
ಬೆಂಗಳೂರು, 24 ಆಗಸ್ಟ್ (ಹಿ.ಸ.) ಆ್ಯಂಕರ್:
ಬಹುಕೋಟಿ ರೂಪಾಯಿ ಕರ್ನಾಟಕ ದಲಿತ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಚಿವ ಬಿ. ನಾಗೇಂದ್ರ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷ (ಬಿಜೆಪಿ) ವತಿಯಿಂದ ಸೋಮವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯ ಬಳಿಕ ಒಮ್ಮೆಗೆ ವಿಧಾನಸೌಧ ಮುತ್ತಿಗೆ ಹಾಕಲು ಕೇಸರಿಪಡೆ ರಣತಂತ್ರ ರೂಪಿಸಿತ್ತು.
ಹೋರಾಟವನ್ನು ಯಶಸ್ವಿಗೊಳಿಸಲು ಬಿಜೆಪಿ ನಾಯಕರು ಮೂರು ಪ್ರತ್ಯೇಕ ತಂಡಗಳಲ್ಲಿ ರಣತಂತ್ರ ರೂಪಿಸಿದ್ದರು. ಇದರ ಭಾಗವಾಗಿ ಫ್ರೀಡಂ ಪಾರ್ಕ್ನಲ್ಲಿ ಒಂದು ತಂಡದಿಂದ ಬೃಹತ್ ಪ್ರತಿಭಟನಾ ಸಭೆ ನಡೆಯಿತು. ಮತ್ತೊಂದೆಡೆ, ವಿಧಾನಸೌಧ ಮತ್ತು ವಿಕಾಸಸೌಧ ಮುತ್ತಿಗೆ ಹಾಕಲು ಇನ್ನುಳಿದ ಎರಡು ತಂಡಗಳು ಕಸರತ್ತು ನಡೆಸಿದವು.
ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ಫ್ರೀಡಂ ಪಾರ್ಕ್ ಹಾಗೂ ವಿಧಾನಸೌಧ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು. ವಿಕಾಸಸೌಧದ ಗೇಟ್ ಬಳಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನಾಕಾರರು ವಿಧಾನಸೌಧದೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತಳ್ಳಾಟ-ನೂಕಾಟ ಉಂಟಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಕರ್ತವ್ಯಕ್ಕೆ ಅಡ್ಡಿಪಡ1ದ ಹಿನ್ನೆಲೆಯಲ್ಲಿ ಆರ್. ಅಶೋಕ್, ಬಿ.ವೈ. ವಿಜಯೇಂದ್ರ ಸೇರಿದಂತೆ ಹಲವು ಪ್ರಮುಖ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಹಾಗೂ ಹಗರಣದ ನೈತಿಕ ಹೊಣೆ ಹೊತ್ತು ಸಚಿವ ನಾಗೇಂದ್ರ ಅವರು ರಾಜೀನಾಮೆ ನೀಡುವವರೆಗೂ ರಾಜ್ಯಾದ್ಯಂತ ಹೋರಾಟ ಮುಂದುವರಿಸುವುದಾಗಿ ಬಿಜೆಪಿ ನಾಯಕರು ಎಚ್ಚರಿಕೆ ನೀಡಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R