
ಬೆಂಗಳೂರು, 24 ಆಗಸ್ಟ್ (ಹಿ.ಸ.):
ಆ್ಯಂಕರ್:
ರಾಜ್ಯದಲ್ಲಿ ಬೌದ್ಧ ಸಮುದಾಯದ ಅಭಿವೃದ್ಧಿಗಾಗಿ ನೂತನವಾಗಿ ಘೋಷಿಸಲಾಗಿರುವ ಬೌದ್ಧ ಅಭಿವೃದ್ಧಿ ನಿಗಮವನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಹಿಂಪಡೆದು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ತರಬೇಕು ಎಂದು ಬೌದ್ಧ ಬಿಕ್ಕುಗಳ ನಿಯೋಗ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದೆ.
ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಜಿಗ್ಮೇಟ್ ವಾಂಗ್ಡೋಸ್ ಜ್ಯೋತಿ ನೇತೃತ್ವದಲ್ಲಿ ದೇಶದ ವಿವಿಧ ರಾಜ್ಯಗಳ ಬೌದ್ಧ ಬಿಕ್ಕುಗಳನ್ನು ಒಳಗೊಂಡ ನಿಯೋಗ ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಮನವಿ ಪತ್ರ ನೀಡಿತು. ಬೌದ್ಧ ಬಿಕ್ಕುಗಳಾದ ಲೋಬ್ಸಂಗ್ ನೋರ್ಬು, ಪ್ಯಾನಿಚೈಟೊ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಬೌದ್ಧ ಸಮುದಾಯದ ಬಹುದಿನಗಳ ಬೇಡಿಕೆಯಾಗಿದ್ದ ಪ್ರತ್ಯೇಕ ಅಭಿವೃದ್ಧಿ ಮಂಡಳಿ/ನಿಗಮ ರಚನೆಗೆ ಅವಕಾಶ ಕಲ್ಪಿಸಿರುವುದಕ್ಕೆ ನಿಯೋಗ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿತು.
ಕ್ರಿಶ್ಚಿಯನ್ ಅಭಿವೃದ್ಧಿ ಪ್ರಾಧಿಕಾರದ ಮಾದರಿಯಲ್ಲಿ ಬೌದ್ಧ ಅಭಿವೃದ್ಧಿ ನಿಗಮವನ್ನೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಡಿಯಲ್ಲೇ ಸ್ಥಾಪಿಸಿ, ಸಮುದಾಯದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ನಿಯೋಗ ಮನವಿ ಮಾಡಿದೆ.
---------------
ಹಿಂದೂಸ್ತಾನ್ ಸಮಾಚಾರ್ / Rakesh.M.B.