ಬಿವಿವಿ ಸಂಘದ ಸಂಸ್ಥಾಪಕರ ದಿನಾಚರಣೆ
ಬಾಗಲಕೋಟೆ, 27 ಆಗಸ್ಟ್ (ಹಿ.ಸ.) ಆ್ಯಂಕರ್ : ಬಿವಿವಿ ಸಂಘದ ಸಂಸ್ಥಾಪಕರಾದ ಪರಮಪೂಜ್ಯ ಮ.ನಿ.ಪ್ರ. ಬೀಳೂರು ಗುರುಬಸವ ಮಹಾಸ್ವಾಮಿಗಳವರ ಶ್ರಾವಣ ಮಾಸದ ಪುಣ್ಯಾರಾಧನೆಯ ಅಂಗವಾಗಿ ಬಾಗಲಕೋಟೆಯ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಂಸ್ಥಾಪಕರ ದಿನಾಚರಣೆ ಹಾಗೂ ಧನ್ವಂತರಿ ಹೋಮ ಕಾರ್ಯಕ್ರಮವನ್ನು ಭಕ್ತಿಭ
ಪೂಜೆ


ಬಾಗಲಕೋಟೆ, 27 ಆಗಸ್ಟ್ (ಹಿ.ಸ.)

ಆ್ಯಂಕರ್ : ಬಿವಿವಿ ಸಂಘದ ಸಂಸ್ಥಾಪಕರಾದ ಪರಮಪೂಜ್ಯ ಮ.ನಿ.ಪ್ರ. ಬೀಳೂರು ಗುರುಬಸವ ಮಹಾಸ್ವಾಮಿಗಳವರ ಶ್ರಾವಣ ಮಾಸದ ಪುಣ್ಯಾರಾಧನೆಯ ಅಂಗವಾಗಿ ಬಾಗಲಕೋಟೆಯ ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸಂಸ್ಥಾಪಕರ ದಿನಾಚರಣೆ ಹಾಗೂ ಧನ್ವಂತರಿ ಹೋಮ ಕಾರ್ಯಕ್ರಮವನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಬಾಗಲಕೋಟೆಯ ಮಾಜಿ ಶಾಸಕರು ಹಾಗೂ ಬಿವಿವಿ ಸಂಘದ ಕಾರ್ಯಾಧ್ಯಕ್ಷರಾದ ವೀರಣ್ಣ ಚರಂತಿಮಠ ಅವರು ಭಾಗವಹಿಸಿ, ಸಂಸ್ಥಾಪಕರಾದ ಪರಮಪೂಜ್ಯ ಬೀಳೂರು ಗುರುಬಸವ ಮಹಾಸ್ವಾಮಿಗಳವರ ಪುಣ್ಯಸ್ಮರಣೆ ಮಾಡಿದರು. ಶಿಕ್ಷಣ, ಆರೋಗ್ಯ ಹಾಗೂ ಸಮಾಜ ಸೇವೆಯ ಕ್ಷೇತ್ರಗಳಲ್ಲಿ ಬಿವಿವಿ ಸಂಘವು ಸಲ್ಲಿಸುತ್ತಿರುವ ಸೇವೆಯನ್ನು ಸ್ಮರಿಸಿ, ಸಂಸ್ಥಾಪಕರ ಆಶಯಗಳನ್ನು ಮುಂದುವರಿಸುವ ಸಂಕಲ್ಪದೊಂದಿಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದ ಅಂಗವಾಗಿ ಆರೋಗ್ಯದ ಆರಾಧ್ಯ ದೈವ ಧನ್ವಂತರಿಯ ಸ್ಮರಣೆಯೊಂದಿಗೆ ಧನ್ವಂತರಿ ಹೋಮವನ್ನು ಸಾಂಪ್ರದಾಯಿಕ ವಿಧಿ-ವಿಧಾನಗಳಂತೆ ನೆರವೇರಿಸಲಾಯಿತು. ಯಲಗೂರಿನ ಶ್ರೀ ಯಲಗೂರೇಶ್ವರ ದೇವಸ್ಥಾನದ ಅರ್ಚಕರಾದ ಗೋಪಾಲಾಚಾರ್ಯ ಹಿಪ್ಪರಗಿ ಅವರು ವೇದಘೋಷ ಹಾಗೂ ಮಂತ್ರ ಪಠಣಗಳೊಂದಿಗೆ ಹೋಮಕ್ಕೆ ಚಾಲನೆ ನೀಡಿ, ಶಾಸ್ತ್ರೋಕ್ತವಾಗಿ ಧನ್ವಂತರಿ ಹೋಮವನ್ನು ನೆರವೇರಿಸಿದರು.

ಧನ್ವಂತರಿ ಹೋಮದ ಸಂದರ್ಭದಲ್ಲಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಸೇರಿದಂತೆ ಗಣ್ಯರು ಭಾಗವಹಿಸಿ, ಆರೋಗ್ಯ ಮತ್ತು ಲೋಕಕಲ್ಯಾಣಕ್ಕಾಗಿ ಪ್ರಾರ್ಥಿಸಿದರು. ಶ್ರಾವಣ ಮಾಸದ ಪುಣ್ಯಾರಾಧನೆಯ ಹಿನ್ನೆಲೆಯಲ್ಲಿ ನಡೆದ ಈ ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಆಧ್ಯಾತ್ಮಿಕ ವಾತಾವರಣದಿಂದ ಕೂಡಿತ್ತು.

ಈ ಸಂದರ್ಭದಲ್ಲಿ ಬಿವಿವಿ ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ, ಹೋಮಿಯೋಪತಿ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರುಣ ಹೂಲಿ, ಪ್ರಾಧ್ಯಾಪಕರಾದ ಡಾ. ರವಿ ಕೋಟೆಣ್ಣವರ, ಡಾ. ತೃಪ್ತಿ ಶಿಂದೆ, ಡಾ. ವಿಜಯಲಕ್ಷ್ಮಿ ಪಾಟೀಲ, ಡಾ. ಜಯಲಕ್ಷ್ಮಿ ಪಾಟೀಲ, ಡಾ. ಐಶ್ವರ್ಯಾ ಪಾಟೀಲ, ಡಾ. ಸುಧೀರ ಬೆಟಗೇರಿ ಸೇರಿದಂತೆ ಮಹಾವಿದ್ಯಾಲಯದ ಸಿಬ್ಬಂದಿ ಹಾಗೂ ಗಣ್ಯರು ಉಪಸ್ಥಿತರಿದ್ದರು.

ಸಂಸ್ಥಾಪಕರ ದಿನಾಚರಣೆ ಹಾಗೂ ಧನ್ವಂತರಿ ಹೋಮದ ಮೂಲಕ ಪರಮಪೂಜ್ಯ ಬೀಳೂರು ಗುರುಬಸವ ಮಹಾಸ್ವಾಮಿಗಳವರ ಸಮಾಜಮುಖಿ ಚಿಂತನೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಮೇಲಿನ ಕಾಳಜಿ ಹಾಗೂ ಸೇವಾ ಪರಂಪರೆಯನ್ನು ಸ್ಮರಿಸಲಾಯಿತು. ಬಿವಿವಿ ಸಂಘವು ಮುಂದಿನ ದಿನಗಳಲ್ಲಿಯೂ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಗುಣಮಟ್ಟದ ಸೇವೆಯನ್ನು ವಿಸ್ತರಿಸುವ ಮೂಲಕ ಸಂಸ್ಥಾಪಕರ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂಬ ಆಶಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

---------------

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande