
ಬಾಗಲಕೋಟೆ, 24 ಆಗಸ್ಟ್ (ಹಿ.ಸ.)
ಆ್ಯಂಕರ್ : ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ವೀರಶೈವ ತರುಣ ಸೇವಾ ಸಂಘ ಹಾಗೂ ಎನ್.ಸಿ. ಅಥಣಿ ಕಲ್ಯಾಣ ಮಂಟಪ, ವಿದ್ಯಾಗಿರಿ ಇವರ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರತಿವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತಿಭಾವದಿಂದ ಹಮ್ಮಿಕೊಳ್ಳಲಾಯಿತು.
ಇಂಜಿನಿಯರಿಂಗ್ ಕಾಲೇಜು ವೃತ್ತದಲ್ಲಿರುವ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಶ್ರಾವಣ ಮಾಸದ ಎರಡನೇ ಸೋಮವಾರದ ಅಂಗವಾಗಿ ಸೋಮವಾರ ಮುಂಜಾನೆ ವಿಶೇಷ ರುದ್ರಾಭಿಷೇಕ ಹಾಗೂ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು. ನಂತರ ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಹಾಗೂ ಸಾರ್ವಜನಿಕರಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಶ್ರೀ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡು, ಶ್ರೀ ಕಾಶಿ ವಿಶ್ವನಾಥನ ದರ್ಶನ ಪಡೆದರು. ಶ್ರಾವಣ ಮಾಸವು ಶಿವನ ಆರಾಧನೆಗೆ ವಿಶೇಷ ಮಹತ್ವ ಹೊಂದಿರುವ ಪವಿತ್ರ ಮಾಸವಾಗಿದ್ದು, ಈ ಸಂದರ್ಭದಲ್ಲಿ ದೇವರಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಭಕ್ತರಿಗೆ ಆಧ್ಯಾತ್ಮಿಕ ಅನುಭವ ಕಲ್ಪಿಸುವ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದರು.
ಪ್ರತಿ ವರ್ಷ ಶ್ರಾವಣ ಮಾಸದ ಸಂದರ್ಭದಲ್ಲಿ ಸಂಘ-ಸಂಸ್ಥೆಗಳ ವತಿಯಿಂದ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಭಕ್ತರಿಗೆ ಸೇವೆ ಸಲ್ಲಿಸಲಾಗುತ್ತಿದೆ. ಈ ಬಾರಿ ಕೂಡ ಶ್ರದ್ಧಾ-ಭಕ್ತಿಯಿಂದ ರುದ್ರಾಭಿಷೇಕ ನೆರವೇರಿಸಿ, ನಂತರ ಅನ್ನಸಂತರ್ಪಣೆ ಆಯೋಜಿಸಿರುವುದು ಶ್ಲಾಘನೀಯವಾಗಿದೆ ಎಂದು ವೀರಣ್ಣ ಚರಂತಿಮಠ ಮೆಚ್ಚುಗೆ ವ್ಯಕ್ತಪಡಿಸಿದರು.
ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಯ ಸಂದರ್ಭದಲ್ಲಿ ದೇವಸ್ಥಾನದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಕಾಶಿ ವಿಶ್ವನಾಥನ ದರ್ಶನ ಪಡೆದು, ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ದೇವಸ್ಥಾನದ ಆವರಣದಲ್ಲಿ ಶ್ರಾವಣ ಮಾಸದ ಭಕ್ತಿಗೀತೆಗಳು ಹಾಗೂ ಶಿವನಾಮಸ್ಮರಣೆಯೊಂದಿಗೆ ಧಾರ್ಮಿಕ ವಾತಾವರಣ ನಿರ್ಮಾಣವಾಗಿತ್ತು.
ವೀರಶೈವ ತರುಣ ಸೇವಾ ಸಂಘದ ಅಧ್ಯಕ್ಷ ರುದ್ರಪ್ಪ ಅಕ್ಕಿಮರಡಿ, ಮಹಾಂತೇಶ ಶೆಟ್ಟರ ಸೇರಿದಂತೆ ಸಂಘದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಹಾಗೂ ಅನೇಕ ಭಕ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / jyothi deshpande