
ಬೆಂಗಳೂರು, 24 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಜಧಾನಿಯ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನಾಕಾರರಿಗಾಗಿ ಬೃಹತ್ ಮೊತ್ತದಲ್ಲಿ ನಿರ್ಮಿಸಲಾಗಿರುವ ನೂತನ ಹೈಟೆಕ್ ಶೆಡ್ ಮಾದರಿಯ ಕಟ್ಟಡದ ಬಳಕೆಗೆ ಬಿಬಿಎಂಪಿ ದಿನವೊಂದಕ್ಕೆ ₹1 ಲಕ್ಷ ಬಾಡಿಗೆ ನಿಗದಿಪಡಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಪ್ರತಿಭಟನೆ ನಿರತರಿಗೆ ನೆರಳು, ಕುಡಿಯುವ ನೀರು ಹಾಗೂ ಶೌಚಾಲಯದಂತಹ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಸದುದ್ದೇಶದಿಂದ ಕೋಟ್ಯಂತರ ರೂಪಾಯಿ ಸಾರ್ವಜನಿಕ ಹಣವನ್ನು ವೆಚ್ಚ ಮಾಡಿ ಈ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲಾಗಿದೆ. ಆದರೆ, ದಿನಕ್ಕೊಂದು ಲಕ್ಷ ರೂಪಾಯಿ ಬಾಡಿಗೆ ಪಾವತಿಸಲು ಯಾವುದೇ ಸಂಘಟನೆಗಳು ಅಥವಾ ಹೋರಾಟಗಾರರು ಮುಂದೆ ಬಾರದ ಕಾರಣ, ಈ ಹೈಟೆಕ್ ಕಟ್ಟಡವು ಸದ್ಯ ಸಂಪೂರ್ಣ ಬಳಕೆಯಿಲ್ಲದೆ ಪಾಳುಬಿದ್ದಿದೆ.
ನ್ಯಾಯಾಲಯದ ಆದೇಶದಂತೆ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ಫ್ರೀಡಂ ಪಾರ್ಕ್ ಒಂದೇ ನಿರ್ದಿಷ್ಟ ಸ್ಥಳವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧಡೆಯಿಂದ ಆಗಮಿಸುವ ಬಡ ಹೋರಾಟಗಾರರು, ರೈತರು ಹಾಗೂ ಕಾರ್ಮಿಕರು ಅನಿವಾರ್ಯವಾಗಿ ಮಳೆ ಮತ್ತು ಸುಡುವ ಬಿಸಿಲಿನಲ್ಲೇ ದಿನಗಟ್ಟಲೆ ಕುಳಿತು ಪ್ರತಿಭಟನೆ ಮುಂದುವರಿಸುವಂತಾಗಿದೆ. ಸರ್ಕಾರದ ಈ ದುಬಾರಿ ಬಾಡಿಗೆ ನೀತಿಯಿಂದಾಗಿ ಮೂಲಭೂತ ಸೌಲಭ್ಯಗಳು ಬಡ ಜನರಿಗೆ ಮರೀಚಿಕೆಯಾಗಿ ಉಳಿದಿವೆ.
ಪ್ರಜಾಸತ್ತಾತ್ಮಕ ಮೌಲ್ಯಗಳ ರಕ್ಷಣೆಗಾಗಿ ಹೋರಾಟ ನಡೆಸುವ ಜನಸಾಮಾನ್ಯರಿಗೆ ನೆರವಾಗಬೇಕಾದ ಸ್ಥಳೀಯ ಆಡಳಿತವು ಇಂತಹ ಭಾರಿ ಮೊತ್ತದ ಶುಲ್ಕ ವಿಧಿಸಿರುವುದು ಅಕ್ಷಮ್ಯ ಎಂದು ರೈತ ಮುಖಂಡರು ಹಾಗೂ ಸಾಮಾಜಿಕ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಬಿಬಿಎಂಪಿಯು ಈ ದುಬಾರಿ ಬಾಡಿಗೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕು ಅಥವಾ ಬಡವರ ಪರ ಹೋರಾಟಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಗಣನೀಯವಾಗಿ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R