿಶೀಲಿಸಲಾಗುತ್ತಿದೆ.
ಪ್ರಸ್ತುತ ಮಾರುಕಟ್ಟೆಯಲ್ಲಿ ಟೊಮೆಟೊ, ಆಲೂಗಡ್ಡೆ ಮತ್ತು ಕಡಲೆಬೇಳೆಯ ಬೆಲೆ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ತೊಗರಿ, ಕಡಲೆ, ಮಸೂರ್, ಉದ್ದು ಮತ್ತು ಹೆಸರುಕಾಳು ಸೇರಿದಂತೆ ಪ್ರಮುಖ ಬೇಳೆಕಾಳುಗಳ ಬೆಲೆ ಕೂಡ ಸ್ಥಿರವಾಗಿದೆ. ಟೊಮೆಟೊ ಮತ್ತು ಆಲೂಗಡ್ಡೆಯಂತಹ ಅಗತ್ಯ ತರಕಾರಿಗಳ ಬೆಲೆಯ ಮೇಲೂ ಸರ್ಕಾರ ನಿಗಾ ಮುಂದುವರಿಸಿದೆ.
ಅಗತ್ಯ ವಸ್ತುಗಳ ಸರಾಸರಿ ಚಿಲ್ಲರೆ ದರ
ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಅಗತ್ಯ ವಸ್ತುಗಳ ಸರಾಸರಿ ಚಿಲ್ಲರೆ ಬೆಲೆ ಈ ಕೆಳಗಿನಂತಿದೆ:
- ಟೊಮೆಟೊ — ಕೆಜಿಗೆ ₹38.33
- ಆಲೂಗಡ್ಡೆ — ಕೆಜಿಗೆ ₹22.63
- ಕಡಲೆಬೇಳೆ — ಕೆಜಿಗೆ ₹86.71
- ಗೋಧಿ ಹಿಟ್ಟು — ಕೆಜಿಗೆ ₹40.48
- ತೊಗರಿಬೇಳೆ — ಕೆಜಿಗೆ ₹123.30
- ಈರುಳ್ಳಿ — ಕೆಜಿಗೆ ₹37.87
- ಹಾಲು — ಲೀಟರ್‌ಗೆ ₹60.82
ಗ್ರಾಹಕರ ಹಿತ ರಕ್ಷಣೆಗೆ ಬದ್ಧ
“ಹಬ್ಬಗಳ ಋತುವಿನಲ್ಲಿ 41 ಅಗತ್ಯ ವಸ್ತುಗಳ ಬೆಲೆ ಏರಿಳಿತ ನಿಯಂತ್ರಣಕ್ಕಾಗಿ ದೇಶೀಯ ಮಾರುಕಟ್ಟೆಗಳಲ್ಲಿ ನಿರಂತರ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಗ್ರಾಹಕರ ಹಿತಾಸಕ್ತಿ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಮಾರುಕಟ್ಟೆ ಪರಿಸ್ಥಿತಿಗಳಿಗೆ ಅನುಗುಣವಾಗಿ ಬಫರ್ ದಾಸ್ತಾನಿನಿಂದ ಅಗತ್ಯ ವಸ್ತುಗಳನ್ನು ಬಿಡುಗಡೆ ಮಾಡಲಾಗುತ್ತಿದೆ” ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.